ಬಿಜೆಪಿ-ಕಾಂಗ್ರೆಸ್ ನಡುವೆ ಪಾದಯಾತ್ರೆ ಫೈಟ್

Social Share

ಬೆಂಗಳೂರು, ಜ.5- ರಾಜ್ಯದಲ್ಲಿ ಒಂದೆಡೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿದ್ದರೆ, ರಾಜಕೀಯ ಪಕ್ಷಗಳ ನಡುವೆ ಪಾದಯಾತ್ರೆ ಫೈಟ್ ಜೋರಾಗಿದೆ. ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ಜ.9ರಿಂದ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ನಡೆಸಿಯೇ ಸಿದ್ಧ ಎಂದು ಹಠಕ್ಕೆ ಬಿದ್ದಿದೆ.
ಇದರ ನಡುವೆ ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಾದಯಾತ್ರೆ ನಿಲ್ಲಿಸಬೇಕು. ಈಗಾಗಲೇ ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು, ಅದು ಪಾದಯಾತ್ರೆಗೂ ಅನ್ವಯಿಸುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಕೊರೊನಾ ಕಠಿಣ ನಿಯಮಗಳು ಜನಸಾಮಾನ್ಯರಿಗೆ ಅನ್ವಯವಾಗುವಂತೆ ಕಾಂಗ್ರೆಸ್ ಪಕ್ಷಕ್ಕೂ ಅನ್ವಯವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ನಿಯಂತ್ರಣಕ್ಕಾಗಿ ನೈಟ್‍ಕಫ್ರ್ಯೂ, ವೀಕೆಂಡ್ ಕಫ್ರ್ಯೂ ಜಾರಿಯಾಗಿದೆ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಪಾಲಿಸಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್, ರಾಜಕೀಯ ದುರುದ್ದೇಶ ಹಾಗೂ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ತಡೆಯುವ ಹಿನ್ನೆಲೆಯಲ್ಲಿಯೇ ಸರ್ಕಾರ ಕೋವಿಡ್-19 ನಿಯಂತ್ರಣ ನೆಪದಲ್ಲಿ ನಿಯಮಗಳನ್ನು ಜಾರಿಗೊಳಿಸಿದೆ. ಉದ್ದೇಶಿತ ಪಾದಯಾತ್ರೆಯನ್ನು ನಿಲ್ಲಿಸುವುದಿಲ್ಲ. ಬಿಜೆಪಿಗೊಂದು ನ್ಯಾಯ, ಇತರರಿಗೊಂದು ನ್ಯಾಯವೇ? ದೇಶದ ಹಲವೆಡೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಮುಖಂಡರು ರ್ಯಾಲಿ, ಸಮಾರಂಭಗಳನ್ನು ಮಾಡುತ್ತಾರೆ. ನಾವು ಮಾಡಿದರೆ ತಪ್ಪೇನು? ನಾವು ಎಲ್ಲ ಮಾರ್ಗಸೂಚಿಗಳನ್ನು ಪಾಲಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೊರೊನಾ ನಿಯಂತ್ರಿಸಲು ಸರ್ಕಾರ ಕಫ್ರ್ಯೂ ವಿಸಿಲ್ಲ, ಲಾಕ್‍ಡೌನ್ ಮಾಡಿಲ್ಲ. ಇದು ಬಿಜೆಪಿ ಕಫ್ರ್ಯೂ ಮತ್ತು ಬಿಜೆಪಿ ಲಾಕ್‍ಡೌನ್ ಆಗಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆಯೇ ಹೊರತು ಒಳ್ಳೆಯದಂತೂ ಆಗುವುದಿಲ್ಲ ಎಂದು ಗುಡುಗಿದ್ದಾರೆ.
ಮೇಕೆದಾಟು ಪಾದಯಾತ್ರೆ ಸಂಬಂಧ ಪರಸ್ಪರ ರಾಜಕೀಯ ಕೆಸರೆರಚಾಟ ಜೋರಾಗಿದೆ. ಇದರ ನಡುವೆಯೇ ಪಾದಯಾತ್ರೆಗೆ ಭರದ ಸಿದ್ಧತೆಗಳು ನಡೆದಿವೆ. ಈಗಾಗಲೇ 10 ಜಿಲ್ಲೆಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆದಿದೆ. ವಿವಿಧ ಜಿಲ್ಲೆಗಳಿಂದ ಪಾದಯಾತ್ರೆಗೆ ಜನ ಬರಲು ತಯಾರಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಇದರಿಂದ ನಾವು ಹಿಂದೆ ಸರಿಯುವುದಿಲ್ಲ. ವೈದ್ಯರ ತಂಡ ಹಾಗೂ ಅಗತ್ಯ ಮಾರ್ಗಸೂಚಿಗಳೊಂದಿಗೆ ಪಾದಯಾತ್ರೆ ನಡೆಸುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಸರ್ಕಾರ ಕೊರೊನಾ ವೈರಸ್ ಮತ್ತು ಓಮಿಕ್ರಾನ್ ತಡೆಗಟ್ಟಲು ದಿನೇ ದಿನೇ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಶಾಲೆಗಳನ್ನು ಬಂದ್ ಮಾಡಿದೆ. ಪಬ್, ಬಾರ್, ರೆಸ್ಟೋರೆಂಟ್‍ಗಳನ್ನು ಕೂಡ ಅರ್ಧ ಪ್ರಮಾಣದಲ್ಲಿ ನಡೆಸಲು ಸೂಚನೆ ನೀಡಿದೆ. ಈ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ.

Articles You Might Like

Share This Article