ಬಿಜೆಪಿ ಸೇರಿದರೆ ಕಳಂಕಿತರು ಸ್ವಚ್ಚಗೊಳ್ಳುತ್ತಿದ್ದಾರೆಯೇ?

Social Share

ಬೆಂಗಳೂರು,ಅ.16- ಕಳಂಕಿತರು ಬಿಜೆಪಿಗೆ ಹೋಗುತ್ತಿದ್ದಂತೆ ಡ್ರೈಕ್ಲೀನಿಂಗ್ ಮಾದರಿಯಲ್ಲಿ ಸ್ವಚ್ಚಗೊಳ್ಳುತ್ತಿದ್ದಾರೆಯೇ? ಎಂದು ಎಐಸಿಸಿ ಅಧ್ಯಕ್ಷೀಯ ಸ್ಥಾನದ ಚುನಾವಣಾ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಚುನಾವಣೆ ನಡೆದಾಗ ಆರೇಳು ರಾಜ್ಯಗಳಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಆದರೆ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಮತ್ತಿತರ ತನಿಖಾ ಸಂಸ್ಥೆಗಳನ್ನು ಬಳಸಿ ದೇಶದ್ರೋಹದ ಕಾನೂನು ದುರ್ಬಳಕೆ ಮೂಲಕ ಹಣ, ಅಧಿಕಾರದಿಂದ ಶಾಸಕರು, ಸಂಸದರನ್ನು ಎದುರಿಸಿ ಕಾಂಗ್ರೆಸ್ ಸರ್ಕಾರಗಳನ್ನು ಕಿತ್ತೊಗೆದಿದೆ ಎಂದರು.

ಮಧ್ಯಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾಯಿತ ಸರ್ಕಾರವನ್ನು ಪತನಗೊಳಿಸಲಾಗಿದೆ. ಬಿಜೆಪಿ ಆರ್‍ಎಸ್‍ಎಸ್ ಬೆಂಬಲಿತ ಸರ್ಕಾರ ಸಂವಿಧಾನಕ್ಕೆ ತಿಲಾಂಜಲಿ ನೀಡಿದೆ. ಸಂವಿಧಾನದ ಪ್ರಕಾರ ನಡೆದುಕೊಳ್ಳುವ ಸೌಜನ್ಯ ತೋರುತ್ತಿಲ್ಲ. ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇಲ್ಲ.

ರಾಜ್ಯಸಭೆಯಲ್ಲಿ ಬಹುಮತ ಇಲ್ಲದೇ ಇದ್ದರೂ ಹೆದರಿಸಿ, ಬೆದರಿಸಿ ಆಡಳಿತ ನಡೆಸಿದ್ದಾರೆ. ಈ ಹಿಂದೆ ಕ್ರಿಮಿನಲ್ ಪ್ರಕರಣಗಳು ಇದ್ದವರನ್ನು ಹೆದರಿಸಿ ಬಿಜೆಪಿಗೆ ಸೆಳೆದುಕೊಳ್ಳುತ್ತಾರೆ. ಬಿಜೆಪಿಗೆ ಬೆಂಬಲ ನೀಡಿದವರು ಡ್ರೈಕ್ಲೀನಿಂಗ್ ಮಾದರಿಯಲ್ಲಿ ಸ್ವಚ್ಚಗೊಳಿಸುತ್ತಾರೆಯೇ? ಬೆಂಬಲ ನೀಡದವರಿಗೆ ಈವರೆಗೂ ಕಿರುಕುಳ ಮುಂದುವರೆಯುತ್ತಿರುವುದೇಕೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಒಳ್ಳೆಯ ವಾತಾವರಣ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಧರ್ಮ ಧರ್ಮಗಳ ನಡುವೆ ಸಾಮರಸ್ಯ ಕೆಡಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು, ಕೈಗಾರಿಕೆಗಳನ್ನು ಖಾಸಗಿಯವರಿಗೆ ಮಾರಾಟವಾಗುತ್ತಿವೆ. ಖಚಿತ ವಿಶ್ವಾಸದ ಉದ್ಯೋಗ ಅವಕಾಶಗಳು ಕಡಿತಗೊಂಡಿವೆ ಎಂದು ಆರೋಪಿಸಿದರು.

