ಬೆಂಗಳೂರು,ಜ.25- ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುವ ಮೂರ್ಖರಿಗೆ ಸಿಎಜಿ ವರದಿ ಸರಿಯಾಗಿ ಅರ್ಥವಾಗಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ತಮ್ಮ ನಿವಾಸದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರಾದ ಡಾ.ಸುಧಾಕರ್ ಮತ್ತು ಅಶ್ವಥ್ನಾರಾಯಣ್ ಸುದ್ದಿಗೋಷ್ಠಿ ಮಾಡಿ ಬರೀ ಸುಳ್ಳುಗಳನ್ನ ಹೇಳಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 35 ಸಾವಿರ ಕೋಟಿ ಅವ್ಯವಹಾರ ಆಗಿದೆ ಎಂದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸಚಿವರ ಮೂಲಕ ಸುಳ್ಳು ಹೇಳಿಸಿದ್ದಾರೆ. ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ನ ಕೈಗೊಂಬೆಯಾಗಿದ್ದಾರೆ ಎಂದು ಲೇವಡಿ ಮಾಡಿದರು.
ಪಾಪ ಸುಧಾಕರ್ಗೆ ಕಾಂಗ್ರೆಸ್ ಪಕ್ಷ ರಾಜಕೀಯ ಜೀವನ ಕೊಟ್ಟಿದೆ. ಆಪರೇಶನ್ ಕಮಲಕ್ಕೆ ಒಳಗಾಗಿ, ದುಡ್ಡಿನ ಆಸೆಗೆ ಬಿಜೆಪಿ ಸೇರಿದ್ದಾರೆ.
ಸುಧಾಕರ್ ಎಂಬಿಬಿಎಸ್ ಡಾಕ್ಟರ್ ಎಂದುಕೊಂಡಿದ್ದೇನೆ. ಎಜಿ ರಿಪೋರ್ಟ್ ಅರ್ಥ ಮಾಡಿಕೊಂಡಿಲ್ಲ ಅನ್ಸುತ್ತೆ. ಅದೇ ರೀತಿ ರೀ ಕನ್ಸಿಲೇಶನ್ ರಿಪೋರ್ಟ್ ಅನ್ನು ಅರ್ಥ ಮಾಡಿಕೊಂಡಿಲ್ಲ. ಅನುದಾನ, ಖರ್ಚು ತಾಳೆ ಆಗ್ತಿದ್ಯಾ, ಇಲ್ವಾ ಅಂತಾ ನೋಡೋದು ಸಾಮಾನ್ಯ. ಎಲ್ಲಾ ಕಾಲದಲ್ಲೂ ಕೆಲವು ಪರ್ಸೆಂಟೇಜ್ ತಾಳೆ ಆಗುವುದಿಲ್ಲ.
ಪಠಾಣ್ ಚಿತ್ರದ ವಿರುದ್ಧ ಕರ್ನಾಟಕದಲ್ಲೂ ಭುಗಿಲೆದ್ದ ಆಕ್ರೋಶ
ನಾನು ವರದಿ ತರಿಸಿಕೊಂಡು ನೋಡಿದ್ದೇನೆ. ನಮ್ಮ ಅವಯ ಬಜೆಟ್ ನಲ್ಲಿ ಶೇ.19ರಷ್ಟು ರೀಕನ್ಸಿಡರೇಶನ್ ಆಗಿಲ್ಲ ಎಂದು ಆಡಿಟ್ ವರದಿ ಹೇಳಿದೆ. ಅದಕ್ಕೂ ಮೊದಲು 2008-09 ರಲ್ಲಿ ಶೇ.49.87 ತಾಳೆ ಆಗಿಲ್ಲ ಅಂತಾ ಸಿಎಜಿ ರಿಪೋರ್ಟ್ ಹೇಳಿತ್ತು. 2015-16 ರಲ್ಲಿ ಶೇ.16 ರೀ ಕನ್ಸಿಲೇಶನ್ ಕಡಿಮೆ ಆಗಿದೆ. ಆ ಮೂರ್ಖರಿಗೆ ಇದು ಅರ್ಥ ಆಗುತ್ತಾ ಎಂದು ವಾಗ್ದಾಳಿ ನಡೆಸಿದರು.
