‘ಮಿಷನ್-300 ಟಾರ್ಗೆಟ್’ ಹೆಸರಿನಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ತಯಾರಿ

Modi-and-Amith-Shah
ನವದೆಹಲಿ,ಜೂ.22- ಕರ್ನಾಟಕದಲ್ಲಿ ಮಿಷನ್-150 ಗುರಿಯೊಂದಿಗೆ ಅಖಾಡಕ್ಕಿಳಿದು ಕೂದಲೆಳೆ ಅಂತರದಲ್ಲಿ ಸರ್ಕಾರ ರಚಿಸುವಲ್ಲಿ ವಿಫಲವಾದ ಬಿಜೆಪಿ, ಕೇಂದ್ರದಲ್ಲಿ ಮಿಷನ್-300 ಟಾರ್ಗೆಟ್ ಹೆಸರಿನಲ್ಲಿ ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ. ಇದಕ್ಕಾಗಿ ಚುನಾವಣಾ ಚಾಣುಕ್ಯ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಮ್ಮದೇ ಆದ ರಣತಂತ್ರ ರೂಪಿಸುವತ್ತ ಕಾರ್ಯೋನ್ಮುಖರಾಗಿದ್ದಾರೆ. ಮೈತ್ರಿ ಪಕ್ಷಗಳ ಜೊತೆ ಹೆಚ್ಚು ಹೆಣಗಾಡದೇ ಸ್ವಂತ ಬಲದ ಮೇಲೆ ಮತ್ತೊಮ್ಮೆ ಅಧಿಕಾರ ಹಿಡಿದು ನರೇಂದ್ರ ಮೋದಿ ಅವರನ್ನು 2ನೇ ಬಾರಿಗೆ ಪ್ರಧಾನಿ ಮಾಡುವುದು ಈ ಕಾರ್ಯತಂತ್ರದ ಮುಖ್ಯ ಗುರಿಯಾಗಿದೆ.

ಸಾಮಾನ್ಯವಾಗಿ ಪ್ರತಿಪಕ್ಷಗಳು ಚುನಾವಣಾ ಸಂದರ್ಭದಲ್ಲಿ ರಣತಂತ್ರ ರೂಪಿಸಿದರೆ, ಅಮಿತ್ ಷಾ ಒಂದು ವರ್ಷ ಇರುವಾಗಲೇ ಗೆಲುವಿಗೆ ತಮ್ಮದೇ ಆದ ವಿಭಿನ್ನ ಕಾರ್ಯತಂತ್ರಗಳನ್ನು ರೂಪಿಸುತ್ತಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳನ್ನು ಮುಂದಿಟ್ಟುಕೊಂಡು ಸಂಪರ್ಕ್ ಸಾಧನ್ ಅಭಿಯಾನ್ ಎಂಬ ಹೆಸರಿನಡಿ ದೇಶದ ವಿವಿಧ ಗಣ್ಯರನ್ನು ಭೇಟಿ ಮಾಡಿ ಎನ್‍ಡಿ ಸರ್ಕಾರದ ಸಾಧನೆಗಳನ್ನು, ಜನಪ್ರಿಯ ಯೋಜನೆಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡುವಲ್ಲಿ ಬಿಜೆಪಿ ಮುಂದಾಗಿದೆ.

ಈಗ 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಹಾಗೂ ಬಿಜೆಪಿಯೇತರ ಎಂಬಂತೆ ಚುನಾವಣೆ ನಡೆಯುತ್ತಿದ್ದು , ಎನ್‍ಡಿಎ ಮೈತ್ರಿಪಕ್ಷಗಳು ಎಷ್ಟು ಕ್ಷೇತ್ರಗಳಿಗೆ ಬೇಡಿಕೆ ಇಡುತ್ತವೆಯೋ ಅಷ್ಟನ್ನು ಬಿಟ್ಟು ಕೊಟ್ಟು ಉಳಿದ ಎಲ್ಲ ಕಡೆ ಸ್ವತಂತ್ರವಾಗಿ ಸ್ಪರ್ಧಿಸಲು ಚಿಂತನೆ ನಡೆಸಿದೆ. ಒಂದೊಂದು ಕ್ಷೇತ್ರವನ್ನು ಪ್ರತಿಷ್ಠಿತ ಕ್ಷೇತ್ರವೆಂದೇ ಪರಿಗಣಿಸಿ ಗೆಲ್ಲಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನವನ್ನು ಮಾಡಬೇಕೆಂದು ಕಾರ್ಯಕರ್ತರಿಗೆ ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ.

