ಏ.18ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ

ಬೆಂಗಳೂರು,ಏ.10- ಇದೇ 18ರಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಪಕ್ಷ ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಿದೆ. ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ಪಾಲ್ಗೊಳ್ಳಲಿದ್ದು, ಉಪಚುನಾವಣೆ ಬಳಿಕ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಈ ಕುರಿತು ಈಗಾಗಲೇ ಸುಳಿವು ನೀಡಿದ್ದಾರೆ. ಸಭೆಯಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಿದ್ದಾರೆ.

ಬೆಳಗಾವಿ, ಮಸ್ಕಿ ಹಾಗೂ ಬಸವಕಲ್ಯಾಣ ಉಪಚುನಾವಣೆಗಳು ಮುಗಿದ ನಂತರ ಸಭೆ ಸೇರಲಿದೆ, ಈಗಾಗಲೇ ಕೋರ್ ಕಮಿಟಿ ಪುನಾರಚನೆಯಾಗಿ 15 ದಿನಗಳೇ ಕಳೆದಿವೆ. ಕೋರ್ ಕಮಿಟಿ ಸಭೆಯಲ್ಲಿ ಸಚಿವ ಈಶ್ವರಪ್ಪ ಅವರ ಪತ್ರ ಸಂಬಂಧ ಚರ್ಚೆ ನಡಯುವ ಸಾಧ್ಯತೆಯಿದೆ. ಇದರ ಜೊತೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಸಿಎಂ ಯಡಿಯೂರಪ್ಪ ಮತ್ತವರ ಕುಟುಂಬದ ವಿರುದ್ಧ ಮಾಡುತ್ತಿರುವ ಆರೋಪಗಳ ಬಗ್ಗೆಯೂ ಚರ್ಚಿಸಲಾಗುತ್ತದೆ.

ಪ್ರಮುಖವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಆಗಲಿದೆ ಎಂಬ ಸುದ್ದಿ ಹಬ್ಬಿದೆ. ಯಡಿಯೂರಪ್ಪ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಮಾಡಿ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕ ಅದನ್ನು ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ:
ಹೊಸದಾಗಿ ಸಂಪುಟಕ್ಕೆ ಸೇರಿರುವ ಮುರುಗೇಶ್ ನಿರಾಣಿ, ಉಮೇಶ್ ಕತ್ತಿ, ಎಂಟಿಬಿ ನಾಗರಾಜ್, ಆರ್. ಶಂಕರ್ ಅವರಿಗೆ ಯಾವುದೇ ಜಿಲ್ಲೆಗಳ ಉಸ್ತುವಾರಿ ನೀಡಿಲ್ಲ. ಇದರಿಂದ ಹಾಲಿ ಇರುವ ಉಸ್ತುವಾರಿ ಸಚಿವರ ಬದಲಾವಣೆ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪಗೆ ದೂರು ನೀಡಿದ್ದಾರೆ. ಸಚಿವರು ನಮ್ಮ ಕೈಗೆ ಸಿಗುತ್ತಿಲ್ಲ, ಕ್ಷೇತ್ರದ ಕೆಲಸ ಮಾಡಿಕೊಡುತ್ತಿಲ್ಲ ಎಂಬುದು ಪ್ರಮುಖವಾದ ದೂರಾಗಿದೆ. ಈ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಸರ್ಕಾರ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿರುದ್ಧ ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರತಿಪಕ್ಷಗಳು ಸಹ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಶ್ನಿಸುತ್ತಿವೆ. ಈ ಬಗ್ಗೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ.

ಇನ್ನೂ ಸಿಎಂ ಯಡಿಯೂರಪ್ಪ ತಮ್ಮ ಕುಂದು ಕೊರತೆಗಳನ್ನು ಆಲಿಸುತ್ತಿಲ್ಲ ಎಂದು 50 ಶಾಸಕರು ದೂರು ನೀಡಿದ್ದು, ಇದರ ಬಗ್ಗೆಯು ಚರ್ಚೆ ನಡೆಯಲಿದೆ, ಮೂರು ಉಪಚುನಾವಣೆ ಮತ್ತು ಪಕ್ಷವನ್ನು ಬಲಗೊಳಿಸುವ ಬಗ್ಗೆಯೂ ಚರ್ಚಿಸಲಾಗುತ್ತದೆ. ನಳಿನ್ ಕುಮಾರ್ ಕಟೀಲ್ ನೇತೃತ್ವದ ಕೋರ್ ಕಮಿಟಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಡಿವಿ ಸದಾನಂದ ಗೌಡ ಇದ್ದಾರೆ. ಇನ್ನು ಸಚಿವರಾದ ಜಗದೀಶ್ ಶೆಟ್ಟರ್ , ಕೆ.ಎಸ್ ಈಶ್ವರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ , ಸಿ.ಎನ್ ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಆರ್. ಅಶೋಕ್ , ಶ್ರೀರಾಮುಲು ಇದ್ದಾರೆ.

ಜೊತೆಗೆ ನಿರ್ಮಲ್ ಕುಮಾರ್ ಸುರಾನ ( ಬಿಜೆಪಿ ರಾಜ್ಯ ಉಪಾಧ್ಯಕ್ಷ) ಹಾಗೂ ಬಿಪಿ ಅರುಣ್ ಕುಮಾರ್ ( ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಘಟನೆ) ಇವರನ್ನು ಕೋರ್ ಕಮಿಟಿ ಒಳಗೊಂಡಿದೆ. ವಿಶೇಷ ಆಹ್ವಾನಿತರಾಗಿ ಅರುಣ್ ಸಿಂಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಡಿಕೆ ಅರುಣ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಇದ್ದಾರೆ.