ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ಬಿಜೆಪಿ ಮಹಾಭಿಯಾನ

ಬೆಂಗಳೂರು,ಜೂ.5- ಕೇಂದ್ರ ಸರ್ಕಾರ ಒಂದು ವರ್ಷದ ಆಡಳಿತವನ್ನು ಸಾಧನೆಯ ವರ್ಷ ಎಂದು ಆಚರಿಸುತ್ತಿದ್ದು, ಅದರ ಭಾಗವಾಗಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು 50 ಲಕ್ಷ ಜನರನ್ನು ಹಾಗೂ ಜನಪ್ರತಿನಿಧಿಗಳು ಒಂದು ಕೋಟಿ ಮಂದಿಯನ್ನು ಭೇಟಿ ಮಾಡಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ವಿವರಿಸಲಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರ ಸಮಸ್ಯೆಯಿಂದ ಲಕ್ಷಾಂತರ ಯೋಧರು, ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ವರ್ಷ ಕಾಶ್ಮೀರದ ಸಮಸ್ಯೆ ಬಗೆಹರಿದಿದೆ. ರಾಮಮಂದಿರ ಸಮಸ್ಯೆಗಳನ್ನು ಪ್ರಜಾಸತಾತ್ಮಕವಾಗಿ ಬಗೆಹರಿಸಲಾಗಿದೆ. ತ್ರಿವಳಿ ತಲಾಕ್ ನಿಷೇಧದಿಂದ ಅಲ್ಪಸಂಖ್ಯಾತ ಮಹಿಳೆಯರು ನೆಮ್ಮದಿಯಿಂದಿದ್ದಾರೆ.

ಕೊರೊನಾ ವಿರುದ್ಧ ಸಮಗ್ರ ಹೋರಾಟ ನಡೆಸಲಾಗುತ್ತಿದೆ. ಔಷಧಿಯೇ ಇಲ್ಲದ ಸೋಂಕಿನ ವಿರುದ್ಧ ಜನಜಾಗೃತಿ ಮೂಡಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿದ್ದಾರೆ. ಸ್ವಚ್ಛ ಭಾರತದ ಬಗ್ಗೆ ಈಗ ಇಡೀ ಪ್ರಪಂಚವೇ ಮಾತನಾಡುತ್ತಿದೆ. ಈ ಎಲ್ಲಾ ಸಾಧನೆಗಳನ್ನು ಮುಂದಿಟ್ಟುಕೊಂಡು ಭಾರತೀಯ ಜನತಾಪಾರ್ಟಿ ಸಾಧನೆಯ ವರ್ಷ ಆಚರಣೆ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕರ್ತರು 5ರಿಂದ 15ರವರೆಗೆ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಕಂಟೋನ್ಮೆಂಟ್ ಮತ್ತು ಸೀಲ್‍ಡೌನ್ ಏರಿಯಾಗಳನ್ನು ಹೊರತುಪಡಿಸಿ ಪ್ರತಿ ಬೂತ್ 100 ಮನೆಗಳಿಗೆ ಹೋಗುತ್ತೇವೆ. ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುತ್ತೇವೆ ಎಂದರು.

ಸ್ವಾವಲಂಬನಿ, ಆತ್ಮನಿರ್ಧಾರ್ ಭಾರತ್ ಯೋಜನೆಗಳನ್ನು ಮೋದಿ ಘೋಷಣೆ ಮಾಡಿದ್ದಾರೆ. ಜೂ.14ರಂದು ಸ್ವದೇಶಿ ವಸ್ತುಗಳನ್ನು ಉಪಯೋಗ ಮಾಡುವಂತೆ ದೇಶದ ಜನರಲ್ಲಿ ಕರೆ ನೀಡಲಾಗುತ್ತದೆ. ಸ್ವದೇಶಿ ಮತ್ತು ವಿದೇಶಿ ವಸ್ತುಗಳ ಪಟ್ಟಿ ತಯಾರು ಮಾಡಲಾಗುತ್ತಿದ್ದು, ಆದಷ್ಟು ಸ್ವದೇಶಿ ವಸ್ತುಗಳನ್ನೇ ಬಳಕೆ ಮಾಡಲು ಮನವಿ ಮಾಡಲಾಗುವುದು. ಒಂದು ಕೋಟಿ ಜನರ ಮೊಬೈಲ್‍ಗಳಿಗೆ ಸ್ವಾವಲಂಬಿ ಭಾರತದ ಬಗ್ಗೆ ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಗಣ್ಯರ ಬಗ್ಗೆ ಮೋದಿ ಆಡಿರುವ ಭಾಷಣದ ತುಣುಕುಗಳನ್ನು ಕಳುಹಿಸಲಾಗುತ್ತದೆ. ಶಾಸಕರು, ಸಂಸದರು ಮನೆಮನೆಗಳಿಗೆ ಭೇಟಿ ನೀಡಲಿದ್ದಾರೆ.