ಹಣಕಾಸಿನ ವ್ಯವಸ್ಥೆಯಲ್ಲಿ ಶಿಸ್ತು ತಂದಿದ್ದೆ ನಮ್ಮ ಸರ್ಕಾರದಲ್ಲಿ. ಬಿಜೆಪಿ ಆಡಳಿತದಲ್ಲಿ ಅಶಿಸ್ತು ಇತ್ತು. ಸಿಐಜೆ ವರದಿಯನ್ನು ಸುಧಾಕರ್ ಓದಿದಾನೋ ಇಲ್ಲವೋ ಗೊತ್ತಿಲ್ಲ. ಯಾಕೆಂದರೆ ಲಂಚ ಹೊಡೆಯುವವರಿಗೆ ಓದಲು ಟೈಮ್ ಎಲ್ಲಿರುತ್ತದೆ. ಭ್ರಷ್ಟಾಚಾರಕ್ಕೂ, ಆರ್ಥಿಕ ಅಶಿಸ್ತಿಗೂ ವ್ಯತ್ಯಾಸವಿದೆ ಎಂದು ವಾಗ್ದಾಳಿ ನಡೆಸಿದರು.
ತಾಳೆಯಾಗದ ಲೆಕ್ಕದ ಬಗ್ಗೆ ದೂರು ಕೊಟ್ಟರೆ ಹೇಗೆ, ಇದು ಭ್ರಷ್ಟಾಚಾರ ಅಲ್ಲ. ತಮ್ಮ ಸರ್ಕಾರದ ಅವಧಿಯಲ್ಲಿ ಹಲವು ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಲಾಗಿತ್ತು. ಬಿಜೆಪಿ ಸರ್ಕಾರ ಒಂದೆ ಒಂದು ಹಗರಣವನ್ನು ಸಿಬಿಐ ತನಿಖೆಗೆ ಕೊಟ್ಟಿಲ್ಲ. ಎಲ್ಲಾ ಕಾಲದ ಭ್ರಷ್ಟಚಾರಗಳನ್ನು ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರವಾದ ನ್ಯಾಯಾಂಗ ತನಿಖೆಗೆ ಒಪ್ಪಿಸಲಿ. ಅದರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿನ ಆರೋಪಗಳನ್ನು ಸೇರಿಸಿ ತನಿಖೆ ಮಾಡಿಸಿ ಎಂದು ಒತ್ತಾಯಿಸಿದರು.
ಬಿಜೆಪಿಯವರು ಸತ್ಯ ಹರಿಶ್ಚಂದ್ರರಾದರೆ ತನಿಖೆ ನಡೆಸಲು ಭಯ ಏಕೆ. ಇಷ್ಟು ದಿನ ಸುಮ್ಮನಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಸತ್ಯ ಹೊರಗೆ ಬರಲಿ ನ್ಯಾಯಾಂಗ ತನಿಖೆ ನಡೆಸಿ ಎಂದು ಸವಾಲು ಹಾಕಿದರು.
