ಲೋಕಸಭಾ ಚುನಾವಣೆಗೆ 28 ಕ್ಷೇತ್ರಗಳಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸಿದ್ದ

BJP--01

ಬೆಂಗಳೂರು,ಜೂ.25- ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಬಿಜೆಪಿ, ರಾಜ್ಯದ 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ವರಿಷ್ಠರ ಅಂಕಿತಕ್ಕೆ ಕಳುಹಿಸಲು ಮುಂದಾಗಿದೆ. ಕೆಲ ದಿನಗಳ ಹಿಂದೆ ಆರ್‍ಎಸ್‍ಎಸ್ ನಾಯಕರ ಜೊತೆ ರಾಜ್ಯ ಬಿಜೆಪಿ ಮುಖಂಡರು ಮಾತುಕತೆ ನಡೆಸಿದ್ದ ವೇಳೆ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸುವಂತೆ ಸೂಚನೆ ಕೊಟ್ಟಿತ್ತು.

ಸಂಘ ಪರಿವಾರದ ಸಲಹೆಯಂತೆ ಹಾಲಿ ಸಂಸದರ ಕ್ಷೇತ್ರಗಳಿಗೆ ಹೊಸ ಮುಖಗಳ ಶೋಧಕ್ಕೆ ಬಿಜೆಪಿ ಮುಂದಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 17 ಸಂಸದರು ಗೆದ್ದಿದ್ದ ಬಿಜೆಪಿಗೆ ಈ ಬಾರಿ ಅಷ್ಟು ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಬದಲಾದ ಪರಿಸ್ಥಿತಿಯಲ್ಲಿ ಕಾಂಗ್ರೆಸ್- ಜೆಡಿಎಸ್ ದೋಸ್ತಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದೆ. ಇದೀಗ ಬರಲಿರುವ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಎರಡು ಪಕ್ಷಗಳು ಸಜ್ಜಾಗಿವೆ.  ಬಿಜೆಪಿಯ ಅಶ್ವಮೇಧ ಯಾಗವನ್ನು ಕಟ್ಟಿ ಹಾಕಲು ತನ್ನ ಎಲ್ಲಾ ಹಳೆಯ ವೈಷಮ್ಯಗಳನ್ನು ಮರೆತಿರುವ ಕಾಂಗ್ರೆಸ್- ಜೆಡಿಎಸ್ ಕಮಲ ಪಡೆಯನ್ನು ಶತಾಯಗತಾಯ ಸೋಲಿಸಲು ಪಣ ತೊಟ್ಡಿರುವುದು ಗುಟ್ಟಾಗಿ ಉಳಿದಿಲ್ಲ.  ದೋಸ್ತಿ ಸರ್ಕಾರದ ಈ ನಡೆ ಬಿಜೆಪಿಯನ್ನು ತುಸು ನಿದ್ದೆಗೆಡುವಂತೆ ಮಾಡಿರುವುದೂ ಸುಳ್ಳಲ್ಲ. ಹೀಗಾಗಿ ಈಗಿನಿಂದಲೇ ಚುನಾವಣೆಗೆ ಅಗತ್ಯ ರಣತಂತ್ರ ರೂಪಿಸಿ ಹೆಚ್ಚಿನ ಸ್ಥಾನ ಗೆಲ್ಲಲು ಕಾರ್ಯತಂತ್ರ ಹೆಣೆಯುವಂತೆ ಆರ್‍ಎಸ್‍ಎಸ್ ಇತ್ತೀಚಿಗೆ ನಡೆದ ಸಭೆಯಲ್ಲಿ ಸಲಹೆ ಮಾಡಿತ್ತು.

