ಬೆಂಗಳೂರು,ಜು.16- ರಾಜ್ಯ ಸರ್ಕಾರ ಕೇವಲ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಾರಿಗೂ ನ್ಯಾಯ ಸಿಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ ಅವರು ಮಂತ್ರಿಯಾಗಿದ್ದಾಗ ಶೇ.40ರಷ್ಟು ಕಮಿಷನ್‍ಗೆ ಒತ್ತಡ ಹೇರಿದ್ದರು ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಈಗಲೂ ನ್ಯಾಯ ಸಿಕ್ಕಿಲ್ಲ. ಅವರ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಅಂಗಲಾಚಿದ್ದಾರೆ.
ಸಚಿವರಾದ ಗೋವಿಂದಕಾರಜೋಳ, ಮುರುಗೇಶ್ ನಿರಾಣಿ ಸೇರಿದಂತೆ ಅನೇಕರು ಸಂತೋಷ್ ಪಾಟೀಲ್ ಗುತ್ತಿಗೆ ಕೆಲಸ ಮಾಡಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಆದರೂ ಈವರೆಗೂ ಗುತ್ತಿಗೆ ನಿರ್ವಹಿಸಿದ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಇತ್ತ ಸಂತೋಷ್ ಪಾಟೀಲ್ ಪ್ರಕರಣದಲ್ಲೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿದರು.
ಪಿಎಸ್‍ಐ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿಯ ಮಗ ಭಾಗಿಯಾಗಿದ್ದಾರೆ ಎಂದು ಬಿಜೆಪಿಯ ಶಾಸಕರು, ಸಚಿವರು ನಮ್ಮ ಪಕ್ಷದ ಶಾಸಕಾಂಗ ನಾಯಕರು ನೇರ ಆರೋಪ ಮಾಡಿದ್ದಾರೆ. ಆದರೆ, ಈವರೆಗೂ ಸರಿಯಾದ ತನಿಖೆ ನಡೆದಿಲ್ಲ. ಬಂಧನಕ್ಕೊಳಗಾಗಿರುವ ಎಡಿಜಿಪಿ ಅಮೃತ್‍ಪಾಲ್‍ರಿಂದ ಸಿಆರ್‍ಪಿಸಿ 164 ಅಡಿ ನ್ಯಾಯಾೀಧಿಶರ ಮುಂದೆ ಹೇಳಿಕೆ ದಾಖಲಿಸಿಲ್ಲ ಎಂದು ದೂರಿದರು.
ಈ ಸರ್ಕಾರ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ಹುದ್ದೆಗೂ ದರ ಪಟ್ಟಿಯನ್ನು ಚಾಲ್ತಿಗೆ ತಂದಿದೆ. ಮಂತ್ರಿಯಿಂದ ಇನ್ಸ್‍ಪೆಕ್ಟರ್ ಹುದ್ದೆವರೆಗೂ ಹೋಟೆಲ್‍ನ ತಿಂಡಿತಿನಿಸುಗಳ ದರ ಪಟ್ಟಿಯಂತೆ ಲಂಚದ ಪಟ್ಟಿ ಚಾಲ್ತಿಯಲ್ಲಿದೆ ಎಂದು ಆರೋಪಿಸಿದರು.
ಕೋವಿಡ್ ಸಂದರ್ಭದಲ್ಲಿ ಸಂಗ್ರಹಿಸಲಾದ ಹಣವನ್ನು ಡಿ.ಕೆ.ಶಿವಕುಮಾರ್ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾನು ನೇರ ಸವಾಲು ಮತ್ತು ಒತ್ತಾಯವನ್ನು ಮುಂದಿಡುತ್ತಿದ್ದೇನೆ. ನಾನು ಅಧ್ಯಕ್ಷನಾದ ದಿನದಿಂದ ಈವರೆಗೂ ನಾನು ಮಾಡಿರುವ ಚಟುವಟಿಕೆಗಳನ್ನು ತನಿಖೆ ಮಾಡಿಸಿ.
