ಬೆಂಗಳೂರು,ಜು.29- ರಾಜ್ಯ ವಿಧಾನಪರಿಷತ್ನಲ್ಲಿ ಖಾಲಿ ಇರುವ ಒಂದು ಸ್ಥಾನಕ್ಕೆ ಆಡಳಿತ ಪಕ್ಷ ಬಿಜೆಪಿ ಹಿಂದುಳಿದ ಸಮುದಾಯಗಳ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.
ಹಿಂದುಳಿದ ಸಮುದಾಯಗಳಿಗೆ ಸೇರಿದ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಸೋಮವಾರ ಕಡೆಯ ದಿನವಾಗಿದೆ. ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಲು ಇನ್ನೆರಡು ದಿನ ಮಾತ್ರ ಬಾಕಿ ಇದೆ.
ಸದ್ಯ ಬಿಜೆಪಿ ನಾಯಕರು ಸರ್ಕಾರದ ವರ್ಷದ ಸಾಧನಾ ಸಮಾವೇಶದಲ್ಲಿ ತೊಡಗಿದ್ದರಿಂದ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಿರಲಿಲ್ಲ. ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿಗೆ
ಈ ಸ್ಥಾನ ಅನಾಯಾಸವಾಗಿ ದಕ್ಕಲಿದ್ದು, ಬಹುತೇಕ ಅವಿರೋಧ ಆಯ್ಕೆ ನಡೆಯಲಿದೆ. ಆದರೆ ಅಭ್ಯರ್ಥಿ ಆಯ್ಕೆಯೇ ಬಿಜೆಪಿಗೆ ಕಗ್ಗಂಟಾಗಿದೆ.
ಸಿಎಂ ಇಬ್ರಾಹಿಂ ಅವರ ರಾಜೀನಾಮೆಯಿಂದ ತೆರವಾಗಿರುವ ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕೆ ಆಗಸ್ಟ್ 11ರಂದು ಚುನಾವಣೆ ನಡೆಯಲಿದ್ದು, ಆಗಸ್ಟ್ 1 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಒಂದೇ ಸ್ಥಾನ ಇರುವುದರಿಂದ ಪ್ರತಿಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ನಿರ್ಧರಿಸಿವೆ.
ಹೀಗಾಗಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಬೇಕೆಂಬ ಚರ್ಚೆ ಬಿಜೆಪಿ ಪ್ರಮುಖ ನಾಯಕರ ಮಟ್ಟದಲ್ಲಿ ನಡೆದಿದೆ ಎನ್ನಲಾಗಿದ್ದು, ರಾಜಕೀಯವಾಗಿ ಅತ್ಯಂತ ಹಿಂದುಳಿದಿರುವ ಕೋಲಿ ಸಮುದಾಯ, ಮರಾಠ ಸಮುದಾಯ ಅಥವಾ ಬೇರಾವುದಾದರೂ ಹಿಂದುಳಿದ ವರ್ಗದ ವ್ಯಕ್ತಿಗೆ ಅವಕಾಶ ಕಲ್ಪಿಸಬೇಕೆಂಬ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾತಿನಿಧ್ಯ ನೀಡುವ ಸಾಧ್ಯತೆ ಹೆಚ್ಚಿದ್ದು, ಆ ಭಾಗದ ಕೋಲಿ ಸಮುದಾಯದ ಅಭ್ಯರ್ಥಿ, ಅದೇ ರೀತಿ ಬಸವ ಕಲ್ಯಾಣ ಉಪ ಚುನಾವಣೆಯಲ್ಲಿ ಬಿಜೆಪಿ ಮರಾಠ ಸಮುದಾಯದವರಿಗೆ ವಿಧಾನ ಪರಿಷತ್ ಸ್ಥಾನ ನೀಡುವುದಾಗಿ ಭರವಸೆ ನೀಡಿತ್ತು ಎನ್ನಲಾಗಿದೆ.
ಆ ಕಾರಣಕ್ಕಾಗಿ ಬೀದರ್ ಜಿಲ್ಲೆಯ ಮರಾಠ ಸಮುದಾಯಕ್ಕೆ ಸೇರಿದವರಿಗೆ ಪರಿಷತ್ ಟಿಕೆಟ್ ನೀಡುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಬೆಳಗಾವಿ ದ್ವಿಸದಸ್ಯ ಕ್ಷೇತ್ರದಲ್ಲಿ ಗೆಲ್ಲುವ ಎಲ್ಲಾ ಸಾಧ್ಯತೆಗಳಿದ್ದರೂ ಅಕೃತ ಅಭ್ಯರ್ಥಿಯಾಗಿದ್ದ ಮಹಾಂತೇಶ ಕವಟಗಿಮಠ ಪರಾಜಿತಗೊಂಡಿದ್ದು, ಇದಕ್ಕೆ ಪಕ್ಷದಲ್ಲಿನ ಆಂತರಿಕ ಸಮಸ್ಯೆ ಕಾರಣ ಎನ್ನುವುದು ಸ್ಪಷ್ಟವಾಗಿತ್ತು.
ಇದನ್ನೇ ಮುಂದಿಟ್ಟು ಅವರು ಈಗ ಮತ್ತೆ ಪರಿಷತ್ ಪ್ರವೇಶಕ್ಕೆ ಯತ್ನಿಸುತ್ತಿದ್ದಾರೆ. ಇದರ ಜೊತೆಗೆ ಶಿಕ್ಷಕರ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಯಡಿಯೂರಪ್ಪ ಅವರ ಆಪ್ತ ಮೋಹನ್ ಲಿಂಬಿಕಾಯಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಬಸವರಾಜ ಹೊರಟ್ಟಿ ಬಿಜೆಪಿ ಸೇರಿದ್ದರಿಂದ ಅವರಿಗೆ ಕ್ಷೇತ್ರ ಬಿಟ್ಟುಕೊಡಬೇಕಾಯಿತು.
ಹಾಗಾಗಿ ಅವರು ಈ ಪರಿಷತ್ ಟಿಕೆಟ್ಗೆ ಯತ್ನಿಸುತ್ತಿದ್ದು, ಯಡಿಯೂರಪ್ಪ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ. ಇತ್ತೀಚೆಗೆ ವಿಧಾನ ಸಭೆಯಿಂದ ವಿಧಾನ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಹುತೇಕ ಆಯ್ಕೆಯಾಗಿ ಕಚೇರಿಗೆ ಕರೆಸಿಕೊಂಡಿದ್ದ ಸಿ.ಮಂಜುಳಾ ಅವರಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತು. ಹಾಗಾಗಿ ಅವರು ಈಗ ಮತ್ತೊಮ್ಮೆ ಪ್ರಯತ್ನ ನಡೆಸಿದ್ದಾರೆ.
ಸಂಘ ಪರಿವಾರದ ಮೂಲಕ ಟಿಕೆಟ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಇವರ ಜೊತೆ ಬಿಜೆಪಿ ನಾಯಕಿ ಭಾರತಿ ಮುದ್ಗುಂ, ವಿಜಯೇಂದ್ರ ಆಪ್ತ ಜಗದೀಶ್ ಹಿರೇಮನಿ, ಬಿಜೆಪಿ ಮಾಜಿ ವಕ್ತಾರ ಎಸ್ ಪ್ರಕಾಶ್ ಕೂಡ ಟಿಕೆಟ್ ರೇಸ್ನಲ್ಲಿದ್ದಾರೆ.
ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಮಾಡಿ ಹೈಕಮಾಂಡ್ಗೆ ಕಳುಹಿಸಿ, ಶನಿವಾರ ಹೆಸರನ್ನು ಹೈಕಮಾಂಡ್ ಪ್ರಕಟಿಸಲಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಶಿಫಾರಸು ಬಿಟ್ಟು ಅಚ್ಚರಿ ಆಯ್ಕೆಯಾಗಿ ಬೇರೆ ಹೆಸರನ್ನು ಕೂಡ ಬಿಜೆಪಿ ಪ್ರಕಟಿಸಬಹುದು ಎಂಬ ಮಾತುಗಳೂ ಬಿಜೆಪಿಯಲ್ಲಿ ಕೇಳಿ ಬರುತ್ತಿವೆ.