ಬೆಂಗಳೂರು,ಜ.9- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಆಡಳಿತಾರೂಢ ಬಿಜೆಪಿ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳು ಸರ್ಕಾರ ಮತ್ತು ಪಕ್ಷದಲ್ಲಿ ಮುಜುಗರ ಸೃಷ್ಟಿಸಿದೆ. ಒಂದು ಕಡೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕೇಂದ್ರದ ಘಟಾನುಘಟಿ ನಾಯಕರು ರಾಜ್ಯಕ್ಕೆ ದಾಂಗುಡಿ ಇಡುತ್ತಿರುವಾಗಲೇ ಸಚಿವರು ಮತ್ತು ಶಾಸಕರ ಮೇಲೆ ಕೇಳಿಬರುತ್ತಿರುವ ಆರೋಪಗಳು ಕಮಲ ಪಡೆಯನ್ನು ತಬ್ಬಿಬ್ಬುಗೊಳಿಸುತ್ತಿದೆ.
ರೌಡಿಶೀಟರ್ ಹಿನ್ನೆಲೆಯ ಸ್ಯಾಂಟ್ರೋ ರವಿ ಜತೆ ಕೆಲವು ಪ್ರಭಾವಿ ಸಚಿವರು ಕಾಣಿಸಿಕೊಂಡಿರುವುದು, ವಿಧಾನಸೌಧದ ಗೇಟ್ ಬಳಿ ಲೋಕೋಪಯೋಗಿ ಇಲಾಖೆಯ ಇಂಜನಿಯರ್ ಬಳಿ ಸಿಕ್ಕಿಬಿದ್ದ 10 ಲಕ್ಷ ನಗದು,
ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ದೊಡ್ಡರಂಗೇಗೌಡರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದು, ಸರ್ಕಾರದ ಮೇಲೆ ಕೇಳಿ ಬರುತ್ತಿರುವ ಭ್ರಷ್ಟಾಚಾರದ ಆರೋಪಗಳು ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿ, ರಾಜ್ಯದಲ್ಲಿ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿಗೆ ಸದ್ಯ ಮೋದಿ ಮತ್ತು ಅಮಿತ್ ಶಾ ನಾಮಬಲ ಬಿಟ್ಟರೆ ರಾಜ್ಯದಲ್ಲಿ ಹೇಳಿಕೊಳ್ಳುವಂಥ ವರ್ಚಸ್ಸಿನ ನಾಯಕರಿಲ್ಲದಿರುವುದು ಪಕ್ಷಕ್ಕೆ ಸಮಸ್ಯೆಯಾಗಿದೆ.
ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ರಾಜ್ಯದಲ್ಲಿ ನಡೆದಿರುವ ಚುನಾವಣೆಗಳಲ್ಲಿ ಬಿಜೆಪಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಇದರ ನಡುವೆಯೇ ಪಂಚಮಸಾಲಿ ಸಮುದಾಯವರು ತಮ್ಮನ್ನು 2ಬಿ ಗೆ ಸೇರ್ಪಡೆ ಮಾಡುವಂತೆ ನಡೆಸುತ್ತಿರುವ ಹೋರಾಟ ಅಕ್ಷರಶಃ ಸರ್ಕಾರವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ.
ದಟ್ಟ ಮಂಜು ; ಟ್ರಕ್ಗೆ ಬಸ್ ಅಪ್ಪಳಿಸಿ ಮೂರು ಸಾವು
ಈ ಮೊದಲು ಬಿಜೆಪಿಯೊಳಗೆ ಯಡಿಯೂರಪ್ಪ ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳುವಂತಹ ಗಟ್ಟಿ ನಿರ್ಧಾರ ಹೊಂದಿದ್ದರು. ಅವರ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಗೆ ಬಗ್ಗೆ ಹೈಕಮಾಂಡ್ ಕೂಡ ಮಧ್ಯಪ್ರವೇಶ ಮಾಡುತ್ತಿರಲಿಲ್ಲ.
ಆದರೆ ಬಸವರಾಜ ಬೊಮ್ಮಾಯಿ ಅವರಿಗೆ ಅಂತಹ ಗಟ್ಟಿತನ ಇಲ್ಲದಿರುವುದು, ಪ್ರತಿಯೊಂದಕ್ಕೂ ದೆಹಲಿಯ ಅನುಮತಿಗಾಗಿ ಕಾಯಲೇಬೇಕಾದ ಅನಿವಾರ್ಯತೆ ಇರುವುದರಿಂದ ಯಾವುದೇ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬೊಮ್ಮಾಯಿ ಅವರಿಗೆ ಸಾಧ್ಯವಾಗದಿರುವುದು ಕೂಡ ಸರ್ಕಾರವನ್ನು ಇಕ್ಕಟಿಗೆ ಸಿಲುಕುವಂತೆ ಮಾಡಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರತಿ ದಿನ ಸರ್ಕಾರದ ಮೇಲೆ ಮುಗಿ ಬೀಳುತ್ತಿದ್ದರೂ ಅದನ್ನು ಗಟ್ಟಿಯಾಗಿ ನಿಂತು ವಿರೋಧಿಸುವವರು ಕೂಡ ಬಿಜೆಪಿಯಲ್ಲಿ ಇಲ್ಲದಿರುವುದು ಪಕ್ಷದ ಸ್ಥಿತಿಯನ್ನು ಹೇಳುತ್ತಿದೆ. ಒಂದು ಕಡೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಸರ್ಕಾರದ ಮೇಲೆ ಮುಗಿ ಬೀಳುತ್ತಿದ್ದರೂ ಬಿಜೆಪಿ ಪಾತ್ರ ಅದೇ ರಾಗ ಅದೇ ಹಾಡು ಎನ್ನುವಂತೆ ಒಂದಿಷ್ಟು ಟ್ವೀಟ್ ಮಾಡಿ ಕೈ ತೊಳೆದುಕೊಂಡು ಕೂತಿದೆ.
