ಈಶ್ವರಪ್ಪ ರಾಜೀನಾಮೆಯಿಂದ ಮುಜುಗರ, ಬಿಜೆಪಿ ಎಚ್ಚರಿಕೆ ಹೆಜ್ಜೆ

ಬೆಂಗಳೂರು,ಏ.15- ಸಚಿವ ಈಶ್ವರಪ್ಪ ರಾಜೀನಾಮೆಯಿಂದ ಮುಜುಗರಕ್ಕೆ ಸಿಲುಕಿರುವ ಆಡಳಿತಾರೂಢ ಬಿಜೆಪಿ ಸದ್ಯ ಯಾವುದೇ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳದಂತೆ ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿದೆ. ಚುನಾವಣಾ ವರ್ಷವಾಗಿರುವುದರಿಂದ ಪ್ರತಿಯೊಂದು ವಿಷಯಗಳು ಪ್ರತಿಪಕ್ಷಗಳಿಗೆ ಅಸ್ತ್ರವಾಗುವುದರಿಂದ ಶಾಸಕರು ಮತ್ತು ಸಚಿವರು ಎಚ್ಚರಿಕೆ ಹೆಜ್ಜೆ ಇಡುವಂತೆ ರಾಷ್ಟ್ರೀಯ ನಾಯಕರು ಸಲಹೆ ನೀಡಲಿದ್ದಾರೆ.

ನಾಳೆ ವಿಜಯನಗರದಲ್ಲಿ ಆರಂಭವಾಗಲಿರುವ ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸುವರು. ಸಭೆಯಲ್ಲಿ ಇದೇ ವಿಷಯಗಳು ಪ್ರಸ್ತಾಪವಾಗಲಿದ್ದು, ಇನ್ನು ಮುಂದೆ ಯಾರೂ ಕೂಡ ಅನಗತ್ಯವಾಗಿ ವಿವಾದಗಳನ್ನು ಎಳೆದುಕೊಳ್ಳದಂತೆ ಎಚ್ಚರಿಕೆ ಹೆಜ್ಜೆ ಇಡಬೇಕೆಂದು ನೀತಿ ಪಾಠ ಮಾಡುವರೆಂದು ಗೊತ್ತಾಗಿದೆ.

ಒಂದೊಂದು ವಿಷಯವನ್ನು ಸಹ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಬಿಂಬಿಸಲು ಯತ್ನಿಸುತ್ತಿರುವುದರಿಂದ ಸಚಿವರು ಮತ್ತು ಶಾಸಕರು ಅತ್ಯಂತ ಜಾಗರೂಕತೆಯಿಂದ ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳಬೇಕು. ಸಣ್ಣ ತಪ್ಪುಗಳಾದರೂ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕೆಯಾಗಲಿದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಲಿದ್ದಾರೆ.

ಮುಂದಿನ ವರ್ಷ ಏಪ್ರಿಲ್‍ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಭ್ರಷ್ಟಾಚಾರದ ಆರೋಪವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದೆಂಬ ಯೋಚನೆಯಲ್ಲಿ ಬಿಜೆಪಿಯಿದೆ. ಇದುವೇ ಇಂದು ಈಶ್ವರಪ್ಪನವರು ಸಚಿವ ಸ್ಥಾನದಿಂದ ಕೆಳಗಿಳಿಯಲು ಕಾರಣ ಎಂದು ಹೇಳಲಾಗುತ್ತಿದೆ.

ಸಾರ್ವಜನಿಕ ವಲಯದಲ್ಲಿ ಬಿಜೆಪಿ ಬಗ್ಗೆ ಯಾವುದೇ ಋಣಾತ್ಮಕ ಆಲೋಚನೆಗಳು ಬರದಂತೆ ನೋಡಿಕೊಳ್ಳಲು ರಾಜೀನಾಮೆ ಕೊಡುವುದು ಅನಿವಾರ್ಯವಾಗಿದೆ. ಹಾಗೆಂದು ರಾಜೀನಾಮೆ ನೀಡಿದವರು ತಪ್ಪು ಮಾಡಿದ್ದಾರೆ ಎಂದರ್ಥವಲ್ಲ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳುತ್ತಾರೆ.

ಹೈಕಮಾಂಡ್‍ನಿಂದ ಯಾವುದೇ ರೀತಿಯಲ್ಲಿ ಒತ್ತಡವಿಲ್ಲ, ಆದರೆ ಈ ಹಿಂದೆ ಕೇಸುಗಳು, ಆರೋಪಗಳು ಬಂದಾಗ ಕೆಲವು ಬಿಜೆಪಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಉದಾಹರಣೆಯಾಗಿ ನೀಡಲಾಗಿದೆ. ಈ ಹೊತ್ತಿನಲ್ಲಿ ಪಕ್ಷವನ್ನು ಮತ್ತು ಸರ್ಕಾರವನ್ನು ಮುಜುಗರದಿಂದ ಪಾರು ಮಾಡಲು ಈಶ್ವರಪ್ಪನವರೇ ಸ್ವತಃ ರಾಜೀನಾಮೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ವರ್ಕ್ ಆರ್ಡರ್ ಅಥವಾ ಮಂಜೂರಾತಿ, ಯೋಜನೆ ಇಲ್ಲದೆ ಅದು ಮುಖ್ಯಮಂತ್ರಿಗಳೇ ಬಾಯಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರೂ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ, ಅದನ್ನು ಒಪ್ಪಲಾಗದು. ಪ್ರತಿಯೊಂದಕ್ಕೂ, ದಾಖಲೆಗಳು ಇರಬೇಕಾಗುತ್ತದೆ. ಆದರೆ ಈಶ್ವರಪ್ಪ ನಿರ್ದೇಶನದ ಮೇರೆಗೆ ಈ ಕೃತ್ಯ ನಡೆದಿದೆ ಎಂದು ಮೃತಪಟ್ಟಿರುವ ವ್ಯಕ್ತಿ ಆರೋಪಿಸಿದ್ದಾರೆ ಎಂಬ ವಾಟ್ಸಾಪ್ ಸಂದೇಶ ಹರಿದಾಡುತ್ತಿದೆ.

ಈಶ್ವರಪ್ಪ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿರುವುದು ಬೇರೆ ವಿಚಾರ. ಆದರೆ ಸಮಾಜದಲ್ಲಿ ಮೊದಲನೆಯದು ಸಹಾನುಭೂತಿ ಮೃತಪಟ್ಟವರ ಮೇಲೆ ಹೋಗುತ್ತದೆ ಎಂದು ನಾಯಕರು ಹೇಳುತ್ತಾರೆ. ಸಾಮಾನ್ಯವಾಗಿ ಸಮಾಜದಲ್ಲಿ ಮೃತರ ಬಗ್ಗೆ ಸಹಾನುಭೂತಿ ಇರುತ್ತದೆ. ಈಶ್ವರಪ್ಪ ಯಾವುದೇ ತಪ್ಪು ಮಾಡಿಲ್ಲ. ತನಿಖೆಯ ನಂತರ ಸತ್ಯ ಹೊರಬರಲಿದೆ. ಸಂತೋಷ್ ಸಾವಿನ ಸುತ್ತ ಹಲವು ಪ್ರಶ್ನೆಗಳಿವೆ. ತನಿಖೆಯ ನಂತರವಷ್ಟೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಇನ್ನೇನಾಗಿದೆಯೋ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪಕ್ಷದ ಪ್ರಮುಖರೊಬ್ಬರು ಹೇಳಿದ್ದಾರೆ.