“ಸರ್ಕಾರಕ್ಕೆ ಕೊರೊನ ಹೋಗುವುದು ಬೇಕಿಲ್ಲ, ಜನರ ಜೀವಕ್ಕಿಂತ ತೆರಿಗೆ, ಆದಾಯವೇ ಮುಖ್ಯ”

ಳೂರು, ಮೇ 9- ಕೋವಿಡ್ ಎರಡನೇ ಅಲೆ ಹರಡುವಿಕೆ ತಡೆಯಲು ಜಾರಿಗೆ ತಂದಿರುವ ಸೆಮಿ ಲಾಕ್ ಡೌನ್ ಗೆ ಅರ್ಥವಿಲ್ಲ. ಜನರ ಆರೋಗ್ಯ ಕಾಪಾಡುವ ನಿಜವಾದ ಕಳಕಳಿ ಸರ್ಕಾರಕ್ಕೆ ಇದ್ದರೆ, ಕಳೆದ ವರ್ಷದಂತೆ ಸಂಪೂರ್ಣ ಲಾಕ್ ಡೌನ್ ಅನುಷ್ಠಾನಗೊಳಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಆಗ್ರಹಿಸಿದರು.

ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಕೈಚೆಲ್ಲಿ ಕುಳಿತಿದ್ದು, ಸಮಸ್ಯೆ ನಿವಾರಿಸಲಾಗದೆ ಅಸಹಾಯಕವಾಗಿದೆ ಎಂದು ಅವರು ಈ ಸಂಜೆಗೆ ತಿಳಿಸಿದರು. ಕೋವಿಡ್ ಮಾರ್ಗಸೂಚಿ ಗಮನಿಸಿದರೆ, ಸರ್ಕಾರಕ್ಕೆ ಕೊರೊನ ಹೋಗುವುದು ಬೇಕಿಲ್ಲ. ಜನರ ಜೀವಕ್ಕಿಂತ ತೆರಿಗೆ, ಆದಾಯವೇ ಮುಖ್ಯವಾಗಿದೆ ಎಂದು ಟೀಕಿಸಿದರು.

ನಿತ್ಯ ಸೋಂಕಿತರ ಸಂಖ್ಯೆ ಐವತ್ತು ಸಾವಿರದ ಆಸುಪಾಸಿನಲ್ಲಿದೆ. ಆದರೂ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಕೋವಿಡ್ ಹೆಚ್ಚಳ ಹಾಗೂ ಜನರ ಸಾವು ಸೇರಿದಂತೆ ರಾಜ್ಯದ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.

ಮೆಡಿಕಲ್ ಸ್ಟೋರ್ ಗಳಿಗೆ ಅವಕಾಶ ನೀಡಿ ವಾಹನ ನಿರ್ಬಂಧಿಸಿದರೆ ಹೇಗೆ? ಸರ್ಕಾರಕ್ಕೆ ಸಾಮಾನ್ಯ ಜ್ಞಾನವೇ ಇಲ್ಲ. ತಾಲೂಕು ಕೇಂದ್ರಗಳಲ್ಲಿ ಇರುವ ಮೆಡಿಕಲ್ ಸ್ಟೋರ್ ಗೆ 30-40 ಕಿ.ಮೀ. ನಿಂದ ಹೋಗುವುದಾದರು ಹೇಗೆ? ಕನಿಷ್ಠ ದ್ವಿಚಕ್ರ ವಾಹನಗಳಿಗೆ ಅವಕಾಶ ನೀಡಬೇಕು. ನೆಪ ಹೇಳಿಕೊಂಡು ಓಡಾಡುವವರನ್ನು ದಂಡಿಸಲಿ. ಆದರೆ, ಔಷಧಿಯಂತಹ ಅಗತ್ಯ ವಸ್ತು ಖರೀದಿಸಲು ತೊಂದರೆ ಆಗಬಾರದು ಎಂದರು.

ತಾಲ್ಲೂಕು ಕೇಂದ್ರದಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲ. ನೇಮಕವಾಗಿರುವ ವೈದ್ಯರಿಗೂ ನೇಮಕಾತಿ ಆದೇಶ ನೀಡಿಲ್ಲ. ಗುತ್ತಿಗೆ ಆಧಾರದ ಮೇಲಾದರೂ ತಕ್ಷಣ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು‌.

ಮದುವೆಗೆ ಅವಕಾಶ ನೀಡಬಾರದು. ಉಪ ನೋಂದಣಿ ಕಚೇರಿಯಲ್ಲಿ ವಿವಾಹ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು. ಅದು ಕಾನೂನುಬದ್ದವಾಗುತ್ತದೆ. ಕೊರೊನದ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ರಾಜ್ಯ ಸರ್ಕಾರದ ಆಡಳಿತ ವೈಖರಿಯನ್ನು ಸೂಕ್ಷ್ಮವಾಗಿ ರಾಜ್ಯಪಾಲರು ಗಮನಿಸಬೇಕು. ಕೋವಿಡ್ ನಿಂದ ಜನರ ಜೀವ ಉಳಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನವನ್ನು ರಾಜ್ಯಪಾಲರು ನೀಡಬೇಕು ಎಂದು ಮನವಿ ಮಾಡಿದರು.