ಬೆಂಗಳೂರು, ಸೆ.4- ಇದೇ ತಿಂಗಳ 8 ರಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಜನೋತ್ಸಹ ಕಾರ್ಯಕ್ರಮದ ಮೂಲಕ ಆಡಳಿತರೂಢ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಗೆ ಅಧಿಕೃತವಾಗಿ ರಣಕಹಳೆ ಮೊಳಗಿಸಲಿದೆ.
ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಭದ್ರಕೋಟೆಯಾಗಿರುವ ಈ ಭಾಗದಲ್ಲಿ ಮಿಷನ್ 50 ಗುರಿಯೊಂದಿಗೆ ಜನಾತ್ಸೋಹ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಬಿಜೆಪಿ ತೀರ್ಮಾನಿಸಿದೆ.
ಈ ಸಂಬಂಧ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಭಾಗಿಯಾಗಿದ್ದು, ಜನೋತ್ಸವ ಸಮಾರಂಭದ ಸಿದ್ದತೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಜನೋತ್ಸವ ಯಶಸ್ಸಿನ ಕುರಿತು ಮಾತುಕತೆ ನಡೆಸಿದರು. ಮಂಗಳೂರಿನಲ್ಲಿ ನಡೆದ ಮೋದಿ ಕಾರ್ಯಕ್ರಮ ಯಶಸ್ವಿಯಾಗಿದ್ದು, ಅದಕ್ಕೂ ದೊಡ್ಡ ಮಟ್ಟದ ಯಶಸ್ಸು ಸರ್ಕಾರದ ಸಾಧನಾ ಸಮಾವೇಶಕ್ಕೆ ಸಿಗಬೇಕು. ಅದಕ್ಕೆ ಬೇಕಾದ ಸಿದ್ಧತೆಗಳ ಕುರಿತು ಮಾತುಕತೆ ನಡೆಸಲಾಯಿತು. ಬರುವ ಜನರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಲೋಪವಾಗದಂತೆ ನೋಡಿಕೊಳ್ಳುವ ಕುರಿತು ಚರ್ಚಿಸಲಾಗಿದೆ.
ಸಮಾರಂಭ ಯಾವ ರೀತಿ ನಡೆಸಬೇಕು, ಯಾವ ರೀತಿಯ ಸಂದೇಶಗಳನ್ನು ಸಮಾವೇಶದ ಮೂಲಕ ರವಾನಿಸಬೇಕು ಎನ್ನುವ ಕುರಿತು ಮಾತುಕತೆ ನಡೆಸಿ ನಾಯಕರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ಕೇವಲ ಸರ್ಕಾರದ ಜನೋತ್ಸವ ಸಮಾವೇಶ ಮಾತ್ರವಲ್ಲದೆ ಅನೇಕ ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆದಿದೆ ಬಿಜೆಪಿ ನಾಯಕರ ರಾಜ್ಯಪ್ರವಾಸದ ಬಗ್ಗೆ ಕೂಡ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಬಿಜೆಪಿಯ ಮುಂದಿನ 6 ಬೃಹತ್ ಸಮಾವೇಶಗಳ ಬಗ್ಗೆ, ವಿವಿಧ ಮೋರ್ಚಾಗಳ ಬೃಹತ್ ಸಮಾವೇಶಗಳ ಆಯೋಜನೆ ಕುರಿತು ಇಂದಿನ ಮಹತ್ವದ ಸಭೆಯಲ್ಲಿ ಸಮಾಲೋಚನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಜುಲೈ 28 ರಂದು ಆಯೋಜನೆಯಾಗಿದ್ದ ಈ ಕಾರ್ಯಕ್ರಮ ಪ್ರವೀಣ್ ನೆಟ್ಟಾರು ಹತ್ಯೆ ಘಟನೆಯಿಂದ ಮುಂದೂಡಿಕೆಯಾಗಿತ್ತು. ರಾಜ್ಯ ಬಿಜೆಪಿ ಸರ್ಕಾರ ಮೂರು ವರ್ಷ, ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂರ್ಬ 8 ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಆಹ್ವಾನಿಸಲು ಸಭೆ ತೀರ್ಮಾನಿಸಿದೆ.