ಹುಬ್ಬಳ್ಳಿಯಲ್ಲಿ ಬೃಹತ್ ಜನೋತ್ಸವ ಆಯೋಜಿಸಿ ಪ್ರಧಾನಿ ಆಹ್ವಾನಿಸಲು ಮುಂದಾದ ಬಿಜೆಪಿ

Social Share

ಬೆಂಗಳೂರು,ಆ.11- ಪಕ್ಷ ಹಾಗೂ ಸರ್ಕಾರದಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸಿ ಕಾರ್ಯಕರ್ತರಲ್ಲಿ ವಿಶ್ವಾಸ ತುಂಬಲು ಮುಂದಾಗಿರುವ ಬಿಜೆಪಿ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಎಲ್ಲ ಪ್ರಮುಖ ನಾಯಕರು, ಸಚಿವರು, ಶಾಸಕರು, ಪದಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಪಾಲ್ಗೊಳ್ಳಲಿದ್ದಾರೆ.

ರಾಜ್ಯದ ಸುಮಾರು 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಅಂತಿಮವಾಗಿ ದಾವಣಗೆರೆ ಇಲ್ಲವೇ ಹುಬ್ಬಳ್ಳಿಯಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸಿ ಇದಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲು ಪಕ್ಷ ತೀರ್ಮಾನಿಸಿದೆ.

ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ, ಮೈಸೂರು, ಹಾಸನ ಹೀಗೆ ಸುಮಾರು 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ.

ಒಂದೊಂದು ಕ್ಷೇತ್ರದಲ್ಲಿ ಸುಮಾರು 10-15 ಸಾವಿರ ಜನರನ್ನು ಸೇರಿಸಿ 2023ರ ಚುನಾವಣೆಗೆ ಇದರ ಮೂಲಕವೇ ಬಿಜೆಪಿ ರಣಕಹಳೆ ಮೊಳಗಿಸಲಿದೆ. ಸಿಎಂ ಬೊಮ್ಮಾಯಿ ಅಕಾರ ಪೂರ್ಣಗೊಳಿಸಿ ಒಂದು ವರ್ಷ ಪೂರ್ಣಗೊಳಿಸಿದ ವೇಳೆ ದೊಡ್ಡ ಬಳ್ಳಾಪುರದಲ್ಲಿ ಬೃಹತ್ ಜನೋತ್ಸವ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿತ್ತು. ಪುತ್ತೂರಿನಲ್ಲಿ ಬಿಜೆಪಿ ಯುವ ಮೋರ್ಚಾದ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾಗಿದ್ದರಿಂದ ಕೇಂದ್ರ ವರಿಷ್ಠರ ಸೂಚನೆ ಮೇರೆಗೆ ದಿಢೀರನೆ ಕಾರ್ಯಕ್ರಮವನ್ನು ರದ್ದುಪಡಿಸಲಾಗಿತ್ತು.

ಈ ಘಟನೆ ನಡೆದ ನಂತರ ಆಡಳಿತಾರೂಢ ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದ್ದವು. ಒಂದು ಕಡೆ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ, ಬೊಮ್ಮಾಯಿ ನಾಯಕತ್ವ ಬದಲಾವಣೆ, ಸರ್ಕಾರದ ಮೇಲೆ ಕೇಳಿಬಂದ ಆಪಾದನೆಗಳು, ಪ್ರತಿಪಕ್ಷಗಳ ವಾಗ್ದಾಳಿ ಹೀಗೆ ನಾನಾ ಕಾರಣಗಳಿಂದ ಬಿಜೆಪಿಗೆ ಗರಬಡಿದಂತಾಗಿತ್ತು.

ಇದೀಗ ಕಾರ್ಯಕರ್ತರಲ್ಲಿ ಒಂದಿಷ್ಟು ವಿಶ್ವಾಸ ಮತ್ತು ಆತ್ಮಸ್ಥೈರ್ಯವನ್ನು ಹೆಚ್ಚಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು ಹಾಗೂ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದು ಬಿಜೆಪಿ ಲೆಕ್ಕಾಚಾರವಾಗಿದೆ.

ಕಾರ್ಯಕರ್ತರಲ್ಲಿ ಪಕ್ಷದ ಬಗ್ಗೆ ಸಾಕಷ್ಟು ಬೇಸರ ಉಂಟು ಮಾಡಿದೆ. ಇತ್ತೀಚೆಗೆ ನಡೆದಿರುವ ಘಟನೆಗಳಿಂದ ಪಕ್ಷ ನಿಷ್ಠರೇ ರಾಜೀನಾಮೆ ನೀಡಿದ್ದಾರೆ. ದೇಶದ ಯಾವುದೇ ರಾಜ್ಯದಲ್ಲೂ ಕಾರ್ಯಕರ್ತರು ರಾಜೀನಾಮೆ ನೀಡಿದ ನಿರ್ದಶನಗಳಿಲ್ಲ. ಹೀಗಾಗಿ ಅವರಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕಿದೆ ಸಂಘಪರಿವಾರದ ನಾಯಕರು ಕಿವಿಮಾತು ಹೇಳಿದ್ದಾರೆ.

ಸಂಘ ಪರಿವಾರದ ಹಿರಿಯ ನಾಯಕರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು 2018ರಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯಾದ್ಯಂತ ನಡೆಸಲಾಗಿದ್ದ ಕಾರ್ಯಕ್ರಮದ ರೀತಿಯಲ್ಲಿ ಜನರ ಬಳಿ ತೆರಳುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸೂಚಿಸಿದೆ.

ವಿಶೇಷವಾಗಿ ಬಿಜೆಪಿಯ ಭದ್ರಕೋಟೆ ಎನಿಸಿದ ಕರಾವಳಿ ಜಿಲ್ಲೆಯಲ್ಲಿ ಬೃಹತ್ ಮಟ್ಟದ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಪಕ್ಷದ ಕಾರ್ಯಕರ್ತರು ಸರ್ಕಾರ ಮತ್ತು ಬಿಜೆಪಿ ಬಗ್ಗೆ ಆಕ್ರೋಶಗೊಂಡಿದ್ದರೂ ಪ್ರಧಾನಿ ಮೋದಿ ಬಗ್ಗೆ ವಿಶೇಷವಾದ ಒಲವು ಮತ್ತು ಗೌರವ ಇಟ್ಟುಕೊಂಡಿದ್ದಾರೆ. ಹೀಗಾಗಿ ಮಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಸುವ ಬಗ್ಗೆ ಚಿಂತನ-ಮಂಥನ ನಡೆದಿದೆ.

ಜನೋತ್ಸವದ ಸಂದರ್ಭದಲ್ಲಿ ಒಂದೇ ಒಂದು ಅಪಸ್ವರಕ್ಕೆ ಕಾರಣವಿಲ್ಲದೆ ಒಗ್ಗಟ್ಟು ಪ್ರದರ್ಶಿಸಬೇಕು. ಇದರ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಬೊಮ್ಮಾಯಿ, ನಳೀನ್‍ಕುಮಾರ್ ಕಟೀಲ್ ಹಾಗೂ ಯಡಿಯೂರಪ್ಪನವರೇ ವಹಿಸಿಕೊಳ್ಳಬೇಕೆಂದು ಸೂಚಿಸಿದೆ.

Articles You Might Like

Share This Article