ಸರ್ಕಾರದ ಆಡಳಿತ ರೌಡಿಗಳ ಹಿಡಿತದಲ್ಲಿದೆ : ಪ್ರಿಯಾಂಕ್ ಖರ್ಗೆ

Social Share

ಕಲಬುರಗಿ,ಜ.6- ರಾಜ್ಯದಲ್ಲಿ ಬಿಜೆಪಿ ಪಕ್ಷವಾಗಲಿ, ಮುಖ್ಯಮಂತ್ರಿಯವರಾಗಲಿ ಸರ್ಕಾರ ನಡೆಸುತ್ತಿಲ್ಲ. ಬದಲಾಗಿ ರೌಡಿಗಳು ಆಡಳಿತ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ದೇಶದಲ್ಲಷ್ಟೆ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಭ್ರಷ್ಟ ಸರ್ಕಾರ ಎಂಬ ಅಪಕೀರ್ತಿ ಬಂದಿದೆ. ಬಿಜೆಪಿ ಭಾರತೀಯ ಜನತಾ ಪಕ್ಷವಾಗಿ ಉಳಿದಿಲ್ಲ, ಬ್ರೋಕರ್ಸ್ ಜನತಾ ಪಕ್ಷವಾಗಿದೆ ಎಂದು ಕಿಡಿಕಾರಿದರು.

ಪವಿತ್ರವಾದ ವಿಧಾನಸೌಧವನ್ನು ವ್ಯಾಪಾರ ಸೌಧ ಮಾಡಲಾಗಿದೆ. ಬಿಜೆಪಿಯವರ ಭ್ರಷ್ಟಚಾರದಿಂದ ವಿಧಾನಸೌಧ ತನ್ನ ಪಾವಿತ್ರ್ಯವನ್ನು ಕಳೆದುಕೊಂಡು, ದೊಡ್ಡ ಶಾಪಿಂಗ್ ಮಾಲ್ ಆಗಿದೆ. ಇಲ್ಲಿ ಸರ್ಕಾರಿ ಉದ್ಯೋಗ, ವರ್ಗಾವಣೆ, ಸರ್ಕಾರಿ ಗುತ್ತಿಗೆಗಳು ಮಾರಾಟಕ್ಕಿವೆ. ವಿಧಾನಸೌಧದಲ್ಲಿ ಬೆಸ್ಟ್ ಸೆಲ್ಸ್ ಮನ್‍ಗಳಾಗಿ ಹಿರಿಯ ಅಧಿಕಾರಿಗಳು, ಸಚಿವರು, ಬ್ರೋಕರ್ಸ್ ಪಕ್ಷದ ಶಾಸಕರೇ ಕೆಲಸ ಮಾಡುತ್ತಿದ್ದಾರೆ. ಪಿಎಸ್‍ಐ ನೇಮಕಾತಿಯಲ್ಲಿ ಸರ್ಕಾರಿ ಹುದ್ದೆಗಳ ಮಾರಾಟ ಸಾಬೀತಾಗಿದೆ ಎಂದರು.

ಜನವರಿ 4ರಂದು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಒಬ್ಬರು 10.5 ಲಕ್ಷ ರೂಪಾಯಿ ಹಣದೊಂದಿಗೆ ಸಿಕ್ಕಿ ಬಿದಿದ್ದಾರೆ. ಆ ಅಧಿಕಾರಿಗೆ ಅಷ್ಟು ಹಣ ಎಲ್ಲಿಂದ ಬಂತು. ಯಾರಿಗೆ ಕೊಡಲು ಹೋಗಿದ್ದರು ಎಂಬೆಲ್ಲಾ ವಿಷಯಗಳು ತನಿಖೆಯಾಗಿಬೇಕಿದೆ ಎಂದು ಒತ್ತಾಯಿಸಿದರು.

