ಬಿಹಾರದಲ್ಲಿ ಕ್ಷೀಪ್ರ ರಾಜಕೀಯ ಬೆಳವಣಿಗೆ, ಜೆಡಿಯು-ಬಿಜೆಪಿ ಸರ್ಕಾರ ಪತನ ಸಾಧ್ಯತೆ..?

Social Share

ನವದೆಹಲಿ, ಆ.9- ಬಿಹಾರ ರಾಜ್ಯದ ಕ್ಷೀಪ್ರ ರಾಜಕೀಯ ಬೆಳವಣಿಗೆಯಲ್ಲಿ ಮತ್ತೆ ಬಿಜೆಪಿ ಮತ್ತು ಜೆಡಿಯು ಸರ್ಕಾರ ಪತನವಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಆರ್‍ಜೆಡಿ, ಕಾಂಗ್ರೆಸ್, ಜೆಡಿಯು ಮತ್ತು ಇತರ ಜಾತ್ಯತೀತ ಪಕ್ಷಗಳ ಸಮಿಶ್ರ ಸರ್ಕಾರ ರಚನೆಯಾಗುವ ಸಂಭವನೀಯತೆ ಇದೆ.

ನಿನ್ನೆಯಿಂದಲೂ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಕುತೂಹಲ ಮೂಡಿಸಿದ್ದು, ಎಲ್ಲಾ ಪಕ್ಷಗಳು ಸರಣಿ ಸಭೆಗಳ ಮೂಲಕ ಬಿರುಸಿನ ಚಟುವಟಿಕೆ ಆರಂಭಿಸಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಪಾಲುದಾರರ ಪಕ್ಷವಾಗಿದ್ದ ಬಿಜೆಪಿಯ 16 ಮಂದಿ ಸಚಿವರು ಇಂದು ಮಧ್ಯಾಹ್ನ ರಾಜ್ಯಪಾಲ ಫಗು ಚವ್ಹಾಣ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ವದ್ಧಂತಿಗಳು ಹರಡಿದ್ದವು.

ಆದರೆ ಅದನ್ನು ತಳ್ಳಿ ಹಾಕಿದ ಬಿಜೆಪಿ ಸಚಿವ ಆರ್.ಸಿ.ಪಿ ಸಿಂಗ್, ನಾವೇಕೆ ರಾಜೀನಾಮೆ ನೀಡಬೇಕು. ನಮ್ಮ ಮಧ್ಯೆ ಉತ್ತಮ ಸಂಬಂಧವಿದೆ. ಬಿಜೆಪಿ-ಜೆಡಿಯು ಸರ್ಕಾರ ಮುಂದುವರೆಯಲಿದೆ. ಅನಗತ್ಯ ವದ್ದಂತಿಗಳಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಬಿಜೆಪಿ ಮುಖ್ಯಮಂತ್ರಿ ನಿತೀಶ್‍ರ ಮುಂದಿನ ನಡೆಯನ್ನು ಕಾದು ನೋಡುತ್ತಿದೆ.

ಅತ್ತ ಜೆಡಿಯು, ಆರ್‍ಜೆಡಿ ಪಕ್ಷಗಳಲ್ಲಿ ಪ್ರತ್ಯೇಕ ಸಭೆಗಳು ನಡೆದಿವೆ. ನಿತೀಶ್ ಕುಮಾರ್ ಸಂಜೆ 4.30ಕ್ಕೆ ವಿರೋಧ ಪಕ್ಷಗಳ ನಾಯಕರ ಜೊತೆ ರಾಜ್ಯಪಾಲರನ್ನು ಭೇಟಿ ಮಾಡಲು ಸಮಯ ನಿಗದಿ ಪಡಿಸಿಕೊಂಡಿದ್ದಾರೆ. ಲಾಲು ಪ್ರಸಾದ್ ಯಾದವ್ ಅವರ ಮನೆಯಲ್ಲಿ ಜೆಡಿಯುನ ಎಲ್ಲಾ ಪಕ್ಷಗಳ ಶಾಸಕರು ರಹಸ್ಯ ಸಭೆ ನಡೆಸಿದ್ದಾರೆ. ಶಾಸಕರ ಮೊಬೈಲ್‍ಗಳನ್ನು ಹೊರಗೆ ಇರಿಸಿ ಸಭೆಗೆ ಬಿಟ್ಟುಕೊಳ್ಳಲಾಗಿದೆ. ಜೆಡಿಯು ಜೊತೆ ಸೇರಿ ಸರ್ಕಾರ ರಚಿಸುವ ಸಾಧ್ಯತೆಗಳನ್ನು ಶಾಸಕರು ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಸಭೆಯ ಬಳಿಕವಷ್ಟೆ ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಅತ್ತ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಪಕ್ಷದ ಶಾಸಕರ ಜೊತೆ ಬೆಳಗ್ಗೆ ಸಭೆ ನಡೆಸಿದ್ದಾರೆ. ಆದರೆ ಅಲ್ಲಿ ತೆಗೆದುಕೊಂಡ ನಿರ್ಣಯವನ್ನು ರಹಸ್ಯವಾಗಿ ಇಡಲಾಗಿದೆ. ಅತ್ತ ಕಾಂಗ್ರೆಸ್ ಜೆಡಿಯುಗೆ ಬೆಂಬಲ ನೀಡಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ಬಿಜೆಪಿ-ಜೆಡಿಯು ಮೈತ್ರಿ ಮುರಿದು ಬಿದ್ದರೆ ಕಾಂಗ್ರೆಸ್ ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್ ತಿಳಿಸಿದೆ.