ಈ ಹಿಂದೆ ಸುಧಾಕರ್ಗೆ ಟಿಕೆಟ್ ಕೊಡಿಸಿದ್ದು ನಾನು. ಆ ವೇಳೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ದುರು ಹಾಕಿಕೊಂಡು ಟಿಕೆಟ್ ಕೊಡಿಸಿದೆ. ಈಗ ಆತ ನನ್ನ ವಿರುದ್ಧ ಮಾತನಾಡುತ್ತಿದ್ದಾನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೆ ನಮ್ಮ ಜೊತೆಗಿದ್ದವರ ಮೂಲಕ ಮಾತಾಡಿಸುತ್ತಿದ್ದಾರೆ. ಆರ್.ಎಸ್.ಎಸ್ ನಾಯಕರು ಸುಧಾಕರ್ ಕಡೆಯಿಂದ ಮಾತನಾಡಿಸುತ್ತಿದ್ದಾರೆ. ನನ್ನ ವಿರುದ್ಧ ಮಾತನಾಡಿದರೆ ನಾಯಕನಾಗುತ್ತೇನೆ ಎಂಬ ಭ್ರಮೆಯಲ್ಲಿ ಸುಧಾಕರ್ ಮಾತನಾಡುತ್ತಿದ್ದಾನೆ ಎಂದು ಏಕವಚನದಲ್ಲಿ ಅಸಮಧಾನ ವ್ಯಕ್ತಪಡಿಸಿದರು.
ಈ ಅಲಿಬಾಬ 40 ಮಂದಿ ಕಳ್ಳರಲ್ಲಿ ಸುಧಾಕರ್ ಒಬ್ಬ ಸದಸ್ಯ. ಇವರೆಲ್ಲಾ ಏನೇನ್ ಮಾಡಿದ್ದಾರೆ ಎಂದು ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದ ಹೆಚ್.ಕೆ.ಪಾಟೀಲ್ ವರದಿ ಕೊಟ್ಟಿದ್ದಾರೆ. ಕೊರೋನಾ ಕಾಲದಲ್ಲಿ ಸುಧಾಕರ್ ಸುಮಾರು ಮೂರು ಸಾವಿರ ಕೋಟಿ ಲಂಚ ಪಡೆದಿದ್ದಾನೆ ಎಂಬ ವರದಿ ಇದೆ. ವಿಧಾನಸಭಾಧ್ಯಕ್ಷರು ಆ ವರದಿಯನ್ನು ವಿಧಾನಮಂಡಲದಲ್ಲಿ ಮಂಡನೆ ಮಾಡಿಲ್ಲ ಎಂದು ಆರೋಪಿಸಿದರು.
ಸಮಾಜ ಕಲ್ಯಾಣ ಇಲಾಖೆ ಹೆಸರಲ್ಲಿ ವಂಚನೆ ವಂಚಿಸುತ್ತಿದ್ದ ಮೂವರ ಬಂಧನ
ಕೊರೊನಾ ಕಾಲದ ಭ್ರಷ್ಟಚಾರವನ್ನು ವಿಶೇಷ ಆಡಿಟ್ ಮಾಡೋಕೆ ಸರ್ಕಾರ ಒಪ್ಪಲಿಲ್ಲ. ತಪ್ಪು ಮಾಡಿಲ್ಲ ಎಂದರೆ ವಿಶೇಷ ಆಡಿಟ್ಗೆ ಒಪ್ಪಬಹುದಿತ್ತಲ್ಲ. ಬಿಜೆಪಿ ಸುಳ್ಳಿನ ಕಾರ್ಖಾನೆ. ರವಿಕುಮಾರ್ ಅವರನ್ನು ಸುಳ್ಳು ಹೇಳಲಿಕ್ಕಾಗಿಯೇ ಇಟ್ಟುಕೊಂಡಿದ್ದಾರೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಜಾವೇದ್ ಅಖ್ತರ್ ಸ್ಪಷ್ಟ ಉತ್ತರ ಬರೆದಿದ್ದಾರೆ ಎಂದರು.
ಹೈಕಮಾಂಡ್ ನಿರ್ಧಾರದಂತೆ ಹಿಂದೆ ನಾವು ಜೆಡಿಎಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದೇವು. ಈಗ ಅದನ್ನು ಪಾಪದ ಫಲ ಅಂದ್ರೆ ಹೇಗೆ. ಸರ್ಕಾರ ರಚನೆಯಾದ ಕೂಡಲೇ ಸುಧಾಕರ್ ಪಕ್ಷ ಬಿಟ್ಟು ಹೋಗಬಹುದಿತ್ತು. ಆಪರೇಷನ್ ಕಮಲದಿಂದ ಯಾಕೆ ಹೋಗಿದ್ದು ಎಂದು ಖಾರವಾಗಿ ಪ್ರಶ್ನಿಸಿದರು.
