ಬಿಜೆಪಿ ಮಹತ್ವದ ಕಾರ್ಯಕಾರಿಣಿ : ಚುನಾವಣೆ ರಣತಂತ್ರ

Social Share

ಬೆಂಗಳೂರು,ಜ.16- ಇಂದಿನಿಂದ ಎರಡು ದಿನಗಳ ಕಾಲ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಪ್ರಮುಖವಾಗಿ ಕರ್ನಾಟಕ ವಿಧಾನಸಭೆ ಚುನಾವಣೆ ಕುರಿತಂತೆ ಮಹತ್ವದ ಚರ್ಚೆ ನಡೆಯಲಿದೆ.

ಮೀಸಲಾತಿ ವಿವಾದ ಸರ್ಕಾರದ ಮೇಲೆ ಕೇಳಿಬರುತ್ತಿರುವ ಭ್ರಷ್ಟಾಚಾರದ ಆರೋಪಗಳು, ಚುನಾವಣಾ ಪ್ರಚಾರ, ಪ್ರಣಾಳಿಕೆ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಮಹತ್ವದ ವಿಷಯಗಳು ಚರ್ಚೆಗೆ ಒಳಪಡಿಲಿವೆ.

ದೆಹಲಿಯ ಎನ್‍ಡಿಎಂಸಿ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕರ್ನಾಟಕ ಚುನಾವಣೆಯ ಕೇಂದ್ರಬಿಂದುವಾಗಿರಲಿದೆ. ಈ ನಡುವೆ ಸಭೆ ನಡೆಯುವ ಸ್ಥಳದವರೆಗೂ ರೋಡ್ ಶೋ ಕೂಡ ಆಯೋಜಿಸಲಾಗಿದೆ.

ಸುಪ್ರೀಂ ಕೋರ್ಟ್ ಕೊಲಿಜಿಯಂನಲ್ಲೂ ಸರ್ಕಾರದ ಪ್ರತಿನಿಧಿಗಳಿರಬೇಕಂತೆ

ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ ವಿ ರಾಜೇಶ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಕೂಡ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿರುವ ವಿಸ್ತರಣೆ ಹಾಗೂ ಪುನಾರಚನೆ ಕುರಿತಾಗಿಯೂ ಪಕ್ಷದ ವರಿಷ್ಠರು ಯಾವುದಾದರೊಂದು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಚುನಾವಣಾ ತಂತ್ರದ ಭಾಗವಾಗಿ ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಸರ್ಕಾರದ ಸಾಧನೆ ತಿಳಿಸುವ ಜನಸಂಕಲ್ಪ ಯಾತ್ರೆ ಸಾಧನೆ, ಫಲ, ಡಬಲ್ ಇಂಜಿನ್ ಸರ್ಕಾರದ ಪ್ರಯೋಜನಗಳ ಬಗ್ಗೆ ಪರಿಣಾಮಕಾರಿಯಾಗಿ ಬಿಂಬಿಸಲು ಮಾಡಿದ ಪ್ರಯತ್ನ, ಸಂಘಟನೆ ಬಲವರ್ಧನೆ ಚಟುವಟಿಕೆಗಳ ಪ್ರಗತಿ ಪರಾಮರ್ಶೆಯಾಗಲಿದೆ.

ಇದೇ ಸಂದರ್ಭದಲ್ಲಿ ಸಚಿವ ಸಂಪುಟದಲ್ಲಿ ಖಾಲಿಯಿರುವ ಆರು ಸ್ಥಾನಗಳ ಭರ್ತಿ, ಅವ ಮುಗಿದ ನಿಗಮ-ಮಂಡಳಿಗಳಿಗೆ ಹೊಸಬರ ನೇಮಕದ ಬಗ್ಗೆ ವರಿಷ್ಠರ ಬಳಿ ಸಿಎಂ ಬೊಮ್ಮಾಯಿ ಪ್ರಸ್ತಾಪಿಸುವ ಸಾಧ್ಯತೆಗಳಿದೆ ಎಂದು ತಿಳಿದುಬಂದಿದೆ.

ಚುನಾವಣೆಗೆ ಇನ್ನು ನಾಲ್ಕು ತಿಂಗಳು ಮಾತ್ರ ಬಾಕಿ ಇದೆ. ಫೆಬ್ರವರಿಯಲ್ಲಿ ಬಜೆಟ್ ಅಧಿವೇಶನವಿದ್ದು, ನಂತರ ಪಕ್ಷದ ಚುನಾವಣಾ ಚಟುವಟಿಕೆ ಬಿರುಸಾಗಲಿದೆ. ಹಾಗಾಗಿ ಸಂಪುಟ ವಿಸ್ತರಣೆಗೆ ಇದೊಂದೇ ಕಡೆಯ ಅವಕಾಶ ಎನ್ನಲಾಗುತ್ತಿದೆ.