ಇದಕ್ಕಾಗಿ ವಿಶೇಷ ಅಧಿಕಾರಿಯನ್ನೇ ನೇಮಿಸಿ. ಸಂಗ್ರಹಿಸಲಾದ ಹಣ ಎಲ್ಲಿ ಬಳಕೆಯಾಗಿದೆ ಎಂಬುದರ ವರದಿ ತಯಾರಾಗಬೇಕು. ಕೋವಿಡ್ ಕಾಲದಲ್ಲಿ ನಮ್ಮಿಂದಾದ ಜನಪರ ಕೆಲಸಗಳ ವಿಮರ್ಶೆಯಾಗಬೇಕು. ಸರ್ಕಾರ ಮಾಡದ ಕೆಲಸವನ್ನು ನಾವು ಮಾಡಿರುವುದು ಸ್ಪಷ್ಟವಾಗಿದೆ ಎಂದು ವಿವರಿಸಿದರು.
ಸಿದ್ದರಾಮೋತ್ಸವವನ್ನು ಪಕ್ಷದ ವೇದಿಕೆ ಅಥವಾ ಪ್ರತ್ಯೇಕ ಸಮಿತಿಯಿಂದ ಆಚರಿಸಲಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾದಾಗ ಸಿಡಿಮಿಡಿಗೊಂಡ ಡಿ.ಕೆ.ಶಿವಕುಮಾರ್ ಅವರು, ನೀವು ಯಾರನ್ನು ಪ್ರಶ್ನೆ ಕೇಳಬೇಕೋ ಅವರನ್ನು ಕೇಳಿ. ನಾನು ಪಕ್ಷದ ಅಧ್ಯಕ್ಷನಾಗಿ ಇತಿಮಿತಿಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲರೂ ಅಂತಹ ಇತಿಮಿತಿಗಳಿಗೆ ಬದ್ಧರಾಗಿಬೇಕು ಎಂದರು.
ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಮತ್ತು ಫೋಟೋಗಳ ಚಿತ್ರಕರಣ ನಿಷೇಧಿಸಿದಾಗ ತೀವ್ರ ಜನಾಕ್ರೋಶ ಎದುರಾಗಿದೆ. ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳೂ ಸೇರಿದಂತೆ ಎಲ್ಲರ ಅಭಿಪ್ರಾಯಗಳಿಗೆ ಬೆಲೆ ಇದೆ. ಇಲ್ಲದೆ ಹೋದರೆ ಆಡಳಿತ ನಡೆಸುವವರಿಗೆ ಭಯವೇ ಇಲ್ಲದಂತಾಗುತ್ತದೆ. ನಿನ್ನೆ ವಿವಾದಿತ ಆದೇಶದ ಬಗ್ಗೆ ಮಾಧ್ಯಮಗಳು ವ್ಯಕ್ತಪಡಿಸಿದ ವಿರೋಧ ಶ್ಲಾಘನೀಯ. ಪ್ರಾಮಾಣಿಕವಾಗಿ ಕೆಲಸ ಮಾಡುವ ನ್ಯಾಯಾೀಧಿಶರ ಅಭಿಪ್ರಾಯಗಳು ಚರ್ಚೆಗೊಳಗಾಗಿರುವುದು ಸ್ವಾಗತಾರ್ಹ ಎಂದರು.
ಈ ಸರ್ಕಾರ ಭ್ರಷ್ಟಾಚಾರ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಮಕ್ಕಳಿಗೆ ಶೂ ಮತ್ತು ಸಾಕ್ಸ್ ನೀಡಲು ನಾವು ಭಿಕ್ಷೆ ಬೇಡಿಯಾದರೂ ಹಣ ಕೊಡುತ್ತೇವೆ ಎಂದಾಗ ಹೆದರಿ ಶೂ ಮತ್ತು ಸಾಕ್ಸ್ ಖರೀದಿಗೆ 120 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.