ಬಿಜೆಪಿಗೆ ಆತ್ಮಸಾಕ್ಷಿ ಇಲ್ಲವೆ..? ಇನ್ಯಾವ ಸಾಕ್ಷಿ ಬೇಕು..? : ಕುಮಾರಸ್ವಾಮಿ

Social Share

ಮೈಸೂರು,ಆ.26- ಪರ್ಸೆಂಟೇಜ್ ವಿಚಾರದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿಮಗೆ ಆತ್ಮಸಾಕ್ಷಿ ಇಲ್ಲವೆ? ಇನ್ಯಾವ ಸಾಕ್ಷಿ ಬೇಕು ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ ಪಡೆಯುವ ವಿಚಾರ ನಿರಂತರವಾಗಿ ಚರ್ಚೆಯಾಗುತ್ತಿದೆ. ಒಂದೊಂದು ಇಲಾಖೆಯಲ್ಲಿ ಒಂದೊಂದು ರೀತಿ ನಡೆಯುತ್ತಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಪೂರ್ವದಿಂದಲೂ ಪರ್ಸೆಂಟೇಜ್ ಪಡೆಯಲಾಗುತ್ತಿದೆ. ಹಣ ಸಂಗ್ರಹ ಮಾಡಲು ಮೊದಲಿಗೆ ಅಬಕಾರಿ ಮೂಲವನ್ನು ಆಶ್ರಯಿಸಲಾಗಿತ್ತು. ನಂತರ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಯುತ್ತಿತ್ತು. ಸಬ್‍ರಿಜಿಸ್ಟ್ರಾರ್ ಕಚೇರಿಯಲ್ಲೂ ಕೂಡ ಇಂತಹ ವ್ಯವಸ್ಥೆ ಇದೆ. ಕೆಲವರು ಕೆಲಸವಾದ ಖುಷಿಯಲ್ಲಿ ಕೊಟ್ಟು ಹೋಗುತ್ತಿದ್ದರು. ಈಗ ಕಿರುಕುಳ ನೀಡಿ ವಸೂಲಿ ಮಾಡುತ್ತಿರುವುದು ವ್ಯವಸ್ಥೆಯ ದೋಷ ಎಂದು ಟೀಕಿಸಿದರು.

ರಾಜ್ಯದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಈ ವ್ಯವಸ್ಥೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಈ ಸ್ಥಿತಿ ಬಂದಿದೆ. ಬಿಜೆಪಿಯವರಿಗೆ ಆತ್ಮಸಾಕ್ಷಿ ಇದ್ದರೆ ಉತ್ತರ ನೀಡಬೇಕು. ಮರಳು ದಂಧೆ, ಕ್ವಾರಿ ದಂಧೆ ನಡೆಯುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಹಲವರು ಹಣ ಪಡೆದಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂದು ಪ್ರಶ್ನಿಸಿದರು.

ಸರ್ಕಾರದಿಂದ ಗುತ್ತಿಗೆ ಪಡೆದು ಆರು ತಿಂಗಳು ಕಾಮಗಾರಿ ಮಾಡುವುದನ್ನು ಗುತ್ತಿಗೆದಾರರು ನಿಲ್ಲಿಸಿದರೆ ಆಗ ಎಲ್ಲರಿಗೂ ಪಾಠವಾಗಲಿದೆ ಎಂಬ ಸಲಹೆ ನೀಡಿದರು.ಪ್ರತಿ ಹಳ್ಳಿಯಲ್ಲೂ ಗುತ್ತಿಗೆದಾರರು ಹುಟ್ಟಿಕೊಂಡಿದ್ದಾರೆ. ಕೆಲಸವನ್ನೇ ಮಾಡದೆ ದುಡ್ಡು ಹೊಡೆಯುತ್ತಿದ್ದಾರೆ. ಲಾಟರಿ ನಿಷೇಧ ಮಾಡಿದಾಗಲೂ ಹಲವು ಆಫರ್‍ಗಳನ್ನು ನೀಡಲಾಯಿತು. ಆದರೂ ತಿರಸ್ಕರಿಸಿ ಲಾಟರಿ ನಿಷೇಧ ಮಾಡಲಾಯಿತು ಎಂದು ಹೇಳಿದರು.

ಎಂಜನಿಯರ್‍ಗಳಿಗೆ ಮುಂಬಡ್ತಿ ಹಾಗೂ ಕಾಮಗಾರಿಗಳ ಬಿಲ್‍ಅನ್ನು ಪ್ರತಿ ತಿಂಗಳು ಪಾತಿಸಲಾಗುತ್ತಿತ್ತು. ಯಾವುದೇ ಅಕಾರಿಗಳನ್ನು ಆಗ ದುರುಪಯೋಗ ಮಾಡಿಕೊಳ್ಳಲಿಲ್ಲ ಎಂದ ಸಮರ್ಥಿಸಿಕೊಂಡರು. ಪರ್ಸೆಂಟೇಜ್ ವಿಚಾರವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಲಾಗುತ್ತಿದೆ. ಈಗಾಗಲೇ ನಡೆದಿರುವ ನ್ಯಾಯಾಂಗ ತನಿಖೆಗೆ ಎಷ್ಟು ಮಂದಿಗೆ ಶಿಕ್ಷೆಯಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಪರ್ಸೆಂಟೇಜ್ ವ್ಯವಹಾರ ಎಷ್ಟಿತ್ತು ಎಂಬುದು ಗೊತ್ತಿದೆ. ಮೈತ್ರಿ ಸರ್ಕಾರವನ್ನು ಪತನಗೊಳಿಸಲು ಪರ್ಸೆಂಟೇಜ್ ವ್ಯವಹಾರವೇ ಮೂಲ ಕಾರಣ ಎಂದು ಹೇಳಿದರು.

ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್‍ಗೆ ಮೇಯರ್ ಹುದ್ದೆ ಸಿಗಲಿದೆ. ಕಾಂಗ್ರೆಸ್ ಜತೆ ಮೈತ್ರಿ ಬೇಡ ಎನ್ನಿಸಿದೆ. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ತೀರ್ಮಾನವಾಗಿಲ್ಲ ಎಂದರು.

Articles You Might Like

Share This Article