ಬಿಜೆಪಿ ಕೋರ್ ಕಮಿಟಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಮತ್ತೊಮ್ಮೆ ಸಾಬೀತು

ಬೆಂಗಳೂರು,ಮೇ 24- ರಾಜ್ಯದ ಪ್ರಮುಖ ತೀರ್ಮಾನಗಳನ್ನು ನಿರ್ಧರಿಸುವ ಬಿಜೆಪಿಯ ಕೋರ್ ಕಮಿಟಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ ಎನ್ನುವುದು ಮತ್ತೊಮ್ಮೆ ರುಜುವಾತಾಗಿದೆ. ಏಕೆಂದರೆ ಕಳೆದ ಹಲವು ವರ್ಷಗಳಿಂದ ಕೋರ್ ಕಮಿಟಿ ಸಭೆ ಕೇಂದ್ರ ವರಿಷ್ಠರಿಗೆ ಕಳುಹಿಸಿದ ಯಾವುದೇ ತೀರ್ಮಾನಗಳನ್ನು ಅಂತಿಮಗೊಳಿಸದೆ ದೆಹಲಿ ತೀರ್ಮಾನವೇ ಅಂತಿಮ ಎಂಬಂತಾಗಿದೆ.

ರಾಜ್ಯಸಭೆ, ವಿಧಾನಪರಿಷತ್, ಪದಾಧಿಕಾರಿಗಳ ನೇಮಕಾತಿ, ನಿಗಮಮಂಡಳಿ ಅಧ್ಯಕ್ಷರು, ವಿಧಾನಪರಿಷತ್‍ಗೆ ನಾಮಕರಣ, ಪಕ್ಷದ ಪ್ರಮುಖ ತೀರ್ಮಾನಗಳು ಕೋರ್ ಕಮಿಟಿಯಲ್ಲಿ ಚರ್ಚೆಯಾಗಿದ್ದರೂ ದೆಹಲಿ ವರಿಷ್ಠರು ಮಾತ್ರ ಸ್ಥಳೀಯರ ನಿರ್ಧಾರಕ್ಕೆ ಮೂರು ಕಾಸಿನ ಬೆಲೆಯನ್ನೂ ಕೊಡುತ್ತಿಲ್ಲ.

ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಅತ್ಯಂತ ಪ್ರಮುಖ ನಾಯಕರೇ ಇದ್ದಾರೆ. ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಸದಾನಂದಗೌಡ, ರಾಜ್ಯ ಸಚಿವರಾದ ಆರ್.ಅಶೋಕ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೀಗೆ ಘಟಾನುಘಟಿ ನಾಯಕರಿದ್ದಾರೆ.

ದುರದೃಷ್ಟವಶಾತ್ ಕೋರ್‍ಕಮಿಟಿಯಲ್ಲಿ ಚರ್ಚಿಸಿ ವರಿಷ್ಠರಿಗೆ ಕಳುಹಿಸಿದ ಒಂದೇ ಒಂದು ತೀರ್ಮಾನವನ್ನೂ ಸಹ ಬಿಜೆಪಿ ಯ ದೆಹಲಿ ನಾಯಕರು ಒಪ್ಪಿಕೊಂಡ ನಿದರ್ಶನಗಳಿಲ್ಲ. ಹೀಗಾಗಿ ಕೋರ್ ಕಮಿಟಿ ಯಾವ ಪುರುಷಾರ್ಥಕ್ಕೆ ಇರಬೇಕೆಂಬ ಪ್ರಶ್ನೆಯನ್ನು ಹಲವರು ಮಾಡುತ್ತಾರೆ.
ರಾಜ್ಯಸಭೆ ಚುನಾವಣೆಯಿಂದ ಹಿಡಿದು ಇತ್ತೀಚಿನ ವಿಧಾನಪರಿಷತ್ ಚುನಾವಣೆವರೆಗೂ ಅವಲೋಕಿಸಿದರೆ ರಾಜ್ಯ ಕೋರ್ ಕಮಿಟಿ ಕಳುಹಿಸಿದ ಶಿಫಾರಸ್ಸುಗಳನ್ನು ದೆಹಲಿ ವರಿಷ್ಠರು ಕಸದ ಬುಟ್ಟಿಗೆ ಎಸೆಯುತ್ತಾರೆಯೇ ಎಂಬ ಅನುಮಾನ ಕಾಡುತ್ತಿದೆ.