ರಾಜ್ಯಕ್ಕೆ ಅಮಿತ್ ಷಾ ಆಗಮನ:
ಇನ್ನು ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳಿಗಿಂತ ಈಗಲೇ ಮತಬೇಟೆ ಆರಂಭಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಚುನಾವಣಾ ಚಾಣಾಕ್ಷ ಅಮಿತ್ ಷಾ ಈಗಾಗಲೇ ದೇಶಾದ್ಯಂತ ತಮ್ಮ ಪ್ರವಾಸವನ್ನು ಆರಂಭಿಸಿದ್ದಾರೆ. ಜುಲೈ ತಿಂಗಳಲ್ಲಿ ಪ್ರತಿಯೊಂದು ರಾಜ್ಯಕ್ಕೆ ಭೇಟಿ ಕೊಡಲಿರುವ ಅಮಿಶ್ ಷಾ ಅವರು ಕರ್ನಾಟಕಕ್ಕೂ ಭೇಟಿ ನೀಡಲಿದ್ದಾರೆ. ಈ ವೇಳೆಗೆ ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯ ನಾಯಕರು ಅಭ್ಯರ್ಥಿಗಳ ಶೋಧ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಕ್ಷೇತ್ರ ಬದಲಾವಣೆ:
ಮೂಲಗಳ ಪ್ರಕಾರ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೆಲವು ಹಾಲಿ ಲೋಕಸಭಾ ಸದಸ್ಯರ ಕ್ಷೇತ್ರವನ್ನು ಬದಲಾಯಿಸಲು ತೀರ್ಮಾನಿಸಿದೆ. ಒಂದೊಂದು ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ನಾಯಕರು ಗೆಲ್ಲುವ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ನಾಯಕರು ಮನವೊಲಿಸಿದ್ದಾರೆ.

ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ವಿಧಾನಪರಿಷತ್‍ಗೆ ಆಯ್ಕೆ ಮಾಡುವುದು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್.ಮುನಿರಾಜು ಅವರಿಗೆ ಟಿಕೆಟ್ ನೀಡುವ ಬಗ್ಗೆ ಮಾತುಕತೆ ನಡೆದಿದೆ.  ಚಿಕ್ಕಬಳ್ಲಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವರಾದ ಕಟ್ಟಾಸುಬ್ರಹ್ಮಣ್ಯ ನಾಯ್ಡು ಇಲ್ಲವೇ ಬಿ.ಎನ್.ಬಚ್ಚೇಗೌಡ, ಕೋಲಾರಕ್ಕೆ ಮಾಜಿ ವಿಧಾನಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಚಾಮರಾಜನಗರ ಮೀಸಲು ಕ್ಷೇತ್ರದಿಂದ ಮಾಜಿ ಸಚಿವ ಎಂ.ಶಿವಣ್ಣ , ಚಿತ್ರದುರ್ಗದಿಂದ ಜನಾರ್ಧನ ಸ್ವಾಮಿ, ಗುಲ್ಬರ್ಗ ಕ್ಷೇತ್ರದಿಂದ ಸುನೀಲ್ ವಲ್ಯಾಪುರೆ, ಬಳ್ಳಾರಿಯಿಂದ ಮಾಜಿ ಸಂಸದರಾದ ಎಂ.ವೈ. ಹನುಮಂತಪ್ಪ ಇಲ್ಲವೇ ರಾಮುಲು ಸಹೋದರಿ ಜೆ.ಶಾಂತ, ಹಾಸನದಿಂದ ನವಿಲೆ ಪ್ರಕಾಶ್, ತುಮಕೂರಿನಿಂದ ಮಾಜಿ ಸಚಿವ ಜಿ.ಎಚ್.ಬಸವರಾಜ್ ಹೆಸರುಗಳು ಕೇಳಿಬಂದಿದೆ. ಉಳಿದಂತೆ ಹಾಲಿ ಸಂಸದರಲ್ಲಿ ಶೋಭಾ ಕರಂದ್ಲಾಜೆ ಹೊರತುಪಡಿಸಿದರೆ ಬಹುತೇಕ ಎಲ್ಲ ಸಂಸದರಿಗೆ ಟಿಕೆಟ್ ನೀಡಲು ಪಕ್ಷ ತೀರ್ಮಾನಿಸಿದೆ.