ಮನೆಗಳಿಗೆ ಭೇಟಿ ನೀಡುವ ವೇಳೆ ಕೊರೊನಾ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಎಚ್ಚರಿಕೆ ವಹಿಸಲಾಗುವುದು. ಜೂ.10ನ್ನು ಮಹಾಸಂಪರ್ಕ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.  ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿಸಂಘಟನಾ ಕಾರ್ಯದರ್ಶಿ ಎಲ್.ಸಂತೋಷ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರುಗಳು ಆನ್‍ಲೈನ್‍ನಲ್ಲಿ ಸುಮಾರು ಒಂದು ಲಕ್ಷ ಜನರ ವಚ್ರ್ಯುವಲ್ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

ಏಕಕಾಲಕ್ಕೆ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಸಂಪರ್ಕಿಸಲಾಗುವುದು. ರಾಜ್ಯದಲ್ಲಿ 57 ಲಕ್ಷ ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆ ಕನಿಷ್ಠ ಇಬ್ಬರು ಭಾಗವಹಿಸಲೇಬೇಕೆಂಬ ಸೂಚನೆ ನೀಡಲಾಗುತ್ತಿದೆ ಎಂದರು.

ಕೊರೊನಾದಲ್ಲಿ ಜವಾಬ್ದಾರಿಯುತ ನಡೆ: ಬಿಜೆಪಿ ಜವಾಬ್ದಾರಿಯುತ ಪಕ್ಷವಾಗಿ ಕೊರೊನಾ ಸಂದರ್ಭದಲ್ಲಿ ನಡೆದುಕೊಂಡಿದೆ. ನಮ್ಮ ಶಾಸಕರು, ಜನಪ್ರತಿನಿಧಿಗಳು ರೈತರಿಂದ ಸ್ವಂತ ಹಣದಲ್ಲಿ ತರಕಾರಿಗಳನ್ನು ಖರೀದಿ ಮಾಡಿ ಹಂಚಿದ್ದಾರೆ. 1.50 ಕೋಟಿ ಆಹಾರ್ದ ಪೊಟ್ಟಣಗಳನ್ನು ಹಂಚಿಕೆ ಮಾಡ ಲಾಗಿದೆ. 40 ಲಕ್ಷ ಧವಸಧಾನ್ಯ ಪಾಕೆಟ್‍ಗಳನ್ನು ವಿತರಿಸಲಾಗಿದೆ, ಒಂದು ಕೋಟಿ ಮಾಸ್ಕ್ ಹಂಚಿಕೆ ಮಾಡಿದ್ದೇವೆ ಎಂದು ಸಮರ್ಥಿಸಿಕೊಂಡರು.

ವಿಧಾನಪರಿಷತ್‍ಗೆ ನೇಮಕಾತಿಗೆ ಸಂಬಂಧಪಟ್ಟಂತೆ ಬಿಜೆಪಿಯ ಕೋರ್ ಕಮಿಟಿಯಲ್ಲಿ ಚರ್ಚೆ ನಡೆಸಲಾಗುತ್ತದೆ. ಸರ್ಕಾರ ರಚನೆಗೆ ಕಾರಣರಾದವರನ್ನು ಮತ್ತು ಬಿಜೆಪಿ ನಿಷ್ಠ ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ರಾಜಕೀಯದಲ್ಲಿ ಕೆಲವೊಮ್ಮೆ ಅತೃಪ್ತಿ ಸಾಮಾನ್ಯ. ಕೆಲವರು ಅವಕಾಶ ಕೇಳುವುದು ಸಾಮಾನ್ಯ. ಅದನ್ನು ಪಕ್ಷದ ಹಿರಿಯರು ಚರ್ಚೆಯ ಮೂಲಕ ಬಗೆಹರಿಸುತ್ತಾರೆ ಎಂದು ಹೇಳಿದರು.