ಬೆಂಗಳೂರು,ಫೆ.8- ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಸರ್ಕಾರ ರಚನೆ ಪ್ರಕ್ರಿಯೆ ಮುಗಿಯುವವರೆಗೂ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ನಿಗಮ ಮಂಡಳಿ ನೇಮಕಾತಿ ಸೇರಿದಂತೆ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳದಂತೆ ಹೈಕಮಾಂಡ್ ಬ್ರೇಕ್ ಹಾಕಿದೆ.
ದೆಹಲಿ ವರಿಷ್ಠರ ಈ ತೀರ್ಮಾನದಿಂದಾಗಿ ಕೆಲವೇ ದಿನಗಳಲ್ಲಿ ಮಂತ್ರಿಯಾಗುತ್ತೇವೆ ಎಂದು ಮನಸ್ಸಿನಲ್ಲಿ ಮಂಡಕ್ಕಿ ಮೇಯ್ದಿದ್ದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ದೆಹಲಿ ಯಾತ್ರೆ ಫಲ ನೀಡಿಲ್ಲ. ಹೈಕಮಾಂಡ್‍ನ ಈ ನಿಲುವಿನಿಂದ ಸಂಪುಟ ವಿಸ್ತರಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಸ್ಪಷ್ಟವಾಗಿದೆ. ಪ್ರತಿನಿತ್ಯ ಸಿಎಂ ನಿವಾಸಕ್ಕೆ ಅಲೆದಾಡುತ್ತಿರುವ ಆಕಾಂಕ್ಷಿಗಳು ಮತ್ತಷ್ಟು ದಿನ ಕಾಯಬೇಕಾಗಲಿದೆ.
ಇದರ ಜೊತೆ ನಿಗಮ ಮಂಡಳಿ ಆಕಾಂಕ್ಷಿಗಳಿಗೂ ನಿರಾಸೆಯಾಗಿದೆ. ಪಟ್ಟಿ ಸಿದ್ದವಾಗಿದೆ ಇನ್ನೇನು ಹೈಕಮಾಂಡ್ ಅನುಮತಿ ಅಷ್ಟೆ ಬಾಕಿ ಎಂದು ಕಾದು ಕುಳಿತಿರುವ ಆಕಾಂಕ್ಷಿಗಳಿಗೆ ಈ ಬಾರಿಯೂ ಮತ್ತೆ ನಿರಾಸೆಯಾದಂತಾಗಿದೆ.
ಕರ್ನಾಟಕದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿದೆ. ನಾವು ಉತ್ತರಪ್ರದೇಶ, ಉತ್ತರಖಂಡ್, ಪಂಜಾಬ್, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯನ್ನು ಗೆಲ್ಲಲೇಬೇಕು. ಇದು ನಮಗೆ ಅತ್ಯಂತ ಮಹತ್ವದ್ದಾಗಿರುವುದರಿಂದ ತಕ್ಷಣವೇ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡುವ ಔಚಿತ್ಯವಾದರೂ ಏನು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ವರಿಷ್ಠರು ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ.
ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನಾರಚನೆಯಂತಹ ಕೆಲಸಕ್ಕೆ ಹೋಗಬೇಡಿ. ಪಂಚ ರಾಜ್ಯಗಳ ಚುನಾವಣೆ ಮುಗಿಯಲಿ, ರಾಜ್ಯದ ಬಜೆಟ್ ಕೂಡ ಮಂಡನೆಯಾಗಲಿ. ಮಾರ್ಚ್ 15ರವರೆಗೂ ಯಾವುದೇ ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಎಂದು ಷಾ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಚರ್ಚೆಯ ನಡುವೆಯೇ ಬೊಮ್ಮಾಯಿ ಅವರ ಆಡಳಿತ ವೈಖರಿಗೆ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜನಪರ ಆಡಳಿತ ಶೈಲಿಗೆ, ಎಲ್ಲರನ್ನೂ ಜೊತೆಗೆ ಮುನ್ನಡೆಸುವ, ಸಂಪುಟ ಸದಸ್ಯರ ವಿಶ್ವಾಸ ಹೊಂದಿರುವುದನ್ನು ಶ್ಲಾಘಿಸಿದ್ದಾರೆ ಎಂದು ತಿಳಿದುಬಂದಿದೆ.
ಆರು ತಿಂಗಳ ಅವಧಿಯಲ್ಲಿ ತಮ್ಮ ನೇತೃತ್ವದ ಸರ್ಕಾರ ತೆಗೆದುಕೊಂಡ ಆಡಳಿತಾತ್ಮಕ ಕ್ರಮಗಳ ಬಗ್ಗೆ ಬೊಮ್ಮಾಯಿ ಅವರು ವಿವರಿಸಿದ್ದನ್ನು ಅಮಿತ್ ಶಾ ಗಮನವಿಟ್ಟು ಕೇಳಿ ಪ್ರಶಂಸೆ ಸೂಚಿಸಿದರು ಎನ್ನಲಾಗಿದೆ. ಇದು ಬೊಮ್ಮಾಯಿ ಅವರ ಆತ್ಮವಿಶ್ವಾಸ ಹೆಚ್ಚಳಕ್ಕೂ ಕಾರಣವಾಗಿದೆ.
ಇದೇ ವೇಳೆ ಮುಖ್ಯಮಂತ್ರಿಗಳು ಕಳೆದ ಆರು ತಿಂಗಳ ಅವಯಲ್ಲಿ ತಮ್ಮ ನೇತೃತ್ವದ ಸರ್ಕಾರ ಮಾಡಿರುವ ಸಾಧನೆಯನ್ನೊಳಗೊಂಡ ಕಿರುಹೊತ್ತಿಗೆಯನ್ನು ವರಿಷ್ಠರಿಗೆ ನೀಡಿದ್ದಾರೆ.
ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಅಮಿತ್ ಶಾ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಮಾರ್ಚ್15ರ ವರೆಗೆ ಸಂಪುಟ ಬದಲಾವಣೆ, ನಿಗಮ ಮಂಡಳಿಗಳ ಅಧ್ಯಕ್ಷೆ ಬದಲಾವಣೆ ಬೇಡ ಎಂದಿರುವುದು ಸದ್ಯಕ್ಕಂತೂ ಮುಖ್ಯಮಂತ್ರಿ ಮೇಲಿನ ಒತ್ತಡ ಕಡಿಮೆ ಮಾಡಿದೆ.
