ರಾಜ್ಯಸಭೆ ಫಲಿತಾಂಶದಿಂದ ಬಿಜೆಪಿಯ ‘ಬಿ’ ಟೀಮ್ ಯಾರೆಂದು ಗೊತ್ತಾಗುತ್ತೆ ; ಹೆಚ್ಡಿಕೆ

Spread the love

ಬೆಂಗಳೂರು,ಜೂ.10- ರಾಜ್ಯಸಭೆ ಚುನಾವಣೆ ಫಲಿತಾಂಶ ಇಂದು ಸಂಜೆ ಹೊರಬೀಳುತ್ತಿದ್ದಂತೆ ಬಿಜೆಪಿಯ ಬಿ ಟೀಂ ಯಾರೆಂಬುದು ಗೊತ್ತಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ 32 ಶಾಸಕರ ಪೈಕಿ 31 ಶಾಸಕರು ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿಗೆ ಮತ ಹಾಕಲಿದ್ದು, ಯಾವುದೇ ಸಂಶಯವಿಲ್ಲ ಎಂದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮನ್ನು ಗೆಲ್ಲಿಸುತ್ತಾರೆ ಎಂದು ಹೇಳಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದೆ. ಬಿಜೆಪಿಯ ಬಿ ಟೀಂ ಕಾಂಗ್ರೆಸ್ ಎಂದು ಆರೋಪಿಸಿದ ಹೆಚ್.ಡಿ.ಕೆ, ಮತ ಹಾಕಿ ಎಂದು ಶಾಸಕರಿಗೆ ಸಿದ್ದರಾಮಯ್ಯ ಪತ್ರ ಮುಖೇನ ಮನವಿ ಮಾಡಿರುವುದು ನಾಚಿಕೆ ಗೇಡಿನ ಸಂಗತಿ ಎಂದು ವ್ಯಂಗ್ಯವಾಡಿದರು.

ಅಲ್ಪಸಂಖ್ಯಾತ ಅಭ್ಯರ್ಥಿಯ ಹೆಸರಿನಲ್ಲಿ ಅನುಕಂಪ ಗಿಟ್ಟಿಸಲು ಹೋಗಿ ಅವರೇ ಖೆಡ್ಡಾಗೆ ಬಿದ್ದಿದ್ದಾರೆ. ಇವರೆಲ್ಲಾ ನಕಲಿ ಕಾಂಗ್ರೆಸ್‍ನವರು ಅಪಹಾಸ್ಯ ಮಾಡಿದರು. ರಾಜ್ಯಸಭೆ ಚುನಾವಣೆಯಲ್ಲಿ ನಮಗೆ ಎರಡನೆ ಪ್ರಾಶಸ್ತ್ಯದ ಮತ ಕೂಡಾ ಹಾಕಬೇಡಿ ಎಂದು ಕಾಂಗ್ರೆಸ್ ಶಾಸಕರಿಗೆ ಹೇಳಿದ್ದಾರೆ. ಬಿಜೆಪಿ ಗೆಲ್ಲಿಸೋಕೆ ಸಿದ್ದರಾಮಯ್ಯ ಹೊರಟಿದ್ದಾರೆ. ನಕಲಿ ಜಾತ್ಯಾತೀತ ಎಂದು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.

ಜೆಡಿಎಸ್ ಶಾಸಕ ಶ್ರೀನಿವಾಸಗೌಡ ಅವರು, ಸಿದ್ದರಾಮಯ್ಯ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನೇತೃತ್ವದಲ್ಲಿ ಅವರು ಕಾಂಗ್ರೆಸ್ ಗೆ ಮತ ಹಾಕಲಿದ್ದಾರೆ. ಶ್ರೀನಿವಾಸ್ ಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಮಗೆ ಯಾವುದೇ ಸಂಶಯ ಇಲ್ಲ ಎಂದು ಹೇಳಿದರು.

ಹೆಸರಿಗೆ ಮಾತ್ರ ಪಕ್ಷಾಂತರ ನಿಷೇಧ ಅಷ್ಟೆ. ಈ ನಿಯಮ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಹಾವಿಗೆ ಹಲ್ಲು ಇಲ್ಲದ ರೀತಿ ಈ ಕಾಯ್ದೆ ಇದೆ. ಕಳೆದ ಬಾರಿ ಅಡ್ಡ ಮತದಾನ ಮಾಡಿದವರಿಗೆ ಜನ ಪಾಠ ಕಲಿಸಿದ್ದಾರೆ. ಈಗಲೂ ಜನ ಅವರಿಗೆ ಪಾಠ ಕಲಿಸುತ್ತಾರೆ. ಕೋಲಾರ ಜನರ ಮುಂದೆ ಅವರಿಗೆ ಬುದ್ದಿ ಕಲಿಸುತ್ತಾರೆ ಎಂದು ತಿಳಿಸಿದರು.

ಹೊಸ ಅಧ್ಯಾಯ ಶುರು ಮಾಡೋಣ ಅಂತಾ ಹೇಳಿದ್ದರೂ ಕಾಂಗ್ರೆಸ್ ನವರು ಒಪ್ಪಲಿಲ್ಲ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂ ಅವರೊಂದಿಗೆ ಮಾತಾಡಿದ್ದಾರೆ. ಕಾಂಗ್ರೆಸ್ ಗೆ ಜಾತ್ಯಾತೀತ ಪಕ್ಷಗಳು ಉಳಿಯೋದು ಇಷ್ಟ ಇಲ್ಲ. ಇದರಿಂದ ಕಾಂಗ್ರೆಸ್ ನಿಜವಾದ ಬಣ್ಣ ಬಯಲಾಗಿದೆ. ಆದರೆ ಜೆಡಿಎಸ್ ಪಕ್ಷ ಮತ್ತೆ ಪುಟಿದು ನಿಲ್ಲುತ್ತದೆ ಎಂದರು.

Facebook Comments