ಬಿಜೆಪಿ ಪ್ರಾಬಲ್ಯವಿರುವ ರಾಜ್ಯಗಳನ್ನು ಹೊರತುಪಡಿಸಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಮತ್ತಿತರ ಕಡೆ ಗೆಲ್ಲಲು ಸಾಧ್ಯವಿರುವುದಕ್ಕೆ ಈಗಿನಿಂದಲೇ ಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಪಕ್ಷದ ಪ್ರಮುಖರಿಗೆ ಸೂಚನೆ ನೀಡಲಾಗಿದೆ.
ಬಿಜೆಪಿ ಸ್ವತಂತ್ರವಾಗಿ ಅಧಿಕಾರ ಹಿಡಿದರೆ ಮೈತ್ರಿ ಪಕ್ಷಗಳ ಜೊತೆ ಹೆಣಗಾಡುವುದು ತಪ್ಪುತ್ತದೆ. ಪ್ರತಿಯೊಂದು ವಿಷಯದಲ್ಲೂ ಅವರ ಜೊತೆ ಹೊಂದಾಣಿಕೆ ರಾಜಕಾರಣ ಮಾಡಿಕೊಳ್ಳುವ ಬದಲು ಮಿಷನ್-300 ಗುರಿಯೊಂದಿಗೆ ಚುನಾವಣೆ ಎದುರಿಸಬೇಕೆಂದು ರಣತಂತ್ರ ಹೆಣೆಯಲಾಗಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜೊತೆ ಮೈತ್ರಿಯಿಂದ ಹೊರಬರಲು ಇದೇ ಕಾರಣ. ನಾವು ರಾಷ್ಟ್ರದ ಭದ್ರತೆಯಲ್ಲಿ ಯಾವುದೇ ಕಾರಣಕ್ಕೂ ರಾಜೀಯಾಗುವುದಿಲ್ಲ. ಸರ್ಕಾರ ಇರಲಿ ಇಲ್ಲದಿರಲಿ ಹೊಂದಾಣಿಕೆ ರಾಜಕಾರಣ ಬಿಜೆಪಿಗೆ ಸರಿಹೊಂದುವುದಿಲ್ಲ ಎಂಬುದನ್ನು ಅಮಿತ್ ಷಾ ಸಾಬೀತು ಮಾಡಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಈಗಾಗಲೇ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಕರ್ನಾಟಕದಲ್ಲಿ ನಾವು ಸರ್ಕಾರ ರಚನೆ ಮಾಡಲು ಸಾಧ್ಯವಾಗದೆ ಇರಬಹುದು. ನಮ್ಮ ಪಕ್ಷ 108 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದು ಸಾಮಾನ್ಯ ಮಾತಲ್ಲ. ಕರ್ನಾಟಕದಲ್ಲಿ ನಮ್ಮ ಪಕ್ಷ ಯಾವ ರೀತಿ ಪಕ್ಷ ಸಂಘಟನೆಗೆ ರಣತಂತ್ರಗಳನ್ನು ರೂಪಿಸಿತ್ತೋ ಅದೇ ತಂತ್ರಗಳನ್ನು ಹೆಣೆಯಬೇಕೆಂದು ಅಮಿತ್ ಷಾ ಸೂಚನೆ ಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Sri Raghav

Admin