ಸ್ಯಾಂಟ್ರೊ ರವಿ ತಂದ ಆಪತ್ತು:
ಕಳೆದ ಒಂದು ವಾರದಿಂದ ರೌಡಿ ಶೀಟರ್ ಸ್ಯಾಂಟ್ರೊ ರವಿ ಪ್ರಕರಣ ಬಿಜೆಪಿಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಸ್ಯಾಂಟ್ರೊ ರವಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾನೆ ಎಂಬುದು, ಆತನನ್ನು ಅಂಕಲ್ ಎಂದು ಕರೆದಿರುವುದು, ಗೃಹ ಸಚಿವ ಅರಗ ಜ್ಞಾನೇಂದ್ರರ ಮನೆಯಲ್ಲೇ ಡಿವೈಎಸ್ಪಿ ವರ್ಗಾವಣೆ ಕುರಿತು ಸ್ಯಾಂಟ್ರೊ ರವಿ ಮುಂಗಡವಾಗಿ 15 ಲಕ್ಷ ಹಣ ಕೊಟ್ಟಿದ್ದಾನೆ ಎಂಬ ಆರೋಪಗಳು ಸರ್ಕಾರವನ್ನು ತಬ್ಬಿಬ್ಬುಗೊಳಿಸಿದೆ.
ಸಹಕಾರ ಇಲಾಖೆಯಲ್ಲೂ ಸಚಿವ ಎಸ್.ಟಿ.ಸೋಮಶೇಖರ್ ಜೊತೆ ಸಂಪರ್ಕ ಸಾಸಿದ್ದ ಸ್ಯಾಂಟ್ರೊ ರವಿ ಅನೇಕ ಅಕಾರಿಗಳನ್ನು ವರ್ಗಾವಣೆ ಮಾಡಿದ್ದಾನೆ ಎಂದು ಆರೋಪ ಮಾಡಿರುವುದು ಈ ಎಲ್ಲ ಬೆಳವಣಿಗೆಗಳು ಸರ್ಕಾರ ಮತ್ತು ಬಿಜೆಪಿಗೆ ದೊಡ್ಡ ಹೊಡೆತ ಕೊಟ್ಟಿದೆ.
ಮೀಸಲಾತಿ ವಿವಾದ:
ಇನ್ನು ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿ ವೀರಶೈವ ಲಿಂಗಾಯಿತ ಸಮುದಾಯವನ್ನು 2ಡಿ ಹಾಗೂ ಒಕ್ಕಲಿಗರನ್ನು 3ಸಿ ಗೆ ಸೇರ್ಪಡೆ ಮಾಡಿರುವುದು ಕೂಡ ಸರ್ಕಾರಕ್ಕೆ ಬಿಕ್ಕಟ್ಟು ಸೃಷ್ಟಿಸಿದೆ.
ಸರ್ಕಾರದ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ತಕ್ಷಣವೇ ನಮಗೆ ನಮ್ಮ ಬೇಡಿಕೆಯಂತೆ 2ಎಗೆ ಸೇರ್ಪಡೆ ಮಾಡಬೇಕೆಂದು ಪಂಚಮಸಾಲಿ ಸಮುದಾಯದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಇದೇ ರೀತಿ ಒಕ್ಕಲಿಗರು ಕೂಡ ನಮಗೆ ಶೇ.12ರಷ್ಟು ಮೀಸಲಾತಿ ನೀಡಬೇಕು. ಸರ್ಕಾರದ ನಿರ್ಧಾರವನ್ನು ನಾವು ಕೂಡ ಒಪ್ಪುವುದಿಲ್ಲ ಎಂದಿದ್ದಾರೆ.
ಅಕ್ರಮವಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ಗ್ಯಾಂಗ್ ಸೆರೆ
ಹೀಗೆ ಆಡಳಿತಾರೂಢ ಬಿಜೆಪಿಗೆ ಸಾಲು ಸಾಲು ಸವಾಲುಗಳು ಎದುರಾಗುತ್ತಿವೆ. ಸರ್ಕಾರವನ್ನು ಬೊಮ್ಮಾಯಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಸಮರ್ಥವಾಗಿ ಸಮರ್ಥಿಸಿಕೊಳ್ಳುತ್ತಿಲ್ಲ. ಕಡೆಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಪಕ್ಷವನ್ನು ಬಲವಾಗಿ ಸಮರ್ಥನೆ ಮಾಡುತ್ತಿಲ್ಲ.
ಬದಲಿಗೆ ರಸ್ತೆ, ಚರಂಡಿ, ಗುಂಡಿ ಸಮಸ್ಯೆಗಳಿಗೆ ತಲೆ ಕೆಡಿಸಿಕೊಳ್ಳದೆ ಲವ್ ಜಿಹಾದ್ ಕಡೆ ಗಮನಕೊಡಿ ಎಂದು ಹೇಳಿದ್ದು, ಬಿಜೆಪಿಯೇ ತಲೆ ತಗ್ಗಿಸುವಂತೆ ಮಾಡಿತ್ತು. ಹೀಗೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಸರ್ಕಾರ ಮತ್ತು ಬಿಜೆಪಿಗೆ ಈ ಘಟನೆಗಳು ಸಿಹಿಗಿಂತ ಕಹಿಯನ್ನೇ ತಂದೊಡ್ಡಿರುವುದು ಗುಟ್ಟಾಗಿ ಉಳಿದಿಲ್ಲ.
BJP, government, allegations, assembly election, Congress, JDS,