ಇದನ್ನೆಲ್ಲ ಎದುರಿಸಿಯೂ ಕಾಂಗ್ರೆಸ್ ಬಲಿಷ್ಟವಾಗಿರಬೇಕು. ನಾನೊಬ್ಬನೆ ಎಲ್ಲ ಮಾಡುತ್ತೇನೆ ಎಂದು ಹೇಳಿಕೊಳ್ಳುವುದಿಲ್ಲ. ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟವನು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಿದೆ. ಹಣದುಬ್ಬರ, ನಿರುದ್ಯೋಗ, ಬೆಲೆ ಹೆಚ್ಚಳ, ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಅನೇಕ ಸವಾಲುಗಳು ನಮ್ಮ ಮುಂದಿವೆ ಎಂದರು.

ರಾಜಕಾರಣದಲ್ಲಿ ನನಗೆ ಯಾರೂ ವಿರೋಧಿಗಳಿಲ್ಲ. ಎಲ್ಲರೂ ಜೊತೆಯಾಗಿ ನಡೆಯುವ ಸಹೋದ್ಯೋಗಿಗಳು. ನಾನು ಎಐಸಿಸಿ ಅಧ್ಯಕ್ಷನಾಗುತ್ತಿದ್ದಂತೆ ಕರ್ನಾಟಕ ರಾಜಕಾರಣದಲ್ಲಿ ಬದಲಾವಣೆಯಾಗುತ್ತದೆ ಎಂದು ಹೇಳಬಯಸುವುದಿಲ್ಲ. ಸ್ಥಳೀಯವಾಗಿ ಈಗಾಗಲೇ ನಮ್ಮ ನಾಯಕರು ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನಲ್ಲಿ ಬಣ ರಾಜಕೀಯವಿದೆ. ಖರ್ಗೆ ಎಐಸಿಸಿ ಅಧ್ಯಕ್ಷರಾದ ಬಳಿಕ ಮತ್ತೊಂದು ಬಣ ಸಕ್ರಿಯವಾಗಲಿದೆ ಎಂಬ ಊಹೆಗಳು ಮಾಧ್ಯಮಗಳ ಸೃಷ್ಟಿ ಎಂದ ಅವರು, ನಾನು ಪಕ್ಷದ ನಿಷ್ಠಾವಂತ. ತಳಮಟ್ಟದಿಂದ ಹಲವು ಹುದ್ದೆಗಳು, ಜವಾಬ್ದಾರಿಗಳನ್ನು ನಿಭಾಯಿಸಿದವನು. ನನಗೆ ಮೊದಲು ಪಕ್ಷ ಸಂಘಟನೆ ಮುಖ್ಯ. ಅಕಾರ ನಂತರ. 55 ವರ್ಷ ರಾಜಕೀಯ ಜೀವನದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದರು.

ಗಾಂಧಿ ಕುಟುಂಬ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂದು ಅಭಿಪ್ರಾ ಯ ಹೇಳಿದ ಬಳಿಕ ಬಹಳಷ್ಟು ಪ್ರತಿನಿಧಿಗಳು, ಹಿರಿಯ-ಕಿರಿಯ ಕಾರ್ಯಕರ್ತರು ನನ್ನ ಮೇಲೆ ಒತ್ತಡ ಹಾಕಿ ಚುನಾವಣೆಯಲ್ಲಿ ಸ್ರ್ಪಧಿಸುವಂತೆ ಸೂಚಿಸಿದರು. ಆರಂಭದಲ್ಲಿ ಇದು ನನಗೆ ಇಷ್ಟವಿರಲಿಲ್ಲ. ಎಲ್ಲರ ಪ್ರೀತಿಗೆ ಮಣಿದು ಸರ್ಧೆ ಮಾಡಿದ್ದೇನೆ. ತಳಮಟ್ಟದ ಕಾರ್ಯಕರ್ತನಾಗಿ ಸ್ಪರ್ಧೆ ಮಾಡಿದಾಗ ಪ್ರತಿನಿಧಿಗಳ ಬಳಿ ಮತ ಕೇಳುವುದು ನನ್ನ ಕರ್ತವ್ಯ ಎಂದು ಹೇಳಿದರು.

