Wednesday, January 8, 2025
Homeರಾಜ್ಯಬಸ್‌‍ ಪ್ರಯಾಣ ದರ ಏರಿಕೆಗೆ ಬಿಜೆಪಿ ಖಂಡನೆ

ಬಸ್‌‍ ಪ್ರಯಾಣ ದರ ಏರಿಕೆಗೆ ಬಿಜೆಪಿ ಖಂಡನೆ

BJP condemns bus fare hike

ಬೆಂಗಳೂರು,ಜ.3- ನೂತನ ವರ್ಷಾರಂಭದಲ್ಲೇ ಸರ್ಕಾರಿ ಬಸ್‌‍ ಪ್ರಯಾಣ ದರ ಹೆಚ್ಚಳ ಮಾಡಿ ಪ್ರಯಾಣಿಕರಿಗೆ ಶಾಕ್‌ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ಕಿಡಿಕಾರಿದೆ.ಈ ಕುರಿತು Xನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಕನ್ನಡಿಗರ ಜೇಬಿಗೆ ಮತ್ತೊಮೆ ಕನ್ನ ಹಾಕಿದೆ ಪಿಕ್‌ ಪಾಕೆಟ್‌ ಕಾಂಗ್ರೆಸ್‌‍ ಸರ್ಕಾರ. ಬಸ್‌‍ ಪ್ರಯಾಣದ ದರವನ್ನು ಶೇ.15ರಷ್ಟು ಏರಿಸಿರುವುದು ಹೊಸ ವರ್ಷದ ಆರಂಭದಲ್ಲಿ ಕನ್ನಡಿಗರಿಗೆ ಮಾಡುತ್ತಿರುವ ಮಹಾದ್ರೋಹ.

ಸಿಎಂ ಸಿದ್ದರಾಮಯ್ಯ ಅವರೇ ಎಲ್ಲಾ ವಸ್ತುಗಳ ದರವನ್ನು ಏರಿಸುವುದೇ ನಿಮ ಅಸಲಿ ಕರ್ನಾಟಕ ಮಾಡೆಲ್‌ ಆಗಿದೆಯಾ? ಮಹಾನ್‌ ಸುಳ್ಳುಗಾರ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರೆ, ಸಾರಿಗೆ ಸಂಸ್ಥೆಗಳು ಹೆಚ್ಚಿನ ಲಾಭದಲ್ಲಿವೆ ಎಂದಾದ ಮೇಲೆ ಬಸ್‌‍ ಪ್ರಯಾಣ ದರವನ್ನು ಏರಿಸಿರುವುದು ಯಾವ ಪುರುಷಾರ್ಥ ಸಾಧನೆಗಾಗಿ? ಎಂದು ಪ್ರಶ್ನಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೋಸ್ಟ್‌ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ..ಯಾವ ಮುಖವಿಟ್ಟುಕೊಂಡು ನೀವು ರಾಜ್ಯದ ಜನತೆಗೆ ಪಂಚಭಾಗ್ಯ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತೀರಿ? ಶಕ್ತಿ ಯೋಜನೆಗೆ ಹಣ ಒದಗಿಸಲು ವಿಫಲವಾಗಿರುವ ನೀವು ಸಾರಿಗೆ ಸಂಸ್ಥೆಯು ನಷ್ಟದ ಹಾದಿಯನ್ನು ತುಳಿಯಲು ಕಾರಣರಾಗಿದ್ದೀರಿ.

ಮಹಿಳೆಯರಿಗೆ ಉಚಿತ, ಪುರುಷರಿಗೆ ಅದರ ಹೊರೆ ಖಚಿತ ಎಂಬುದನ್ನು ಇದೀಗ ಶೇ.15ರಷ್ಟು ಬಸ್‌‍ ಪ್ರಯಾಣ ದರ ಏರಿಸುವ ಮೂಲಕ ಸಾರಿಗೆ ವ್ಯವಸ್ಥೆ ಆಶ್ರಯಿಸಿರುವ ಜನರಿಗೆ ಬರೆ ಎಳೆದಿದ್ದೀರಿ.ಶಕ್ತಿ ಯೋಜನೆ ಹೇಗಾಗಿದೆ ಎಂದರೆ ವಾಣಿಜ್ಯ ಉತ್ಪನ್ನಗಳ ಮಾರಾಟದ ಆಕರ್ಷಣೆಗೆ ಮಳಿಗೆಗಳಲ್ಲಿ ಬೈ-1 ಗೆಟ್‌-2 (ಒಂದು ಖರೀದಿಸಿದರೆ-ಒಂದು ಉಚಿತ) ಬೋರ್ಡ್‌ ಪ್ರದರ್ಶಿಸುವ ಮಾದರಿಯಲ್ಲಿ ರಾಜ್ಯದ ಜನರಿಗೆ ಟೋಪಿ ಹಾಕಲು ಹೊರಟಿದ್ದೀರಿ. ಶೇ.15 ರಷ್ಟು ಸಾರಿಗೆ ದರ ಹೆಚ್ಚಳದ ಕಾಂಗ್ರೆಸ್‌‍ ಸರ್ಕಾರದ ನಿರ್ಧಾರ ಅವೈಜ್ಞಾನಿಕ ಹಾಗೂ ಜನವಿರೋಧಿಯಾಗಿದ್ದು ಇದನ್ನು ವಿರೋಧಿಸಿ ಬಿಜೆಪಿ ಜನರ ಪರ ದನಿ ಎತ್ತಲಿದೆ ಎಂದು ತಿಳಿಸಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರು ಪೋಸ್ಟ್‌ ಮಾಡಿ, ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್‌‍ ಸರ್ಕಾರ ಈಗ ಬಸ್‌‍ವನ್ನು ದರ ಶೇ.15 ಏರಿಕೆ ಮಾಡಿದೆ. ಸಿಎಂ ಸಿದ್ದರಾಮಯ್ಯ ಅವರೇ, ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದೀರಲ್ಲ ನಿಮ ಸರ್ಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು? ಎಂದು ಪ್ರಶ್ನಿಸಿದ್ದಾರೆ.

ಅಸಮರ್ಥ ಸಿಎಂ ಸಿದ್ದರಾಮಯ್ಯ ಅವರ ದುರಾಡಳಿತದಲ್ಲಿ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಅನಿವಾರ್ಯ, ಆಸ್ತಿ ತೆರಿಗೆ ಏರಿಕೆ ಅನಿವಾರ್ಯ, ಮುದ್ರಾಂಕ ದರ ಏರಿಕೆ ಅನಿವಾರ್ಯ, ನೀರಿನ ದರ ಏರಿಕೆ ಅನಿವಾರ್ಯ, ಜನನ ಮರಣ ಪ್ರಮಾಣಪತ್ರ ಶುಲ್ಕ ಏರಿಕೆ ಅನಿವಾರ್ಯ, ಹಾಲಿನ ದರ ಏರಿಕೆ ಅನಿವಾರ್ಯ, ಬಸ್‌‍ ದರ ಏರಿಕೆ ಅನಿವಾರ್ಯವಾಗಿ ಹೋಗಿದೆ. ಶೀಘ್ರದಲ್ಲೇ ಕನ್ನಡಿಗರು ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ದಂಗೆ ಏಳುವುದೂ ಅನಿವಾರ್ಯ ಎಂದು ಹೇಳಿದ್ದಾರೆ.

RELATED ARTICLES

Latest News