ಕಾರಣವೇನೆಂದರೆ ರಾಜ್ಯ ಕೋರ್ ಕಮಿಟಿ ಕಳುಹಿಸುವ ಪಟ್ಟಿ ಒಂದಾದರೆ ಅಂತಿಮವಾಗಿ ದೆಹಲಿ ನಾಯಕರ ಆಯ್ಕೆಯೇ ಮತ್ತೊಂದಾಗಿರುತ್ತದೆ.
ಈ ಹಿಂದೆ ರಾಜ್ಯಸಭೆ ಚುನಾವಣೆಗೆ ರಾಜ್ಯ ಕೋರ್ ಕಮಿಟಿ , ಉದ್ಯಮಿ ಪ್ರಕಾಶ್ ಶೆಟ್ಟಿ ಮತ್ತಿತರ ಹೆಸರುಗಳನ್ನು ಕಳುಹಿಸಿಕೊಟ್ಟಿತ್ತು. ಕೊನೆಗೆ ಅಚ್ಚರಿ ಎಂಬಂತೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ಯಾರೊಂದಿಗೂ ಗುರುತಿಸಿಕೊಳ್ಳದ ಈರಣ್ಣ ಕಡಾಡಿ, ಅಶೋಕ್ ಬಸ್ತಿ ಅವರುಗಳನ್ನು ಆಯ್ಕೆ ಮಾಡಲಾಗಿತ್ತು.

ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದವರಿಗೆ ಅನಿವಾರ್ಯವಾಗಿ ಉಪಚುನಾವಣೆಯಲ್ಲಿ ಕೋರ್ ಕಮಿಟಿ ಶಿಫಾರಸ್ಸು ಮಾಡಿದ್ದ ಹೆಸರುಗಳನ್ನು ಅಂತಿಮಗೊಳಿಸಲಾಗಿತ್ತು. ಅದನ್ನು ಹೊರತುಪಡಿಸಿದರೆ ರಾಜ್ಯ ಕೋರ್‍ಕಮಿಟಿಯ ಯಾವುದೇ ಶಿಫಾರಸ್ಸುಗಳನ್ನು ದೆಹಲಿ ನಾಯಕರು ಗಂಭೀರವಾಗಿ ಪರಿಗಣಿಸಿರುವ ನಿದರ್ಶನಗಳೇ ಇಲ್ಲ.

ತೀರಾ ಇತ್ತೀಚೆಗೆ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯುತ್ತಿರುವ ಚುನಾವಣೆಗೆ ಕೋರ್ ಕಮಿಟಿಯು ಹಲವು ಹೆಸರುಗಳನ್ನು ಶಿಫಾರಸ್ಸು ಮಾಡಿತ್ತು. ಮುಖ್ಯವಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜೇಂದ್ರ ಪಕ್ಷದ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದರೆಡ್ಡಿ, ಮಾಜಿ ಸದಸ್ಯ ಭಾನುಪ್ರಕಾಶ್, ಮುಖಂಡರಾದ ಗಿರೀಶ್ ಪಾಟೀಲ್, ಸಿದ್ದರಾಜು ಸೇರಿದಂತೆ ಹಲವು ಹೆಸರುಗಳನ್ನು ದೆಹಲಿಗೆ ಕಳುಹಿಸಿಕೊಡಲಾಗಿತ್ತು.

ಈಗ ಪ್ರಕಟವಾಗಿರುವ ನಾಲ್ಕು ಹೆಸರುಗಳಲ್ಲಿ ಛಲವಾದಿ ನಾರಾಯಣಸ್ವಾಮಿ ಹೆಸರು ಹೊರತುಪಡಿಸಿ ಉಳಿದ ಮೂರು ಹೆಸರುಗಳನ್ನು ಕೋರ್ ಕಮಿಟಿ ಶಿಫಾರಸ್ಸೆ ಮಾಡಿರಲಿಲ್ಲ. ಅಂದರೆ ಕೋರ್ ಕಮಿಟಿಯ ಶಿಫಾರಸ್ಸಿಗೆ ನಯಾಪೈಸೆ ಬೆಲೆ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಇದಕ್ಕೆ ರಾಜ್ಯವನ್ನು ಪ್ರತಿನಿಸುತ್ತಿರುವ ದೆಹಲಿಯ ಪ್ರಭಾವಿ ನಾಯಕರ ಮಧ್ಯಪ್ರವೇಶವೇ ಮೂಲ ಕಾರಣ ಎಂಬುದು ಬಹುತೇಕರ ಅಸಮಾಧಾನಕ್ಕೆ ಕಾರಣವಾಗಿದೆ.