ಆರ್‍ಜೆಡಿ 79, ಜೆಡಿಯು 45, ಕಾಂಗ್ರೆಸ್ 19, ಎಡಪಕ್ಷಗಳ 16 ಮಂದಿ ಶಾಸಕರು ಸೇರಿ ಸಮ್ಮಿಶ್ರ ಸರ್ಕಾರ ರಚಿಸಲಿದ್ದಾರೆ ಎಂದು ಹೇಳಲಾಗಿದೆ. 243 ಸಂಖ್ಯಾಬಲ ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಮಂದಿ ಶಾಸಕರ ಬೆಂಬಲ ಅಗತ್ಯವಿದೆ.

ಆರ್‍ಜೆಡಿ ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷವಾಗಿದೆ. ಆದರೂ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಯು ಉಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಆರ್‍ಜೆಡಿ ನಾಯಕ ತೇಜೆಸ್ವಿಯಾದವ್ ಉಪಮುಖ್ಯಮಂತ್ರಿ ಮತ್ತು ಗೃಹ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. 77 ಶಾಸಕರೊಂದಿಗೆ ಎರಡನೆ ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿ ಈ ಬೆಳವಣಿಗೆಯಿಂದ ಗೊಂದಲಕ್ಕೆ ಒಳಗಾಗಿದೆ.

ಈ ಮೊದಲು 2015ರಿಂದ 2017ರ ನಡುವೆ ಜೆಡಿಯು, ಆರ್‍ಜೆಡಿ, ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಯಾಗಿತ್ತು. ನಂತರ ನಿತೀಶ್ ಮತ್ತೆ ಬಿಜೆಪಿ ಸಖ್ಯ ಬೆಳೆಸಿದರು. ಇತ್ತೀಚೆಗೆ ಜೆಡಿಯು ಮತ್ತು ಬಿಜೆಪಿ ನಡುವೆ ಸಂಬಂಧ ಹಳಸಿದೆ ಎನ್ನಲಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಯನ್ನು ಬೆಂಬಲಿಸಿದ್ದ ನಿತೀಶ್ ಕುಮಾರ್, ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯನ್ನು ಬಹಷ್ಕರಿಸಿದ್ದರು. ಇದರಿಂದ ಎರಡು ಪಕ್ಷಗಳ ನಡುವಿನ ಮುಸುಕಿನ ಗುದ್ದಾಟ ಬಯಲಿಗೆ ಬಂದಿತ್ತು. ಈಗ ನಿತೀಶ್ ಮತ್ತೆ ಜಾತ್ಯತೀತ ನಿಲುವಿನ ಪಕ್ಷಗಳತ್ತ ವಾಲಿದ್ದಾರೆ.

ಆರ್‍ಜೆಡಿ ನಾಯಕ ತೇಜೆಸ್ವಿ ಯಾದವ್ ಇತ್ತೀಚೆಗೆ ನಿತೀಶ್‍ರೊಂದಿಗೆ ಹೆಚ್ಚು ಆತ್ಮೀಯತೆ ಬೆಳೆಸಿಕೊಂಡಿದ್ದರು. ಕಳೆದ ಜೂನ್‍ನಲ್ಲಿ ಮುಕ್ತಾಯವಾದ ಅಧಿವೇಶನದಲ್ಲಿ ಪ್ರತಿಪಕ್ಷ ಆರ್‍ಜೆಡಿ ಸರ್ಕಾರವನ್ನು ಟೀಕಿಸದೆ ತಟಸ್ಥ ನಿಲುವು ಅನುಸರಿಸಿತ್ತು. ಲಾಲು ಪ್ರಸಾದ್ ಯಾದವ್ ಅವರ ಅನಾರೋಗ್ಯದ ಸಂದರ್ಭದಲ್ಲಿ ದೆಹಲಿಯಲ್ಲಿ ಚಿಕಿತ್ಸೆ ಕೊಡಿಸಲು ನಿತೀಶ್ ಕುಮಾರ್ ಅವರು ಖುದ್ದು ನಿಂತು ಎಲ್ಲಾ ತಯಾರಿಗಳನ್ನು ನೋಡಿಕೊಂಡಿದ್ದರು. ಮೈತ್ರಿಗೆ ಹಲವು ಬೆಳವಣಿಗೆಗಳು ನೆರವಾಗಿವೆ ಎಂದು ಹೇಳಲಾಗಿದೆ.

Articles You Might Like

Share This Article