ಹೊಸ ಮುಖಗಳಿಗೆ ಸಚಿವ ಸ್ಥಾನ : 2023ರ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್

Social Share

ಬೆಂಗಳೂರು, ಜ.27- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಶೀಘ್ರದಲ್ಲಿಯೇ ಮೇಜರ್ ಸರ್ಜರಿಯಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಬೆನ್ನಲ್ಲೇ  ಹೊಸಬರಿಗೆ ಸಚಿವಗಿರಿ ನೀಡಲು ಚಿಂತನೆ ನಡೆದಿದೆ. ಕೆಲ ಹಾಲಿ ಸಚಿವರಿಗೆ ಕೊಕ್ ಕೊಟ್ಟು ಹೊಸಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಬಿಜೆಪಿಯೊಳಗಿನ ಸಚಿವಗಿರಿ ಭಿನ್ನಮತ ಶಮನಕ್ಕೆ ಸಕಲ ಸಿದ್ಧತೆ ನಡೆದಿದೆ.
2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆ ಬೊಮ್ಮಾಯಿ ಮೇಲಿದೆ. ಬಿಜೆಪಿಯ ನಿಷ್ಠಾವಂತ ಶಾಸಕರು ಸಚಿವ ಸ್ಥಾನ ಸಿಗದೆ ಒಳಗೊಳಗೆ ಕುದಿಯುತ್ತಿದ್ದಾರೆ. ಸರ್ಕಾರದ ಅವಧಿ ಮುಗಿಯುವ ಕೊನೆ ಕಂತಿನಲ್ಲಿ ಸಚಿವ ಸ್ಥಾನ ಸಿಗಬಹುದೆಂದು ಕಾದು ಕುಳಿತಿದ್ದಾರೆ. ಬಿಜೆಪಿ ಸರ್ಕಾರ ರಚನೆ ವೇಳೆ ವಲಸಿಗರಿಗೆ ಮಣೆ ಹಾಕಲಾಗಿತ್ತು.
ಸರ್ಕಾರ ರಚನೆ ಕಾರಣಕ್ಕೆ ಮೂಲ ಬಿಜೆಪಿಗರೂ ಸುಮ್ಮನಾಗಿದ್ದರು. ಇದೀಗ ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿದ್ದರು. ಚುನಾವಣೆ ಹೊಸ್ತಿನಲ್ಲಿ ಸಚಿವ ಸಂಪುಟ ಪುನಾರಚನೆ ಮೂಲಕ ಆಂತರಿಕ ಭಿನ್ನಮತ ಶಮನ ಮಾಡುವುದು.
ಈಗಾಗಲೇ ಸಚಿವರಾಗಿರುವರಿಗೆ ಪಕ್ಷ ಸಂಘಟನೆ ಹೊಣೆ ಕೊಡುವುದು. ಹೊಸಬರಿಗೆ ಅವಕಾಶ ಕೊಡುವ ಮೂಲಕ ಎಲ್ಲಾ ಸಮಸ್ಯೆಗಳಿಗೆ ತೆರೆ ಎಳೆಯಲು ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಸಚಿವ ಸಂಪುಟ ಪುನಾರಚನೆಗೆ ಕಸರತ್ತು ನಡೆದಿದ್ದು, ಯಾರಿಗೆಲ್ಲೇ ಸಚಿವ ಸ್ಥಾನ ಸಿಗಲಿದೆ.
ಯಾರ ಖಾತೆ ಬದಲಾಗಲಿದೆ ಎಂಬ ಚರ್ಚೆ ಬಿಜೆಪಿ ಪಾಳಯದಲ್ಲಿ ನಡೆಯುತ್ತಿದೆ. ಹಾಲಿ ಸಚಿವ ಕೆ.ಎಸ್. ಈಶ್ವರಪ್ಪ, ಕ್ರೀಡಾ ಸಚಿವ ನಾರಾಯಣಗೌಡ ಸೇರಿದಂತೆ ಹಿರಿಯ ತಲೆಗಳು ಸಚಿವ ಸ್ಥಾನ ಕಳೆದುಕೊಳ್ಳಲಿವೆ. ಅದರ ಜಾಗಕ್ಕೆ ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ. ಇನ್ನು ಹಲವರ ಬದಲಾವಣೆ ಹಿನ್ನೆಲೆಯಲ್ಲಿ ಕೆಲವು ಖಾತೆಗಳು ಬದಲಾವಣೆಯಾಗುವ ಸಾಧ್ಯತೆಯಿದೆ. ಎಂಟು ಮಂದಿ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರಗೆ ಪವರ್‍ಫುಲ್ ಖಾತೆ ನೀಡಲು ಚಿಂತನೆ ನಡೆದಿದೆ ಎನ್ನಲಾಗಿದೆ. ಇಂಧನ ಅಥವಾ ಗೃಹ ಸಚಿವ ಖಾತೆ ನೀಡುವ ಬಗ್ಗೆ ಚರ್ಚೆ ನಡೆದಿದೆ. ಆದರೆ, ಹಲವು ಆರೋಪ ಇರುವ ಕಾರಣ ಗೃಹ ಸಚಿವ ಸ್ಥಾನ ಬೇಡ, ಇಂಧನ ಖಾತೆ ನೀಡುವ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಈಗಾಗಲೇ ಸುನೀಲ್ ಕುಮಾರ್ ಇಂಧನ ಖಾತೆ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಯಾವುದೇ ವಿವಾದ ಕೂಡ ಇಲ್ಲ. ಉತ್ತಮ ಹಿನ್ನೆಲೆಯುಳ್ಳ ಸುನೀಲ್ ಕುಮಾರ್ ಖಾತೆ ಬದಲು ಮಾಡುವುದು ಬೇಡ, ಅದರ ಬದಲಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ನೀಡುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಅಂತೂ ಸಚಿವ ಸಂಪುಟ ಪುನಾರಚನೆಯನ್ನು ವಿವಾದ ರಹಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಬಸವರಾಜ ಬೊಮ್ಮಾಯಿ ಪ್ಲಾನ್ ಮಾಡುತ್ತಿದ್ದಾರೆ. ಭಿನ್ನಮತ ಸೋಟಗೊಳ್ಳದಂತೆ ಸಚಿವರನ್ನು ಆಯ್ಕೆ ಮಾಡಲು ಬೊಮ್ಮಾಯಿ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ವರಿಷ್ಠರ ಸಲಹೆ ಪಡೆದು ಅತಿ ಶೀಘ್ರದಲ್ಲಿಯೇ ಹೊಸಬರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ.

Articles You Might Like

Share This Article