ಬೆಂಗಳೂರು,ಆ.21- ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಎಲ್ಲ ಪಕ್ಷಗಳ ಸಹಕಾರ ಅಗತ್ಯ ಎಂಬ ಮುಖ್ಯಮಂತ್ರಿಯವರ ಮನವಿ ಹೊರತಾಗಿ, ಕೊಡಗಿನಲ್ಲಿ ಮೊಟ್ಟೆ ಸಂಘರ್ಷಕ್ಕೆ ಪ್ರತಿಭಟನೆಗಳು ವಿಪರೀತಕ್ಕೆ ತಲುಪುತ್ತಿವೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರು ಇತ್ತೀಚೆಗೆ ಕೊಡುಗು ಪ್ರವಾಸ ಕೈಗೊಂಡಿದ್ದಾಗ ಬಿಜೆಪಿ ಕಾರ್ಯಕರ್ತರು ವಿರೋಧಿಸಿ ಕಪ್ಪು ಬಾವುಟ ಪ್ರದರ್ಶಿಸಿದರಲ್ಲದೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನು ಸವಾಲಾಗಿ ಪರಿಗಣಿಸಿದ ಕಾಂಗ್ರೆಸ್ ಆ.26ರಂದು ಕೊಡಗಿನಲ್ಲಿ ಮಡಿಕೇರಿ ಚಲೋ ಹಮ್ಮಿಕೊಂಡಿದೆ. ದೇವರಾಜ ಅರಸು ಅವರ ಹುಟ್ಟೂರು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕಲ್ಲಳ್ಳಿಯಿಂದ ಮಡಿಕೇರಿವರೆಗೂ ಪಾದಯಾತ್ರೆ ನಡೆಸುವ ಚರ್ಚೆಗಳು ನಡೆದಿವೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಅದೇ ದಿನ ಜಾಗೃತಿ ಸಮಾವೇಶಕ್ಕೆ ಕರೆ ನೀಡಿದೆ.
ಇದು ಪೊಲೀಸರಿಗೆ ತಲೆನೋವಿನ ವಿಷಯವಾಗಿ ಪರಿಣಮಿಸಿದೆ. ಕಾಂಗ್ರೆಸ್ ಸಿದ್ದರಾಮೋತ್ಸವ ಮತ್ತು ಸ್ವತಂತ್ರ ನಡಿಗೆ ಯಶಸ್ವಿಯ ಉತ್ತುಂಗದಲ್ಲಿದ್ದು, ಪ್ರತಿಭಟನೆ ಮತ್ತು ಸಮಾವೇಶವೆಂದರೆ ಕಾರ್ಯಕರ್ತರು ಮುನ್ನುಗ್ಗಿ ಬರುತ್ತಿದ್ದಾರೆ.
ಮಡಿಕೇರಿ ಚಲೋಗೆ ಸ್ಥಳೀಯರಷ್ಟೇ ಅಲ್ಲದೆ ನೆರೆಯ ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ಕಾರ್ಯಕರ್ತರು ಆಗಮಿಸುವ ನಿರೀಕ್ಷೆಯಿದೆ.
ಬಿಜೆಪಿ ಕೂಡ ಜಾಗೃತಿ ಸಮಾವೇಶದ ಹೆಸರಿನಲ್ಲಿ ಜನರನ್ನು ಸೇರಿಸುತ್ತಿರುವುದು ಭದ್ರತಾ ದೃಷ್ಟಿಯಿಂದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನೆರೆಯ ಜಿಲ್ಲೆಗಳಿಂದ ಬರುವ ಕಾರ್ಯಕರ್ತರನ್ನು ಗಡಿಭಾಗದಲ್ಲೇ ತಡೆದು ನಿಲ್ಲಿಸುವ ತಯಾರಿಯನ್ನು ಪೊಲೀಸರು ಮಾಡಿಕೊಂಡಿದ್ದಾರೆ.