18 ದಿನ ದೇವಸ್ಥಾನಗಳಿಗೆ ಭೇಟಿ, ಪೂಜೆ ಪುನಸ್ಕಾರ ಮಾಡಿದ್ದ ದಿವ್ಯಾ ಹಾಗರಗಿ
ಕಲಬುರಗಿ,ಏ.30- ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್ಪಿನ್ ಮಹಾನ್ ದೈವಭಕ್ತೆ ದಿವ್ಯಾ ಹಾಗರಗಿ ತಲೆಮರೆಸಿಕೊಂಡ 18 ದಿನಗಳ ಕಾಲ ದೊಡ್ಡ ದೊಡ್ಡ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಪುನಸ್ಕಾರ ಮಾಡಿಸಿದ್ದಾರೆ ಎನ್ನಲಾಗಿದೆ. ಎರಡೆರಡು ದಿನ ದೇವಸ್ಥಾನದಲ್ಲಿಯೇ ಕಾಲ ಕಳೆದ ಅವರು ಹೇಗಾದರೂ ಈ ಆರೋಪದಿಂದ ನನ್ನನ್ನು ಪಾರು ಮಾಡು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮದಿಂದ ಹುದ್ದೆ ವಂಚಿತರಾದ ವಿದ್ಯಾರ್ಥಿಗಳ ಶಾಪದ ಮುಂದೆ ಇವರ ಪೂಜೆ ಫಲಿಸಿದಂತಿಲ್ಲ. ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಪಿಎಸ್ಐ ಪರೀಕ್ಷೆ ಅಕ್ರಮ ಬೆಳಕಿಗೆ ಬರುತ್ತಿದಂತೆ ಏ.10ರಂದು ಮಧ್ಯಾಹ್ನ ಮನೆಯಿಂದ ಪರಾರಿಯಾದ ದಿವ್ಯ ಅಫ್ಜಲ್ಪುರ ಮಾರ್ಗವಾಗಿ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ತಲುಪಿ ಅಲ್ಲಿಯೇ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಆ ಮೊಬೈಲ್ ಇದುವರೆಗೂ ಆನ್ ಆಗಿಲ್ಲ ಎಂದು ತಿಳಿದುಬಂದಿದೆ.
ಉದ್ಯಮಿ ಸುರೇಶ್ ಕಾಟೆಗಾವ ಅವರ ಸಹಾಯ ಪಡೆದು ತೋಟದ ಮನೆಯಲ್ಲಿ ಎರಡು ದಿನ ತಂಗಿದ್ದರು. ಇಲ್ಲೂ ಸಿದ್ದರಾಮೇಶ್ವರ ದೇವರ ದರ್ಶನ ಪಡೆದು ನಂತರ ಪೂನಾದಲ್ಲಿ 5 ದಿನ ಉಳಿದುಕೊಂಡಿದ್ದರಂತೆ. ಬಳಿಕ ಗುಜರಾತ್ಗೆ ತೆರಳಿ ಮೂರು ದಿನ ಅಲ್ಲಿ ಕಳೆದಿದ್ದಾರೆ. ಗುಜರಾತ್ನಲ್ಲಿದ್ದಾಗ ಅಲ್ಲಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಏ.22ರಂದು ಮರಳಿ ಪೂನಾಕ್ಕೆ ಬಂದು ಬಂಧನವಾಗುವವರೆಗೂ ಪುನಾ ಹೊರವಲಯದ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು.
ಪರಾರಿಯಾಗುವ ಮುನ್ನ 3 ಲಕ್ಷ ರೂ. ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಯಾವುದೇ ಎಟಿಎಂ ಅಥವಾ ಬ್ಯಾಂಕ್ನಿಂದ ಹಣ ಡ್ರಾ ಮಾಡಿರಲಿಲ್ಲ.
ಆದರೆ ಬ್ಯಾಂಕ್ ಖಾತೆಗಳ ಮೇಲೆ ನಿಗಾವಹಿಸಿದ್ದ ಸಿಐಡಿಗೆ ಕೊಂಚ ನಿರಾಸೆಯಾಗಿತ್ತು. ಬಂಧಿತ ಆರೋಪಿ ದಿವ್ಯ ಹಾಗರಗಿ ಕುಟುಂಬದ ಹಿನ್ನಲೆ ಗಮನಿಸಿದರೆ ಸಾಕಷ್ಟು ಶ್ರೀಮಂತರು. ಕೋಟಿ ಕೋಟಿ ಮೌಲ್ಯದ ಆಸ್ತಿ ಇವೆ. ಹಲವು ಶಾಲಾಕಾಲೇಜುಗಳು ಸೇರಿ ಹತ್ತಾರು ವ್ಯವಹಾರಗಳಿವೆ.
ಕಲಬುರಗಿ ಜಿಲ್ಲೆ ಸುತ್ತಮುತ್ತ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ರಾಜಕೀಯವಾಗಿಯೂ ಉತ್ತಮ ಹೆಸರಿದೆ. ಇಷ್ಟೆಲ್ಲ ಇದ್ದರೂ ಹಣದ ದುರಾಸೆಗೆ ಬಿದ್ದ ದಿವ್ಯ ಪರೀಕ್ಷೆಯಲ್ಲಿ ಅಕ್ರಮ ವೆಸಗಿದ್ದಾರೆ ಎನ್ನಲಾಗಿದೆ.
ಸದ್ಯ ಸಿಐಡಿ ವಶದಲ್ಲಿರುವ ದಿವ್ಯ ಹಾಗೂ ಇನ್ನಿತರ ಆರು ಜನರ ವಿಚಾರಣೆ ತೀವ್ರಗೊಂಡಿದೆ. ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಮತ್ತೆ ಯಾರ ಕೈವಾಡವಿದೆ, ಅಕ್ರಮದ ಉರುಳು ಮತ್ತೆ ಯಾರ್ಯಾರ ಕೊರಳಿಗೆ ಸುತ್ತಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು. ದಿವ್ಯ ಹಾಗರಗಿಯನ್ನು ಗುರುವಾರ ಮಹಾರಾಷ್ಟ್ರದ ಪುಣೆಯಲ್ಲಿ ಬಂಸಿ ಶುಕ್ರವಾರ ಕಲಬುರಗಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ನ್ಯಾಯಾಲಯ 11 ದಿನ ಸಿಐಡಿ ವಶಕ್ಕೆ ನೀಡಿದೆ.
ವಶಕ್ಕೆ ಪಡೆದ ಸಿಐಡಿ ತನಿಖಾ ತಂಡ ನಿನ್ನೆ ರಾತ್ರಿ ಅಳಂದ ರಸ್ತೆಯಲ್ಲಿರುವ ಮಹಿಳಾ ಸಾಂತ್ವಾನ ಕೇಂದ್ರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಿದ್ದರು.
ಐಷಾರಾಮಿ ಜೀವನ ನಡೆಸುತ್ತಿದ್ದ ದಿವ್ಯ ಅವರು ನಿನ್ನೆ ಎಸಿ ಇಲ್ಲದೆ ಫ್ಯಾನ್ ಗಾಳಿಗೆ ನಿದ್ದೆ ಬರದೆ ಜಾಗರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.