ಸದ್ಯದಲ್ಲೇ ನಡೆಯಲಿರುವ ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಶೀಘ್ರವೇ ಪ್ರಕಟಿಸಬೇಕೆಂಬ ಒತ್ತಡವೂ ಹೆಚ್ಚಾಗಿದೆ. ಶಿವಮೊಗ್ಗದಿಂದ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಇಲ್ಲವೇ ಬಿ.ವೈ.ವಿಜಯೇಂದ್ರ ಹಾಗೂ ಬಳ್ಳಾರಿಯಿಂದ ಶ್ರೀರಾಮುಲು ಸಹೋದರಿಯನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ.

ಅಭ್ಯರ್ಥಿಗಳ ವಿವರ:
ಬೆಂಗಳೂರು ದಕ್ಷಿಣ -ಹೆಚ್.ಎನ್.ಅನಂತಕುಮಾರ್
ಬೆಂಗಳೂರು ಸೆಂಟ್ರಲ್- ಪಿ.ಸಿ.ಮೋಹನ್
ಎಸ್.ಮುನಿರಾಜು/ಡಿ.ವಿ.ಸದಾನಂದಗೌಡ -ಬೆಂಗಳೂರು ಉತ್ತರ
ಸಿ.ಪಿ.ಯೋಗೇಶ್ವರ್/ತುಳಸಿ ಮುನಿರಾಜು-ಬೆಂಗಳೂರು ಗ್ರಾಮಾಂತರ
ಮೈಸೂರು-ಕೊಡುಗು- ಪ್ರತಾಪ್ ಸಿಂಹ
ಚಾಮರಾಜನಗರ -ಎಂ.ಶಿವಣ್ಣ
ಚಿಕ್ಕಬಳ್ಳಾಪುರ-ಕಟ್ಟಾಸುಬ್ರಹ್ಮಣ್ಯ ನಾಯ್ಡು/ಬಿ.ಎನ್.ಬಚ್ಚೇಗೌಡ
ಕೋಲಾರ-ಡಿ.ಎಸ್.ವೀರಯ್ಯ
ತುಮಕೂರು-ಜಿ.ಎಚ್.ಬಸವರಾಜು
ಚಿತ್ರದುರ್ಗ-ಜನಾರ್ಧನಸ್ವಾಮಿ
ಶಿವಮೊಗ್ಗ-ಬಿ.ವೈ.ರಾಘವೇಂದ್ರ
ದಾವಣಗೆರೆ-ಜಿ.ಎಂ.ಸಿದ್ಧೇಶ್ವರ್
ಹಾವೇರಿ-ಶಿವಕುಮಾರ್ ಉದಾಸೀ
ಧಾರವಾಡ-ಪ್ರಹ್ಲಾದ್ ಜೋಷಿ
ಬೆಳಗಾವಿ-ಸುರೇಶ್ ಅಂಗಡಿ
ಚಿಕ್ಕೋಡಿ-ರಮೇಶ್ ಕತ್ತಿ
ಬಾಗಲಕೋಟೆ-ಪಿ.ಸಿ.ಗದ್ದಿಗೌಡರ್
ವಿಜಾಪುರ-ರಮೇಶ್ ಜಿಗಜಿಣಗಿ
ಬೀದರ್-ಮಲ್ಲಿಕಾರ್ಜುನ ಖೂಬ
ಕಲಬುರಗಿ- ಸುನೀಲ್ ವಲ್ಯಾಪುರೆ
ಕೊಪ್ಪಳ -ಕರಡಿ ಸಂಗಣ್ಣ
ಬಳ್ಳಾರಿ-ಜೆ.ಶಾಂತ/ಎನ್.ವೈ.ಹನುಮಂತಪ್ಪ
ಉಡುಪಿ-ಚಿಕ್ಕಮಗಳೂರು-ಡಿ.ವಿ.ಸದಾನಂದಗೌಡ/ಜಯಪ್ರಕಾಶ್ ಹೆಗಡೆ
ದಕ್ಷಿಣ ಕನ್ನಡ-ನಳೀನ್‍ಕುಮಾರ್ ಕಟೀಲ್
ಉತ್ತರ ಕನ್ನಡ-ಅನಂತಕುಮಾರ್ ಹೆಗಡೆ
ಹಾಸನ-ನವಿಲೆ ಪ್ರಕಾಶ್

Sri Raghav

Admin