ದೇಶಾದ್ಯಂತ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಆರಂಭದಲ್ಲೇ ರಾಜ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಭಾರತ ಐಕ್ಯತಾ ಯಾತ್ರೆ ನಡೆಯುತ್ತಿರುವುದರಿಂದ ಸಾಧ್ಯವಾಗಿರಲಿಲ್ಲ. ಮೊನ್ನೆ ಬಳ್ಳಾರಿಯಲ್ಲಿ ಸಮಾವೇಶ ನಡೆದಾಗ ಭಾಗವಹಿಸಲು ಆಗಮಿಸಿದ್ದೆ. ಈ ಹಿಂದೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ದೊರೆಯಬೇಕು ಎಂಬ ಸಮಯದಲ್ಲಿ ಸಂವಿಧಾನ ತಿದ್ದುಪಡಿಯಾಗಲು 380 ಸದಸ್ಯರ ಬೆಂಬಲ ಬೇಕಿತ್ತು. ಕಾಂಗ್ರೆಸ್ ಬಳಿ 208 ಸಂಸದರು ಮಾತ್ರ ಇದ್ದರು. ಸೋನಿಯಾ ಗಾಂಧಿ ಬೆಂಬಲಿಸಿ ಸಹಾಯ ಮಾಡಿದರು. ಹೀಗಾಗಿ ವಿಶೇಷ ಸ್ಥಾನಮಾನ ದೊರೆಯಿತು ಎಂದರು.

ಸೋನಿಯಾ ಗಾಂಧಿ 20 ವರ್ಷ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ದೇಶದ ಮೂಲೆ ಮೂಲೆಯೂ ಗೊತ್ತು. ಗಾಂಧಿ ಕುಟುಂಬ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ. ಜೀವ ಕಳೆದುಕೊಂಡಿದೆ. ಅಧಿಕಾರ ಸಿಕ್ಕಾಗ ಬೇರೆಯವರಿಗೆ ಅವಕಾಶ ಮಾಡಿಕೊಟ್ಟಿದೆ. ಜನಪರವಾದ ಹಲವಾರು ಕಾನೂನುಗಳನ್ನು ರೂಪಿಸಿದೆ. ಆ ಕುಟುಂಬದ ಸಲಹೆ ಪಡೆಯುವುದರಲ್ಲಿ ತಪ್ಪೇನು ಇಲ್ಲ ಎಂದರು.

ಚುನಾವಣೆಯಲ್ಲಿ ತಮ್ಮ ಪ್ರತಿಸ್ರ್ಪಧಿ ಶಶಿ ತರೂರ್ ವಿರುದ್ಧವಾಗಿ ತಾವು ಹೇಳಿಕೆ ನೀಡಿ ವಿವಾದ ಸೃಷ್ಟಿಸಲು ಬಯಸುವುದಿಲ್ಲ. ಇದು ನಮ್ಮ ಮನೆಯ ಚುನಾವಣೆ. ಸ್ನೇಹಯುತ ಪೈಪೋಟಿ ನಡೆಯುತ್ತಿದೆ. ನಾನು ನನ್ನ ಕುರಿತು ಮಾತ್ರ ಹೇಳಿಕೊಳ್ಳುತ್ತೇನೆ. ಬೇರೆಯವರನ್ನು ಟೀಕಿಸುವ ಗೋಜಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Articles You Might Like

Share This Article