ಬೆಂಗಳೂರು, ಜು.16- ಬಿಜೆಪಿ ಸರ್ಕಾರ ತಾಲಿಬಾನ್ ಮಾದರಿಯಲ್ಲಿ ವರ್ತಿಸುತ್ತಿದ್ದು, ಪ್ರಶ್ನಾತೀತ ಎಂಬಂತೆ ಸರ್ವಾಧಿಕಾರಿ ನಿಲುವು ಪ್ರದರ್ಶಿಸುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಸರಣಿ ಟ್ವೀಟ್‍ಗಳ ಮೂಲಕ ಕಿಡಿಕಾರಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರ ತನ್ನ ವಿರುದ್ದ ಪತ್ರಿಕೆಗಳು ಬರೆಯಬಾರದು, ಪತ್ರಕರ್ತರು ಪ್ರಶ್ನೆ ಕೇಳಬಾರದು, ಜನತೆ ಪ್ರತಿಭಟಿಸಬಾರದು, ಮುಕ್ತವಾಗಿ ತಿನ್ನಬಾರದು, ಸಂಸತ್ತಿನಲ್ಲಿ ಮಾತಾಡಬಾರದು, ಕಚೇರಿಗಳಲ್ಲಿ ಚಿತ್ರಿಕರಿಸಬಾರದು, ಹಾಸ್ಯ ಮಾಡಬಾರದು, ವ್ಯಂಗ್ಯ ಚಿತ್ರ ಬಿಡಿಸಬಾರದು ಎಂಬ ಕಾನೂನುಗಳನ್ನು ಜಾರಿಗೊಳಿಸುತ್ತಿದೆ.
ಇದೆಲ್ಲವೂ ತಾಲಿಬಾನ್‍ನಿಂದ ಕೇಳಿಬರುತ್ತಿತ್ತು, ಈಗ ನಮ್ಮಲ್ಲೇ ಕಣ್ಣೆದುರೇ ನಡೆಯುತ್ತಿವೆ ಎಂದಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ರ ಬರೆದು, ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ಈಗ ಅವರ ಪತ್ನಿ ನ್ಯಾಯಕ್ಕಾಗಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
40 ಪರ್ಸೆಂಟ್ ಸರ್ಕಾರದಲ್ಲಿ ಜನ ಸಾಮಾನ್ಯರ ಪತ್ರಗಳಿಗೆ, ಬೇಡಿಕೆಗಳಿಗೆ ಬೆಲೆ ಇದೆಯೇ ಎಂದು ಪ್ರಶ್ನಿಸಿದೆ. ಸಂತೋಷ್ ಪಾಟೀಲ್ ನೇರ ಆರೋಪ ಮಾಡಿದ್ದರೂ ಈಶ್ವರಪ್ಪ ಅವರನ್ನು ಈವರೆಗೂ ಏಕೆ ವಿಚಾರಣೆಗೆ ಒಳಪಡಿಸಿಲ್ಲ. ಮೊದಲ ಆರೋಪಿಯಾಗಿದ್ದರೂ ಬಂಧಿಸದಿರುವುದು ಏಕೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಆರೋಪಿ ಈಶ್ವರಪ್ಪನವರ ರಕ್ಷಣೆಗೆ ಬೇಲಿ ಕಟ್ಟಿ ಮುಖ್ಯಮಂತ್ರಿಗಳು ನಿಂತಿದ್ದಾರೆ ಎಂದು ಬೊಮ್ಮಾಯಿ ಅವರ ನೇರ ಆರೋಪ ಮಾಡಿದೆ.
