ಬೆಂಗಳೂರು,ಆ.22- ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದ ಸೃಷ್ಟಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಇದೇ 26ರಂದು ಹಮ್ಮಿಕೊಂಡಿರುವ ಎಸ್‍ಪಿ ಕಚೇರಿಗೆ ಮುತ್ತಿಗೆಗೆ ಪ್ರತಿಯಾಗಿ ಬಿಜೆಪಿ ಕೂಡ ಅಂದೇ ಮಡಿಕೇರಿಯಲ್ಲಿ ಜನ ಜಾಗೃತಿ ಸಮಾವೇಶ ಮಾಡಲು ಮುಂದಾಗಿದೆ.
ಶತಾಯಗತಾಯ ಕಾಂಗ್ರೆಸ್‍ನ ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಅವಕಾಶ ನೀಡಬಾರದು ಎಂದು ರಾಜ್ಯ ಘಟಕ ಮಡಿಕೇರಿ ಜಿಲ್ಲಾ ಘಟಕಕ್ಕೆ ಸೂಚನೆ ಕೊಟ್ಟಿದ್ದು, 26ರಂದೇ ಬಿಜೆಪಿಯಿಂದ ಬೃಹತ್ ಶಕ್ತಿ ಪ್ರದರ್ಶನ ನಡೆಯಬೇಕೆಂದು ಸೂಚನೆ ನೀಡಿದೆ.
ಯಾವುದೇ ಕಾರಣಕ್ಕೂ ಬಳ್ಳಾರಿ ಪಾದಯಾತ್ರೆ ರೀತಿ ಲಾಭ ಮಾಡಿಕೊಳ್ಳಲು ಬಿಡಬೇಡಿ. ಸುಮ್ಮನೆ ಕೂರಬೇಡಿ ಎಂದು ಕೊಡಗು ಜಿಲ್ಲೆಯ ಇಬ್ಬರು ಶಾಸಕರಿಗೆ ರಾಜ್ಯ ಬಿಜೆಪಿ ಘಟಕ ಬೆಂಬಲ ಸೂಚಿಸಿದೆ. ಸಿದ್ದರಾಮಯ್ಯನವರ ಅಸ್ತ್ರಕ್ಮೆ ಬಿಜೆಪಿ ಕೂಡ ಪ್ರತಿ ಅಸ್ತ್ರ ಬಳಸಲು ಸಜ್ಜಾಗಿದೆ.
ಚುನಾವಣೆ ವರ್ಷ ಇರುವಾಗ ಅವರ ಆರೋಪ, ಪ್ರತಿಭಟನೆಗಳಿಗೆ ಪ್ರತಿಕ್ರಿಯೆ ನೀಡಲೇಬೇಕು. ಈ ಹಿಂದೆ ಬಳ್ಳಾರಿ ಪಾದಯಾತ್ರೆ ವೇಳೆ ಬಿಜೆಪಿಯಿಂದ ಪ್ರತಿ ಅಸ್ತ್ರ ದೊಡ್ಡ ಮಟ್ಟದಲ್ಲಿ ಪ್ರಯೋಗ ಆಗಿರಲಿಲ್ಲ. ಇದು ಸಹಜವಾಗಿಯೇ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‍ಗೆ ದೊಡ್ಡ ಪುಷ್ಟಿ ನೀಡಿತ್ತು.
ಕೊಡಗಿನಲ್ಲಿ ಬಿಜೆಪಿ ಪ್ರಾಬಲ್ಯ ದೊಡ್ಡ ಮಟ್ಟದಲ್ಲಿ ಇದೆ. ಅಲ್ಲಿಯೇ ಉತ್ತರ ಕೊಡಿ ಎಂದು ಕೊಡಗು ಭಾಗದ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯಗೆ ಪಕ್ಷದ ಹಿರಿಯ ನಾಯಕರು ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಿದ್ದರಾಮಯ್ಯ ಟಿಪ್ಪು ಪರ ಬ್ಯಾಟಿಂಗ್ ಮಾಡುತ್ತಿರುವುದು ಮತ್ತು ಅದರ ಜೊತೆಗೆ ಈಗ ಸಾವರ್ಕರ್ ವಿರುದ್ಧ ಆಕ್ರೋಶವನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಬಿಜೆಪಿ ಸಿದ್ಧವಾಗಿದ್ದು ಆಗಸ್ಟ್ 26ರಂದು ಕಾಂಗ್ರೆಸ್ ಪ್ರತಿಭಟಿಸಿದರೆ ಅವತ್ತೇ ಬಿಜೆಪಿಯಿಂದ ಪ್ರತಿಭಟನೆಗೆ ಯೋಜನೆ ರೂಪಿಸಲಾಗಿದೆ.
ಅಂದು ಕಾಂಗ್ರೆಸ್ ಘಟಕದಿಂದ ಮಡಿಕೇರಿ ಚಲೋ ನಡೆದರೆ ಇದಕ್ಕೆ ಟಾಂಗ್ ಕೊಡಲು ರಾಜ್ಯ ಬಿಜೆಪಿ ಕೂಡ ಸಿದ್ಧತೆ ನಡೆಸುತ್ತಿದೆ. ಒಟ್ಟಿನಲ್ಲಿ ಶುಕ್ರವಾರ ಮಡಿಕೇರಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಶಕ್ತಿ ಪ್ರದರ್ಶನ ನಡೆಯಲಿದೆ.