ವಿಧಾನಪರಿಷತ್ ಸದಸ್ಯೆಯ ಹತ್ಯೆಗೆ ಯತ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್

Social Share

ಹೈದರಾಬಾದ್,ಆ.23- ತೆಲಂಗಾಣದ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ ಸದಸ್ಯೆ ಕವಿತಾ ಅವರ ಹತ್ಯೆ ಯತ್ನ ಆರೋಪದಡಿ ತೆಲಂಗಾಣದ ಬಿಜೆಪಿ ಅಧ್ಯಕ್ಷ ಬಂಡೀರ್ ಸಂಜಯ್‍ಕುಮಾರ್ ಅವರನ್ನು ಜಂಗೋನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ಅವರ ಸರ್ಕಾರ ಅಬಕಾರಿ ನೀತಿಯಲ್ಲಿ ಲೋಪವೆಸಗಿದೆ ಎಂದು ಆರೋಪಿಸಿ ದೆಹಲಿಯಲ್ಲಿ ಇತ್ತೀಚೆಗೆ ಸಿಬಿಐ ದಾಳಿ ನಡೆಸಿತ್ತು. ಉಪಮುಖ್ಯಮಂತ್ರಿ ಮನೀಶ್ ಶಿಸೋಡಿಯ ಅವರ ಮನೆ, ಕಚೇರಿ ಹಾಗೂ ಇತರ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು. ಆ ವೇಳೆ ಅಬಕಾರಿ ನೀತಿಯಲ್ಲಿ ಲಾಭ ಪಡೆಯಲು ತೆಲಂಗಾಣದ ಪ್ರಭಾವಿಗಳು, ಗುತ್ತಿಗೆದಾರರು ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಇದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚ ಮತ್ತು ಮಹಿಳಾ ಮೋರ್ಚ ಕಾರ್ಯಕರ್ತರು ಕವಿತಾ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುವುದನ್ನು ತಡೆಯಲು ಮಧ್ಯಪ್ರವೇಶಿಸಿದ ಪೊಲೀಸರು ಕೆಲವರನ್ನು ವಶಕ್ಕೆ ಪಡೆದರು. ಪರಿಸ್ಥಿತಿ ನಿಯಂತ್ರಿಸುವ ಹಂತದಲ್ಲಿ ಯುವ ಮೋರ್ಚಾದ ಕಾರ್ಯಕರ್ತರನ್ನು ಥಳಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಬಲವಂತವಾಗಿ ಮನೆಗೆ ನುಗ್ಗಿ ಕವಿತಾ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ ಎಂಬ ದೂರು ದಾಖಲಾಗಿದೆ. ಪೊಲೀಸರು ಇದನ್ನು ಆಧರಿಸಿ ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಬಂಧಿಸಿದ್ದಾರೆ. ತೆಲುಗು ರಾಷ್ಟ್ರಂ ಪಕ್ಷದ ವಿಧಾನಪರಿಷತ್ ಸದಸ್ಯರಾಗಿರುವ ಕವಿತಾ ಅವರು ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಅನಗತ್ಯವಾಗಿ ತಮ್ಮ ವಿರುದ್ಧ ಸುಳ್ಳು ಪ್ರಚಾರಗಳು ನಡೆಯುತ್ತಿವೆ ಎಂದು ದೂರಿದ್ದು, ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಸೂಚನೆ ನೀಡಿದ್ದಾರೆ.

Articles You Might Like

Share This Article