ಭ್ರಷ್ಟರಿಗೆ ರಕ್ಷೆ, ಜನರಿಗೆ ಶಿಕ್ಷೆ ಎಂಬುದು ಬಿಜೆಪಿ ಸರ್ಕಾರದ ಧ್ಯೇಯ ವಾಕ್ಯವಾಗಿದೆ. ತನಿಖೆಗೂ ಮೊದಲೇ ಈಶ್ವರಪ್ಪ ಅವರು ಕೆಲವೇ ದಿನದಲ್ಲಿ ಆರೋಪದಿಂದ ಮುಕ್ತನಾಗುತ್ತೇನೆಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನ್ಯಾಯ ಸಮಾಯಾಗುತ್ತಿರುವುದನ್ನು ಕಂಡು ಸಂತೋಷ್ ಆತ್ಮ ರೋಧಿಸುತ್ತಿದೆ. ಸಂತೋಷ್ ಪಾಟೀಲ್‍ರ ಪತ್ನಿ ರಾಜ್ಯಪಾಲರಿಗೆ ನ್ಯಾಯಕ್ಕಾಗಿ ಪತ್ರ ಬರೆಯುವ ಪ್ರಮೇಯ ಬಂದಿದ್ದೇಕೆ? ಮುಖ್ಯಮಂತ್ರಿ ಮತ್ತು ಅವರ ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಿರುವುದು ಕಳಂಕವಲ್ಲವೇ ಎಂದು ಪ್ರಶ್ನಿಸಲಾಗಿದೆ.
ಭ್ರಷ್ಟರ ರಕ್ಷಕ ಸರ್ಕಾರಕ್ಕೆ ರಾತ್ರೋರಾತ್ರಿ ಯೂಟರ್ನ್ ಹೊಡೆಯುವಂತೆ ಚಾಟಿಯೇಟು ಬಿದ್ದಿದೆ. ಸಾರ್ವಜನಿಕ ಟೀಕೆ, ವಿಪಕ್ಷಗಳ ವಿರೋಧದ ಬಳಿಕವೇ ಭ್ರಷ್ಟ ಬಿಜೆಪಿ ಸರ್ಕಾರ ಬುದ್ದಿ ಕಲಿಯುತ್ತದೆ ಎಂಬಂತಾಗಿದೆ ಎಂದು ಸರ್ಕಾರಿ ಕಚೇರಿಗಳಲ್ಲಿ ಚಿತ್ರೀಕರಣ ನಿಷೇಸಿದ ಆದೇಶ ಕುರಿತು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ಸರ್ಕಾರ ಮಧ್ಯರಾತ್ರಿ ಕೆಲಸಗಳನ್ನು ನಿಲ್ಲಿಸಬೇಕು. ಹಿಂದಿ ಪ್ರೇಮದ ಉತ್ತುಂಗದಲ್ಲಿ ಕನ್ನಡದ ಕೊಲೆ ನಿಲ್ಲಿಸಬೇಕೆಂಬುದು ನಮ್ಮ ಸಲಹೆ! ಎಂದು ಮಾರ್ಮಿಕವಾಗಿ ಹೇಳಿದೆ.
ಸರ್ಕಾರಿ ಆದೇಶ ತಮ್ಮ ಗಮನಕ್ಕೆ ಇರಲಿಲ್ಲ ಎಂಬ ಮುಖ್ಯಮಂತ್ರಿ ಹೇಳಿರುವುದನ್ನು ಲೇವಡಿ ಮಾಡಲಾಗಿದೆ. ಹಾಗಿದ್ದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರು ಯಾರು? ಮುಖ್ಯಮಂತ್ರಿ ಕೇವಲ ಉತ್ಸವಮೂರ್ತಿ ಮಾತ್ರಾನಾ? ಅಕಾರಿಗಳು, ಮಂತ್ರಿಗಳು ನಿಮ್ಮನ್ನ ಕಡೆಗಣಿಸಿದ್ದಾರಾ? ಸರ್ಕಾರದಲ್ಲಿ ನಿಮಗೆ ಹಿಡಿತ ಇಲ್ಲವೇ? ನಾಗಪುರದ ಆಡಳಿತದಲ್ಲಿ ನೀವು ನಾಮಕಾವಸ್ತೆ ಸಿಎಂ ಮಾತ್ರಾನಾ? ಎಂದು ಬಸವರಾಜ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಪ್ರಶ್ನಿಸಿದೆ.