ಸಂಕ್ರಾಂತಿ ನಂತರ ಸಂಪುಟದಲ್ಲಿ ಬದಲಾವಣೆ ಕಾಣಬಹುದು ಎನ್ನುವ ನಾಯಕರ ಹೇಳಿಕೆ, ಯಡಿಯೂರಪ್ಪ ಅಭಿಪ್ರಾಯ ಪರಿಗಣಿಸುವುದಾದಲ್ಲಿ ಈ ಬಾರಿ ಸಂಪುಟ ವಿಸ್ತರಣೆ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳಬಹುದು.
ಈಗಾಗಲೇ ಚಳಿಗಾಲದ ಅಧಿವೇಶನದ ವೇಳೆಯಲ್ಲೇ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿ ಕಲಾಪದಿಂದ ದೂರವುಳಿದದ್ದಿರು. ಭರವಸೆ ಬಳಿಕ ಕಲಾಪಕ್ಕೆ ಹಾಜರಾಗಿದ್ದರು.

ಈಗಲೂ ಸಂಪುಟಕ್ಕೆ ಈ ಇಬ್ಬರು ನಾಯಕರನ್ನು ಸೇರಿಸಿಕೊಳ್ಳದಿದ್ದಲ್ಲಿ ಮತ್ತೊಮ್ಮೆ ಅಧಿವೇಶನದಲ್ಲಿ ಪಕ್ಷಕ್ಕೆ ಇರಿಸುಮುರುಸಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಇವರಿಬ್ಬರನ್ನೂ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತುಮಕೂರು, ಕೋಲಾರ, ರಾಮನಗರಕ್ಕೂ ಬಿಎಂಟಿಸಿ ಬಸ್ ಸೇವೆ!

ಇನ್ನು ಹಳೆ ಮೈಸೂರು ಭಾಗವನ್ನು ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಮಾಡಿರುವುದರಿಂದ ಸಿಪಿ ಯೋಗೀಶ್ವರ್‍ಗೂ ಸಂಪುಟದಲ್ಲಿ ಅವಕಾಶ ನೀಡಬೇಕಾಗಲಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಸರ್ಕಾರ ರಚನೆ ವೇಳೆ ಮಹತ್ವದ ಪಾತ್ರವಹಿಸಿದ್ದ ಸಿಪಿವೈಗೆ ಈಗ ಮತ್ತೆ ಅವಕಾಶ ನೀಡಿದಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಸಹಕಾರಿಯಾಗಲಿದೆ ಎನ್ನುವ ಲೆಕ್ಕಾಚಾರ ಇದೆ. ಅಲ್ಲದೆ ಬೊಮ್ಮಾಯಿ ನಿವಾಸಕ್ಕೆ ಸತತವಾಗಿ ಭೇಟಿ ನೀಡಿ ಸಚಿವ ಸ್ಥಾನದ ಅಪೇಕ್ಷೆ ವ್ಯಕ್ತಪಡಿಸುತ್ತಲೇ ಇದ್ದು ಒತ್ತಡ ಹೇರುತ್ತಿದ್ದಾರೆ ಹೀಗಾಗಿ ಇವರ ಹೆಸರೂ ಕೂಡ ಚರ್ಚೆಗೆ ಬರಲಿದೆ ಎನ್ನಲಾಗಿದೆ.

ಸದ್ಯ ಕೈಬಿಟ್ಟ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆಯೋ ಅಥವಾ ಯೋಗೀಶ್ವರ್ ಸೇರಿ ಇತರ ಕೆಲವರಿಗೂ ಸಂಪುಟದಲ್ಲಿ ಅವಕಾಶ ನೀಡಲಾಗುತ್ತದೆಯೋ ಅಥವಾ ಸಂಪುಟ ವಿಸ್ತರಣೆ ವಿಚಾರವನ್ನೇ ಬಿಟ್ಟು ನೇರವಾಗಿ ಚುನಾವಣಾ ಸಿದ್ದತಾ ಕಣಕ್ಕೆ ಹೈಕಮಾಂಡ್ ಧುಮುಕಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

BJP, executive, meeting, Karnataka, assembly elections,

Articles You Might Like

Share This Article