ಬಿಜೆಪಿ ಹೈಕಮಾಂಡ್‍ಗೆ ಮುಖ್ಯಮಂತ್ರಿ, ಮುಖ್ಯಮಂತ್ರಿಗೆ ಸಚಿವರು, ಸಚಿವರಿಗೆ ಶಾಸಕರು, ಶಾಸಕರಿಗೆ ಅಧಿಕಾರಿಗಳು ಮಧ್ಯವರ್ತಿಗಳಾಗಿದ್ದಾರೆ. ಈ ನಡುವೆ ಮತ್ತೊಂದು ವ್ಯವಸ್ಥೆ ಮಧ್ಯವರ್ತಿ ಸ್ಥಾನಕ್ಕೆ ಎಂಟ್ರಿಯಾಗಿದೆ. ರೌಡಿಗಳು ಮಧ್ಯವರ್ತಿಗಳಾಗಿದ್ದಾರೆ. ಕಳೆದೆರಡು ದಿನಗಳಿಂದ ಹರಿದಾಡುತ್ತಿರುವ ಆಡಿಯೋ ಕ್ಲಿಪ್ ನೋಡಿದರೆ ಸರ್ಕಾರ ಯಾರು ನಡೆಸುತ್ತಿದ್ದಾರೆ ಎಂಬ ಅನುಮಾನ ಬರುತ್ತಿದೆ. ಮುಖ್ಯಮಂತ್ರಿಗಳಂತೂ ಸರ್ಕಾರ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ನಿನ್ನೆ ಬೆಳಕಿಗೆ ಬಂದ ಸ್ಯಾಂಟ್ರೋ ರವಿ ಆಡಿಯೋ ಕ್ಲಿಪ್‍ನಲ್ಲಿ ತನಗೆ ಮುಖ್ಯಮಂತ್ರಿಯೊಂದಿಗೆ ನೇರ ಸಂಪರ್ಕ ಇದೆ ಎಂದು ಆತ ಹೇಳಿಕೊಂಡಿದ್ದಾನೆ. ಗೃಹ ಸಚಿವರು, ಆರೋಗ್ಯ ಸಚಿವರು, ಮುಖ್ಯಮಂತ್ರಿ ಜೊತೆ ಇರುವ ಜೊತೆಗೆ ಫೋಟೊಗಳು, ಮುಖ್ಯಮಂತ್ರಿ ಪುತ್ರನನ್ನು ನನ್ನ ಸ್ವೀಟ್‍ಬ್ರದರ್ ಎಂದು ಹೇಳಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಮುಖ್ಯಮಂತ್ರಿಯೇ ನನಗೆ ಸರ್ ಎಂದು ಕರೆಯುತ್ತಾರೆ ನೀನು ನನ್ನನ್ನು ಏಕವಚನದಲ್ಲಿ ಮಾತನಾಡುತ್ತೀಯಾ ಎಂದು ಸ್ಯಾಂಟ್ರೊ ರವಿ ಪೊಲೀಸ್ ಅಕಾರಿಯೊಬ್ಬರಿಗೆ ಧಮಕಿ ಹಾಕಿದ್ದಾರೆ. ಅದನ್ನು ಕೇಳಿ ಪೊಲೀಸ್ ಅಧಿಕಾರಿ ಕ್ಷಮೆ ಕೇಳಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿದರು.

ಹರ್ಯಾಣ ಪ್ರವೇಶಿಸಿದ ರಾಹುಲ್ ಭಾರತ್ ಜೋಡೋ ಯಾತ್ರೆ

ಅಧಿಕಾರ ಹಿಡಿಯಲು ಬಿಜೆಪಿಯವರು ಯಾರ ಸಹಾಯವನ್ನೆಲ್ಲಾ ಪಡೆದಿದ್ದಾರೆ ಎಂದು ನೋಡಿದರೆ ನಾಚಿಕೆಯಾಗುತ್ತಿದೆ. ಪುಡಿ ರೌಡಿ ಸ್ಯಾಂಟ್ರೋ ರವಿಯ ಮಾತುಗಳನ್ನು ಕೇಳಿದರೆ ಅಚ್ಚರಿಯಾಗುತ್ತದೆ. ಆತ ಸರ್ಕಾರದ ಅತಿಥಿಗೃಹ ಕುಮಾರಕೃಪದಲ್ಲೇ ಮಿಟಿಂಗ್ ಮಾಡುತ್ತಿದ್ದಾರೆ. ಕುಮಾರಕೃಪಾದಲ್ಲಿ ಶಾಸಕರಿಗೆ ರೂಂಗಳು ಸಿಗುವುದು ಕಷ್ಟ. ಅಂತಹದ್ದರಲ್ಲಿ ರೌಡಿಗಳು ಸಭೆ ನಡೆಸಲು ಯಾರು ವಾಸ್ತವ್ಯ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂಬುದು ತನಿಖೆಯಾಗಬೇಕು ಎಂದರು.

ಹಿಂದಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಿಜೆಪಿಯವರು ಸ್ಯಾಂಟ್ರೋ ರವಿಯನ್ನು ಬಳಸಿಕೊಂಡಿದ್ದಾರೆ. ಆತ ಖರೀದಿಯಾದ ಕೆಲವು ಶಾಸಕರಿಗೆ ನಾನಾ ರೀತಿಯ ಆಮಿಷಗಳನ್ನು ಪೂರೈಸಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಆರೋಪಿಸಿದ್ದಾರೆ.

ಇದಕ್ಕೆ ಬಿಜೆಪಿಯವರು ಸ್ಪಷ್ಟ ಉತ್ತರ ನೀಡಬೇಕು. ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚುನಾವಣೆ ವೇಳೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಈ ವಿಷಯದಲ್ಲಿ ಅವರು ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಸವಾಲು ಎಸೆದರು.

ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಗೃಹ ಸಚಿವರು ಹೇಳುತ್ತಿದ್ದಾರೆ. ಇತ್ತೀಚೆಗೆ ಬಹಿರಂಗವಾದ ಆಡಿಯೋ ಕ್ಲಿಪ್‍ಗಳ ಪ್ರಕಾರ ಪೊಲೀಸ್ ಅಧಿಕಾರಿಗಳೇ ಸ್ಯಾಂಟ್ರೋ ರವಿಗೆ ದೂರವಾಣಿ ಕರೆ ಮಾಡುತ್ತಿದ್ದಾರೆ. ಬ್ಯಾಚ್ ನಂಬರ್ ಸಹಿತ ಹೇಳಿ, ವರ್ಗಾವಣೆ ಮಾಡಿಸಿಕೊಡುವಂತೆ ಡೀಲ್ ಕುರಿತು ಮಾತನಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ.

ಲಕ್ಷಾಂತರ-ಕೋಟ್ಯಂತರ ರೂಪಾಯಿ ಲಂಚ ಕೊಟ್ಟು ವರ್ಗಾವಣೆಯಾಗಿ ಬಂದ ಪೊಲೀಸ್ ಅಧಿಕಾರಿ ಸುಮ್ಮನಿರಲು ಸಾಧ್ಯವೇ ? ಆತ ಲಂಚ ನೀಡಲು ಮಾಡಿದ ಸಾಲದ ಹಣವನ್ನು ಮರುಪಾವತಿಸಲು ಮತ್ತು ಅದರ ಮೇಲೆ ತಮ್ಮ ವೈಯಕ್ತಿಕ ಲಾಭಕ್ಕಾಗಿ ಜನರಿಂದ ಲಂಚ ಪಡೆಯಬೇಕಾಗಿದೆ. ಮುಂದಿನ ವರ್ಗಾವಣೆಗೂ ಬಂಡವಾಳ ಹೊಂದಿಸಿಕೊಳ್ಳಲು ಜನರನ್ನೇ ಸುಲಿಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಯಾಂಟ್ರೋ ರವಿ ತನ್ನ ಮುಂದೆ ಹಣದ ರಾಶಿ ಇಟ್ಟುಕೊಂಡು ಕುಳಿತಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಸೇರಿ ಯಾವ ಸಂಸ್ಥೆಗಳು ತನಿಖೆ ಮಾಡುತ್ತಿಲ್ಲ. ಇವು ವಿರೋಧ ಪಕ್ಷ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಇರುವುದಾ ಎಂದು ಪ್ರಶ್ನಿಸಿದರು.

ಸಣ್ಣ ಘಟನೆಯಾಗಿದ್ದರೂ ಮೇಲಾಧಿಕಾರಿಗಳಿಗೆ ವರದಿ ಮಾಡುವುದು ಕಡ್ಡಾಯ : ಏರ್ ಇಂಡಿಯಾ

ಪಿಎಸ್‍ಐ ನೇಮಕಾತಿ ಹಗರಣದ ಎಲ್ಲಾ ಆರೋಪಿಗಳಿಗೆ ಜಾಮೀನು ದೊರೆತ್ತಿದೆ. ಅದಕ್ಕೆ ಸಣ್ಣ ತಾಂತ್ರಿಕ ಲೋಪ ಕಾರಣ ಎಂದು ಗೃಹ ಸಚಿವರೇ ಅಭ್ಯರ್ಥಿಯೊಬ್ಬರಿಗೆ ದೂರವಾಣಿಯಲ್ಲಿ ಹೇಳಿದ್ದಾರೆ. ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವೇದಿಕೆ ಬಿಟ್ಟು ಕೆಳಕೆ ಇಳಿದು, ಜನರ ಜೊತೆ ಮಾತನಾಡಿಲಿ ಭ್ರಷ್ಟಚಾರದ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಹೇಳಿದರು.

ಸರ್ಕಾರ ಕೂಡಲೇ ಎಲ್ಲಾ ಇಲಾಖೆಗಳಲ್ಲಿ ವರ್ಗಾವಣೆಯನ್ನು ನಿಲ್ಲಿಸಬೇಕು. ಸೂಕ್ತ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.

BJP, Government, rowdies, hands, Priyank Kharge,

Articles You Might Like

Share This Article