ಬೆಂಗಳೂರು, ಜು.27- ಹಿಜಾಬ್ ಹಿಂದಿರುವ ಶಕ್ತಿಗಳೇ ಸೂಳ್ಯ ತಾಲೂಕಿನಲ್ಲಿ ಬಿಜೆಪಿ ಮುಖಂಡಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಹಿಂದೆ ಇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳ ಮತ್ತು ರಾಜ್ಯದ ಗಡಿ ಭಾಗಗಳಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಈ ಬಗ್ಗೆ ಕೇರಳ ಸರ್ಕಾರದ ಜತೆ ಸಿಎಂ ಮಾತಾಡಿದ್ದಾರೆ ಎಂದರು.
ಪೊಲೀಸರು, ಕೊಲೆಗಡುಕರ ಬೆನ್ನಟ್ಟಿದ್ದಾರೆ. ಕೇರಳ ಸರ್ಕಾರದ ಜತೆಗೂ ನಮ್ಮ ಪೊಲೀಸರು ಮಾತುಕತೆ ನಡೆಸಿದ್ದಾರೆ. ಅಲ್ಲೂ ಕೂಡ ಕೊಲೆಗಡುಕರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ ಎಂದರು. ಸೈದ್ಧಾಂತಿಕವಾಗಿ ವಿಚಾರ ಮಂಡಿಸಲಿ. ಆದರೆ, ಹತ್ಯೆ ಮಾಡುವುದು, ರಕ್ತ ಹರಿಸುವುದು ಸರಿಯಲ್ಲ. ಯುವಕನ ಹತ್ಯೆ ದುರದೃಷ್ಟಕರ ಸಂಗತಿ. ಅಮಾಯಕ ಯುವಕ ತನ್ನ ಅಂಗಡಿ ಮುಚ್ಚಿ ಮನೆಗೆ ಹೋಗುವ ವೇಳೆ ಘಟನೆ ನಡೆದಿದೆ ಎಂದು ಹೇಳಿದರು.
ನಿನ್ನೆ ರಾತ್ರಿಯೇ ಪೊಲೀಸರಿಗೆ ಸೂಚನೆ ನೀಡಿ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗಿದೆ. ಎಡಿಜಿಪಿ ಮಂಗಳೂರಿಗೆ ಹೋಗಿದ್ದಾರೆ. ಯುವಕನ ಕೊಲೆಯಾಗಿರುವುದರಿಂದ ಸಹಜವಾಗಿ ಜನರಲ್ಲಿ ಆತಂಕವಿದೆ. ಬೈಕ್‍ನಲ್ಲಿ ಬಂದು ಕೊಲೆ ಮಾಡಿದ್ದಾರೆಂಬ ಮಾಹಿತಿ ಇದೆ. ಇಂತಹ ಶಕ್ತಿಗಳನ್ನು ಮಟ್ಟ ಹಾಕುತ್ತೇವೆ. ಅನೇಕ ಆಯಾಮಗಳಲ್ಲಿ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ ಎಂದರು.
ಕಳೆದ ವಾರ ನಡೆದ ಕೊಲೆ ಪ್ರಕರಣದ ಆರೋಪಿಗಳು ಸಿಕ್ಕಿದ್ದಾರೆ. ಆ ಕಾರಣಕ್ಕಾಗಿಯೇ ಈ ಹತ್ಯೆ ನಡೆದಿದೆಯೇ ಎಂಬ ಆಯಾಮದಲ್ಲೂ ತನಿಖೆ ಕೈಗೊಳ್ಳಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಪೊಲೀಸರು ಬಂಧಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರ, ಪಕ್ಷದ ವಿರುದ್ಧ ಆಕ್ರೋಶ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಮತಾಂಧ ಶಕ್ತಿಗಳು ಒಂದು ರಾಜ್ಯದಲ್ಲಿ ಮಾತ್ರ ಕಾರ್ಯಾಚರಣೆ ಮಾಡುತ್ತಿಲ್ಲ. ಅವರ ಕಾರ್ಯಾಚರಣೆ ಎರಡು ರಾಜ್ಯಗಳಲ್ಲಿ ನಡೆಯುತಿದೆ. ಗಡಿ ಭಾಗದಲ್ಲಿ ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ.
ಕರಾವಳಿಯಲ್ಲಿ ಬಹಳ ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ. ಶಾಂತಿ-ಸುವ್ಯವಸ್ಥೆ ಕೈಗೊಳ್ಳಲು ಕ್ರಮ ತೆಗೆದುಕೊಂಡಿದ್ದೇವೆ. ಅಲ್ಲಿ ಜನರನ್ನು ಕನ್ವಿನ್ಸ್ ಮಾಡುವ ಪ್ರಯತ್ನ ಮಾಡುತ್ತೇವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಏನೇ ಭಿನ್ನಾಭಿಪ್ರಾಯ ಇರಬಹುದು. ಆದರೆ, ಕೊಲೆಯಂತಹ ಕೃತ್ಯಗಳು ನಡೆಯಬಾರದು. ಸಾಕಷ್ಟು ದೊಡ್ದ ಪ್ರಮಾಣದಲ್ಲಿ ಪೋಲೀಸರಿದ್ದು, ಕಾನೂನು, ಸುವ್ಯವಸ್ಥೆ ಕಾಪಾಡಿಕೊಳ್ಳಲು ಕ್ರಮ ತೆಗೆದುಕೊಳ್ಳುತ್ತಾರೆ. ಶಾಂತಿ-ಸುವ್ಯವಸ್ಥೆ ಕಾಪಾಡಿಕೊಳ್ಳಲು ಮನವಿ ಮಾಡುತ್ತೇನೆ. ಘಟನೆಯ ಬಗ್ಗೆ ಪೋಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಜತೆ ಮಾತನಾಡಿದ್ದೇನೆ. ಆ ಭಾಗದ ಜನ ಉದ್ವೇಗಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ಭ್ರಷ್ಟ ಉತ್ಸವ ಎಂದು ಟೀಕಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಯಾರು ನಮ್ಮನ್ನು ಭ್ರಷ್ಟರು ಎಂದು ಟೀಕಿಸುತ್ತಿದ್ದಾರೋ ಅವರು ಏನಾಗಿದ್ದಾರೆ ಎಂದು ಪ್ರಶ್ನಿಸಿದರು.
ಅವರ ಪಕ್ಷದವರೇ ಆದ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರೇ ಬಹಿರಂಗವಾಗಿ ಹೇಳಿಕೊಂಡಿಲ್ಲವೆ? ಶಿವಕುಮಾರ್ ಮೇಲೆ ಇಡಿಯಿಂದ ತನಿಖೆಯಾಗುತ್ತಿಲ್ಲವೆ? ಅವರೇ ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು.