ಸೋಲಿನ ಆತಂಕ : ಪರ್ಯಾಯ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ

Social Share

ಬೆಂಗಳೂರು,ಅ.24- ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಬಿಜೆಪಿ, ಹಾಲಿ ಇರುವ ಶಾಸಕರಲ್ಲಿ ಕೆಲವರು ಸೋಲಬಹುದೆಂಬ ಆತಂಕ ಎದುರಾಗಿದ್ದು, ಪರ್ಯಾಯ ನಾಯಕರನ್ನು ಹುಡುಕುತ್ತಿದೆ.

ಪಕ್ಷ ನಡೆಸಿರುವ ಆಂತರಿಕ ಸಮೀಕ್ಷೆ ಪ್ರಕಾರ ಕನಿಷ್ಠ ಕೆಲವು ಸಚಿವರು ಮತ್ತು ಶಾಸಕರು ಸೇರಿದಂತೆ 15ರಿಂದ 20 ಶಾಸಕರಿಗೆ ಹಿನ್ನಡೆಯಾಗಬಹುದೆಂದು ಆತಂಕ ಎದುರಾಗಿದೆ. ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಉಮೇದಿನಲ್ಲಿರುವ ಬಿಜೆಪಿಗೆ ದೆಹಲಿ ಮೂಲದ ಖಾಸಗಿ ಸುದ್ದಿ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಪ್ರಧಾನಿ ನರೇಂದ್ರಮೋದಿ ಅಲೆಯ ಹೊರತಾಗಿಯೂ 100ರ ಗಡಿ ದಾಟುವುದು ಅಷ್ಟು ಸುಲಭವಲ್ಲ ಎಂದು ಹೇಳಿದೆ.

ಇದು ಬಿಜೆಪಿಯ ಜಂಘಾಬಲವನ್ನು ಹುದುಗಿಸಿದ್ದು, ಸೋಲಬಹುದಾದ ಕ್ಷೇತ್ರಗಳಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ. ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ಸೋಲುವವರಿಗೆ ಟಿಕೆಟ್ ಕೈತಪ್ಪಿಸಿ ಹೊಸಬರಿಗೆ ಮಣೆ ಹಾಕಿದ್ದರಿಂದ ಪಕ್ಷ ಅಧಿಕಾರಕ್ಕೆ ಬಂದಿತ್ತು. ಈಗ ಕರ್ನಾಟಕದಲ್ಲೂ ಇದೇ ಮಾದರಿಯನ್ನು ಬಿಜೆಪಿ ಮುಂದಾಗಿದೆ ಎನ್ನಲಾಗುತ್ತಿದೆ.

ಎ, ಬಿ, ಸಿ ಎಂಬ ಮೂರು ವರ್ಗಗಳನ್ನು ಮಾಡಿ ಸಮೀಕ್ಷೆ ನಡೆಸಲಾಗಿತ್ತು. ಎ ವರ್ಗದಲ್ಲಿ 100ಕ್ಕೆ ನೂರರಷ್ಟು ಕನಿಷ್ಟ 60ರಿಂದ 70 ಶಾಸಕರು ಗೆದ್ದರೆ ಬಿ ವರ್ಗದಲ್ಲಿ 20ರಿಂದ 25 ಶಾಸಕರು, ಸಿ ವರ್ಗದಲ್ಲಿ 15ರಿಂದ 20 ಶಾಸಕರು ಗೆಲ್ಲಬಹುದೆಂದು ವರದಿ ಹೇಳಿದೆ.

ಬಿ ವರ್ಗದಲ್ಲಿ 2ರಿಂದ 5 ಸಾವಿರ ಮತಗಳ ವ್ಯತ್ಯಾಸ ಕಂಡುಬರುತ್ತಿದ್ದು, ಈಗಿನಿಂದಲೇ ಶಾಸಕರು ಕ್ಷೇತ್ರದಲ್ಲಿ ಮತದಾರರ ವಿಶ್ವಾಸ ಗಳಿಸುವ ಪ್ರಯತ್ನ ಮಾಡಿದರೆ ಗೆಲುವಿನ ದಡ ಸೇರಬಹುದಾಗಿದೆ.

ಸಿ ವರ್ಗದಲ್ಲಿ 5ರಿಂದ 10 ಸಾವಿರ ಮತಗಳ ವ್ಯತ್ಯಾಸ ಕಂಡುಬರುತ್ತಿದ್ದು, ಇವರಿಗೆ ಪ್ರಧಾನಿ ನರೇಂದ್ರಮೋದಿ ನಾಮಬಲ, ಬಿಜೆಪಿ ವರ್ಚಸ್ಸು ಕೈ ಹಿಡಿಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಶಿಂಧೆ ಬಣದ 22ಕ್ಕೂ ಹೆಚ್ಚು ಶಾಸಕರು ಬಿಜೆಪಿಗೆ..?

ಇದರ ಜೊತೆಗೆ 2018ರ ವಿಧಾನಸಭೆ ಚುನಾವಣೆಯಲ್ಲಿ 1 ಸಾವಿರ ಹಾಗೂ 500 ಮತಗಳ ಅಂತರದಲ್ಲಿ ಪರಾಭವಗೊಂಡ ಕ್ಷೇತ್ರಗಳ ಮೇಲೂ ಬಿಜೆಪಿ ಕಣ್ಣಿಟ್ಟಿದೆ. ಈ ರೀತಿ 15 ಕ್ಷೇತ್ರಗಳಿದ್ದು, ಇಲ್ಲಿ ಹೆಚ್ಚು ಪರಿಶ್ರಮ ಹಾಕಿದರೆ ಗೆಲ್ಲಬಹುದೆಂಬ ಲೆಕ್ಕಾಚಾರವಿದೆ.

2018ರ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದ 104 ಕ್ಷೇತ್ರಗಳ ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಂದ 14 ಮಂದಿ ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿದ್ದರಿಂದ ಸಂಖ್ಯಾಬಲ 118ಕ್ಕೆ ಏರಿದೆ. ಈ ಪೈಕಿ 20 ಕ್ಷೇತ್ರಗಳಲ್ಲಿ ಕಷ್ಟಕರ ವಾತಾವರಣವಿದೆ ಎಂಬುದು ಆಂತರಿಕ ಸಮೀಕ್ಷೆ ತಿಳಿಸಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ಶಾಸಕರ ಪಕ್ಷಾಂತರ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ಹಳೇ ಮೈಸೂರು ಭಾಗದ ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಬಲ ಹೆಚ್ಚಿಸಿಕೊಂಡು ಈ ಬಾರಿ ಹೆಚ್ಚುವರಿಯಾಗಿ 10 ರಿಂದ 15 ಸ್ಥಾನ ಗೆದ್ದರೆ ಸಾಕು ಎಂಬ ಗುಂಗಿನಲ್ಲಿದ್ದ ಬಿಜೆಪಿ ನಾಯಕರಿಗೆ ಆಂತರಿಕ ಸಮೀಕ್ಷೆ ಶಾಕ್ ನೀಡಿದೆ.

ತಕ್ಕ ಉತ್ತರ ನೀಡಲು ನಮ್ಮ ಯೋಧರು ಸಮರ್ಥರಿದ್ದಾರೆ : ಪ್ರಧಾನಿ ಮೋದಿ

ಬಿಜೆಪಿಗೆ ಇದುವರೆಗೂ ಗೆಲ್ಲದಿರುವ 60 ಕ್ಷೇತ್ರಗಳ ಬಗ್ಗೆ ಹೆಚ್ಚು ಗಮನ ಹರಿಸುವುದರ ಜೊತೆಗೆ ಇದೀಗ ಸೋಲುವ ಸಾಧ್ಯತೆ ಇರುವ ಕ್ಷೇತ್ರಗಳ ಬಗ್ಗೆಯೂ ತಲೆಬಿಸಿಯಾಗಿದೆ. ಹೀಗಾಗಿಯೇ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಸ್ವ ಸಾಮಥ್ರ್ಯ, ಪ್ರಭಾವಿ ನಾಯಕರಿಗೆ ಗಾಳ ಹಾಕಿ ಪ್ರಾಥಮಿಕ ಮಾತುಕತೆ ಮುಗಿಸಿದೆ ಎನ್ನಲಾಗಿದೆ.

ಬಣ ರಾಜಕೀಯ, ನಾಯಕರಲ್ಲಿನ ಸಮನ್ವಯ ಕೊರತೆ ದೊಡ್ಡ ಮಟ್ಟದ ಪೆಟ್ಟು ಕೊಡಲಿದೆ. ಹಾಲಿ ಶಾಸಕರ ಸೋಲಿಗೂ ಇದು ಕಾರಣವಾಗಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ. ಜೊತೆಗೆ ಕಾಂಗ್ರೆಸ್‍ನಿಂದ ಬಿಜೆಪಿಗೆ ಹೋಗಿರುವವರ ಕ್ಷೇತ್ರಗಳಲ್ಲಿ ಇನ್ನೂ ಸಮರ್ಥ ಅಭ್ಯರ್ಥಿಗಳು ಸಿಕ್ಕಿಲ್ಲ.

ಇದು ಕಾಂಗ್ರೆಸ್‍ಗೆ ಸವಾಲಾಗಿದೆ. ಜೆಡಿಎಸ್‍ನಲ್ಲಿ ಹಾಲಿ ಶಾಸಕರ ಪೈಕಿ ಐವರು ಗೆಲ್ಲುವುದು ಕಷ್ಟ ಎಂದು ಕಾಂಗ್ರೆಸ್ ಹಾಗೂ ಬಿಜೆಪಿಯತ್ತ ತಮ್ಮ ಚಿತ್ತ ಹರಿಸಿರುವವರೂ ಇದ್ದಾರೆ.

ಇನ್ನು ಹಳೇ ಮೈಸೂರು ಭಾಗದಲ್ಲಿ ತಮ್ಮ ಸ್ಥಾನಗಳನ್ನು ಹಾಗೇ ಉಳಿಸಿಕೊಳ್ಳುವುದರ ಜೊತೆಗೆ ಹುಣಸೂರು, ಕೆ.ಆರ್.ನಗರ ಮತ್ತಿತರ ಕ್ಷೇತ್ರಗಳ ಮೇಲೂ ಜೆಡಿಎಸ್ ಕಣ್ಣಿಟ್ಟಿದೆ. ಇದರ ಜೊತೆಗೆ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದ ಹಲವು ಕ್ಷೇತ್ರಗಳ ಮೇಲೂ ಕಣ್ಣಿಟ್ಟಿರುವ ಜೆಡಿಎಸ್, ಹೊಸ ಮುಖಗಳ ಹುಡುಕಾಟದಲ್ಲಿದೆ.

Articles You Might Like

Share This Article