ಬೆಂಗಳೂರು,ಜ.10- ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ 10 ದಿನಗಳ ಪಾದಯಾತ್ರೆ ನಡೆಸುತ್ತಿರುವುದರಿಂದ ಇದಕ್ಕೆ ಬ್ರೇಕ್ ಹಾಕಲು ಬಿಜೆಪಿ ಈಗ ಪ್ಲಾನ್ ಬಿ ಮೊರೆಹೋಗಿದೆ. ಮೇಕೆದಾಟುವಿನಿಂದ ಬೆಂಗಳೂರುವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಈ ಪಾದಯಾತ್ರೆಗೆ ಬ್ರೇಕ್ ಹಾಕಲು ಹಕ್ಕುಚ್ಯುತಿ ಆತಂಕದಿಂದ ಬಿಜೆಪಿ ಪ್ಲಾನ್-ಎ ಕೈಬಿಟ್ಟು ಪ್ಲಾನ್-ಬಿಗೆ ಮುಂದಾಗಿದೆ.
ರಾಜ್ಯದಲ್ಲಿ ಕೋವಿಡ್ ಕಠಿಣ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ವಾರಾಂತ್ಯದ ನಿಷೇಧಾಜ್ಞಾ ಜಾರಿಗೊಳಿಸಿದ್ದರೂ ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಾಗಿಲ್ಲ. ಸಂಗಮದಲ್ಲಿ ವಿಧ್ಯು ಕ್ತವಾಗಿ ಪಾದಯಾತ್ರೆಗೆ ಚಾಲನೆ ಸಿಕ್ಕಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಎರಡೂ ಸದನಗಳ ಕಾಂಗ್ರೆಸ್ ಸದಸ್ಯರು ಪಾದಯಾತ್ರೆಯಲ್ಲಿ ಭಾಗವಹಿಸಿರುವುದರಿಂದ ಪೊಲೀಸ್ ಬಲ ಪ್ರಯೋಗಿಸಿ ಪಾದಯಾತ್ರೆ ತಡೆದರೆ ಸದನದಲ್ಲಿ ಕಾಂಗ್ರೆಸ್ ಸದಸ್ಯರು ಹಕ್ಕುಚ್ಯುತಿ ಮಂಡಿಸುವ ಸಾಧ್ಯತೆ ಇದೆ.
ಮತ್ತೊಂದು ವಿವಾದದಲ್ಲಿ ಸಿಲುಕುವ ಇರಾದೆ ಯಾಕೆ ಎನ್ನುವ ಕಾರಣಕ್ಕೆ ಪಾದಯಾತ್ರೆ ತಡೆಯುವ ಪ್ಲಾನ್-ಎ ಬದಲು ಕೌಂಟರ್? ಕೊಡಲು ಪ್ಲಾನ್-ಬಿಗೆ ರಾಜ್ಯ ಕೇಸರಿ ಪಡೆ ಸಜ್ಜಾಗಿದೆ. ಪ್ಲಾನ್-ಬಿ ಪ್ರಕಾರ ಪ್ರತಿ ಹಂತದಲ್ಲಿಯೂ ಕೌಂಟರ್ ಟಾಂಗ್ ಕೊಡುವ ಟಾಸ್ಕ್‍ನ್ನು ರಾಜ್ಯ ಬಿಜೆಪಿ ನಾಯಕರಿಗೆ ನೀಡಲಾಗಿದೆ. ಪಕ್ಷದ ಹಿರಿಯ ನಾಯಕರು, ರಾಜ್ಯ ಪದಾಕಾರಿಗಳು ಮೇಕೆದಾಟು ಪಾದಯಾತ್ರೆಗೆ ಪ್ರತಿಯಾಗಿ ಯೋಜನೆ ಕುರಿತು ಜನತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ನೀಡಲಿದ್ದಾರೆ.
ಟ್ವೀಟ್‍ಗಳ ಮೂಲಕ ಕಾಂಗ್ರೆಸ್‍ಗೆ ತಿರುಗೇಟು ನೀಡಲಿದ್ದಾರೆ. ಮಾಧ್ಯಮ ವಕ್ತಾರರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮಾಧ್ಯಮಗೋಷ್ಠಿ ನಡೆಸಿ ವಿವರ ನೀಡಲಿದ್ದಾರೆ. ಪಾದಯಾತ್ರೆ ಉದ್ದಕ್ಕೂ ಕಾಂಗ್ರೆಸ್ ನಾಯಕರು ಮಾಡುವ ಆರೋಪಗಳಿಗೆ ತಕ್ಷಣವೇ ಪ್ರತಿಕ್ರಿಯೆ ನೀಡಿ ಸತ್ಯವನ್ನು ಜನರೆದುರು ಇಡುವ ಕೆಲಸಕ್ಕೆ ಕೇಸರಿಪಡೆ ಸಿದ್ಧವಾಗಿದೆ.
ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ವಿಚಾರದಲ್ಲಿ ಬಿಜೆಪಿ ವರ್ಚಸ್ಸಿಗೆ ಧಕ್ಕೆಯಾಗದಂತೆ ಎಚ್ಚರವಹಿಸಬೇಕು ಎಂದು ರಾಜ್ಯ ಘಟಕ ಅಲರ್ಟ್ ಆಗಿದೆ.
# ಸಚಿವ ಗೋವಿಂದ ಕಾರಜೋಳಗೆ ಮಾಹಿತಿ :
ಪಾದಯಾತ್ರೆಯ ಆರಂಭದಿಂದಲೂ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಿರುವ ಬಿಜೆಪಿ ಎರಡು ಪುಟಗಳ ಜಾಹೀರಾತಿನಲ್ಲಿ ಮೇಕೆದಾಟು ಯೋಜನೆ ನಡೆದು ಬಂದ ಹಾದಿ, ವಿಳಂಬಕ್ಕೆ ಕಾರಣ, ಯಾರಿಂದ ವಿಳಂಬ, ಕೋರ್ಟ್ ಪ್ರಕರಣಗಳು ಹೀಗೆ ಸಮಗ್ರವಾದ ಮಾಹಿತಿ ನೀಡಿ ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಕಾರಣದ್ದಾಗಿದೆ ಎನ್ನುವ ಎಂಬ ಸಂದೇಶ ಜನರಿಗೆ ತಲುಪಿಸುತ್ತಿದೆ.
ಇದರ ಜೊತೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಪ್ರತಿ ಇಂಚಿಂಚು ಮಾಹಿತಿಯನ್ನು ಹೊರಗಿಡುವಂತೆ ತಿಳಿಸಲಾಗಿದೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಲು ನಿರ್ದೇಶನ ನೀಡಲಾಗಿದೆ. ಪಕ್ಷದ ಹಿರಿಯ ನಾಯಕರು ಕೂಡ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡಿ ಬಿಜೆಪಿ ಸರ್ಕಾರವನ್ನು ಸಮರ್ಥಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಕಾಂಗ್ರೆಸ್ ಪಾದಯಾತ್ರೆ ತಡೆಯಲು ಬಿಜೆಪಿ ಕೌಂಟರ್ ಟಾಂಗ್ ನೀಡುವ ಪ್ಲಾನ್-ಬಿ ಮೊರೆ ಹೋಗಿದೆ. ಆದರೂ ಸರ್ಕಾರ ಕೋವಿಡ್ ನಿಯಮದ ಅನ್ವಯ ಪಾದಯಾತ್ರೆ ಸುಗಮವಾಗಿ ನಡೆಯಲು ಬಿಡಲಿದೆಯಾ ಅಥವಾ ಕ್ರಮಕ್ಕೆ ಮುಂದಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.
