‘ನೀವು ಗೆಲ್ಲಿ ಜತೆಗೊಬ್ಬರನ್ನು ಗೆಲ್ಲಿಸಿ’ : ಚುನಾವಣೆಗೆ ಬಿಜೆಪಿ ಹೊಸ ಕಾರ್ಯತಂತ್ರ

Social Share

ಬೆಂಗಳೂರು,ಅ.18- ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಹೊಸ ಹೊಸ ಕಾರ್ಯತಂತ್ರಗಳನ್ನು ರೂಪಿಸುತ್ತಿರುವ ಬಿಜೆಪಿ ಈ ಬಾರಿ ಪ್ರಭಾವಿ ನಾಯಕರಿಗೆ, ನೀವು ಗೆಲ್ಲಿ ಜೊತೆಗೊಬ್ಬರನ್ನು ಗೆಲ್ಲಿಸಿ ಎಂಬ ಟಾಸ್ಕ್ ನೀಡಲು ಮುಂದಾಗಿದೆ.

ಸುಮಾರು 25ಕ್ಕೂ ಹೆಚ್ಚು ಪ್ರಭಾವಿ ನಾಯಕ ರನ್ನು ಗುರುತಿಸಿರುವ ಬಿಜೆಪಿ ವರಿಷ್ಠರು ತಾವು ಪ್ರತಿನಿಸುವ ಕ್ಷೇತ್ರದ ಜೊತೆಗೆ ಪಕ್ಕದ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯನ್ನು ನೀಡಿದೆ.

ಉತ್ತರಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾ ಸೇರಿದಂತೆ ಮತ್ತಿತರ ರಾಜ್ಯಗಳಲ್ಲಿ ಈ ತಂತ್ರವನ್ನು ಅನುಸರಿಸಿದ್ದು, ಬಿಜೆಪಿಗೆ ವರವಾಗಿ ಪರಿಣಮಿಸಿತ್ತು. ಈಗ ಇದೇ ತಂತ್ರವನ್ನು ರಾಜ್ಯದಲ್ಲಿ ರೂಪಿಸಿದ್ದು, ಪ್ರಭಾವಿ ನಾಯಕರು ಹೆಚ್ಚುವರಿಯಾಗಿ ಮತ್ತೊಂದು ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ನೀಡಲಾಗಿದೆ.

ಅಭ್ಯರ್ಥಿಗಳ ವರ್ಚಸ್ಸು, ಪ್ರಭಾವ, ಜಾತಿ, ಸಮುದಾಯ, ಹಿನ್ನಲೆ , ಕ್ಷೇತ್ರ ದಲ್ಲಿರುವ ಹಿಡಿತ ಇದೆಲ್ಲವನ್ನು ಮಾನ ದಂಡವಾಗಿಟ್ಟುಕೊಂಡು ನೀವು ಗೆಲ್ಲಿ ಮತ್ತೊಬ್ಬನನ್ನು ಗೆಲ್ಲಿಸಿ ಎಂಬ ಹೊಸ ಕಾರ್ಯತಂತ್ರ ರೂಪಿಸಲಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಹಿಡಿದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಸಚಿವರು, ಶಾಸಕರು ಸೇರಿದಂತೆ ಸುಮಾರು 25 ಮಂದಿ ಪ್ರಭಾವಿಗಳಿಗೆ ಈ ಟಾಸ್ಕ್ ನೀಡಲಾಗಿದೆ.

ಪಕ್ಕದ ಕ್ಷೇತ್ರದ ಮೇಲೂ ತಮಗಿರುವ ಪ್ರಭಾವವನ್ನು ಬೀರಿದರೆ ಕನಿಷ್ಟ 10ರಿಂದ 15 ಕ್ಷೇತ್ರಗಳಲ್ಲಾದರೂ ಫಲಿತಾಂಶ ಕಾಣಬಹುದು. ಹೀಗಾಗಿ ನಿಮ್ಮ ಕ್ಷೇತ್ರಕ್ಕೆ ನೀಡುವಷ್ಟು ಗಮನವನ್ನು ಪಕ್ಕದ ಕ್ಷೇತ್ರಕ್ಕೂ ನೀಡಬೇಕೆಂದು ಸೂಚನೆ ಕೊಡಲಾಗಿದೆ.

ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಪ್ರಭಾವಿ ನಾಯಕರಾಗಿರುವುದರಿಂದ 224 ಕ್ಷೇತ್ರಗಳಲ್ಲೂ ಪಕ್ಷದ ಪರ ಪ್ರಚಾರ ನಡೆಸಲಿದ್ದಾರೆ. ಅವರು ಪ್ರತಿನಿಸುವ ಶಿಕಾರಿಪುರದ ಜೊತೆಗೆ ಪಕ್ಕದ ಸಾಗರ, ಸೊರಬ, ಶಿವಮೊಗ್ಗ ನಗರ ಮತ್ತು ಗ್ರಾಮೀಣ ಕ್ಷೇತ್ರಗಳನ್ನು ಗೆಲ್ಲಿಸುವ ಹೊಣೆಗಾರಿಕೆ ನೀಡಲಾಗುತ್ತದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಬಿಎಸ್‍ವೈ ಅವರಂತೆ ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗಿರುವುದರಿಂದ ಅವರಿಗೆ ರ್ನಿಷ್ಟವಾದ ಕ್ಷೇತ್ರಗಳನ್ನು ನೀಡಿಲ್ಲ.

ಶಿವಮೊಗ್ಗದವರೇ ಆದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಶಿವಮೊಗ್ಗ ನಗರದ ಜೊತೆಗೆ ಶಿವಮೊಗ್ಗ ಗ್ರಾಮಾಂತರ, ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ತೀರ್ಥಹಳ್ಳಿ ಜೊತೆಗೆ ಪಕ್ಕದ ಭದ್ರಾವತಿ ಗೆಲ್ಲಿ ಸುವ ಹೊಣೆಗಾರಿಕೆಯನ್ನು ಕೊಡಲಾಗಿದೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರಿಗೆ ಹೊನ್ನಾಳಿ ಜೊತೆಗೆ ಹರಿಹರ ಕ್ಷೇತ್ರವನ್ನು ವಹಿಸಲಾಗಿದೆ. ಇದೇ ರೀತಿ ಸಚಿವರಾದ ಆರ್.ಅಶೋಕ್, ಅಶ್ವಥ್ ನಾರಾಯಣ, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಮುನಿರತ್ನ, ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಸುನೀಲ್‍ಕುಮಾರ್.ವಿ ಸೇರಿದಂತೆ ಇನ್ನು ಪ್ರಭಾವಿ ನಾಯಕರಿಗೆ ಹೆಚ್ಚುವರಿ ಕ್ಷೇತ್ರಗಳನ್ನು ವಹಿಸಲಾಗಿದೆ.

ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಲಕ್ಷಣ್ ಸವದಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಮತ್ತಿತರರಿಗೂ ಹೊಣೆಗಾರಿಕೆ ನೀಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಸಚಿವರಾಗಿರುವ ಮುನಿರತ್ನ, ಎಂಟಿಬಿ ನಾಗರಾಜ್ ಹಾಗೂ ಡಾ.ಕೆ.ಸುಧಾಕರ್ ಅವರಿಗೆ ಮೂರು ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ.

ವಿಶೇಷವಾಗಿ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ, ಬೆಂಗಳೂರುನಗರ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಚಿತ್ರದುರ್ಗ, ಕಲಬುರಗಿ ಹೀಗೆ ಬಿಜೆಪಿ ಪ್ರಾಬಲ್ಯ ಹೊಂದಿರುವ ಜಿಲ್ಲೆಗಳಲ್ಲಿ ಈ ತಂತ್ರವನ್ನು ಅನುಸರಿಸಲಿದೆ.

Articles You Might Like

Share This Article