ತಮ್ಮದು ಭಾಷೆ ಒರಟು. ಈ ಹಿಂದೆ ಚಿಕ್ಕಮಗಳೂರಿನಲ್ಲಿ ಮಾತಾಡುವಾಗ ಇವರ ಮನೆ ಹಾಳಾಗಾ ಎಂದು ಹೇಳಿದ್ದೆ. ಬಸವರಾಜ ಬೊಮ್ಮಾಯಿ ಮನೆ ಹಾಳಾಗಾ ಎಂದು ವೈಯಕ್ತಿಕವಾಗಿ ನಾನು ಹೇಳಿಲ್ಲ. ಹಳ್ಳಿಯ ಭಾಷೆಯಲ್ಲಿ ಮಾತನಾಡುವಾಗ ಆ ಪದ ಬಳಕೆಯಾಗಿದೆ. ಅದೇನು ಅಸಂಸದೀಯಾ ಪದವಲ್ಲ. ಈ ಸರ್ಕಾರದಿಂದ ಜನರಿಗೆ ಸಾಕಾಗಿದೆ ಎಂಬ ಕಾರಣಕ್ಕೆ ಜನರ ಭಾವನೆಯನ್ನು ವ್ಯಕ್ತಪಡಿಸಿದ್ದೇನೆ ಎಂದರು.
ಹಿಂದೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ, ಯಡಿಯೂರಪ್ಪನವರಿಗೆ 20 ತಿಂಗಳು ಅಧಿಕಾರ ಬಿಟ್ಟು ಕೊಟ್ಟಿದ್ದರೆ ಮುಗಿದು ಹೋಗುತ್ತಿತ್ತು. ಬಿಜೆಪಿ ಬಂದು ರಾಜ್ಯಕ್ಕೆ ವಕ್ಕರಿಸಿಕೊಳ್ಳುತ್ತಿರಲಿಲ್ಲ. ಇವತ್ತು ಆಪರೇಷನ್ ಕಮಲ ಮಾಡಲು ಜೆಡಿಎಸ್ ಕಾರಣ. ಆಪರೇಷನ್ ಸಂಸ್ಕೃತಿ ತಂದಿದ್ದು ಬಿಜೆಪಿ. ಯಾವತ್ತು ಬಹುಮತ ಪಡೆದು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ಮತ್ತೆ ಆಪರೇಷನ್ ಬಗ್ಗೆ ರಮೇಶ್ ಜಾರಕಿಹೋಳಿ ಮಾತನಾಡುತ್ತಿದ್ದಾನೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಪೆಟ್ರೋಲ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಇಬ್ಬರು ಸಾವು
ಮಹದಾಯಿ ಯೋಜನೆ ಜಾರಿಗೆ ತರದೇ ಬಿಜೆಪಿ ರಾಜ್ಯ ಸರ್ಕಾರ ಮೂರೂವರೆ ವರ್ಷದಿಂದ ಏನ್ ಮಾಡುತ್ತಿತ್ತು. ಡಬಲ್ ಇಂಜಿನ್ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿ ಕೆಲಸ ಶುರು ಮಾಡಿಸಬೇಕಿತ್ತು. ಗೋವಾದಲ್ಲಿ, ಕೇಂದ್ರದಲ್ಲಿ, ಇಲ್ಲೂ ಬಿಜೆಪಿ ಸರ್ಕಾರವೇ ಇದೆ. ತ್ರಿಬಲ್ ಎಂಜಿನ್ ಸರ್ಕಾರ ಇದ್ದರೂ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.
BJP, CAG report, Siddaramaiah, minister sudhakar,