ಸರಣಿ ಹತ್ಯೆಗಳ ಬೆನ್ನಲ್ಲೇ ರಾಜ್ಯಕ್ಕೆ ಗೃಹ ಸಚಿವ ಅಮಿತ್ ಷಾ ಭೇಟಿ

Social Share

ಬೆಂಗಳೂರು, ಆ.2-ಸ್ವಪಕ್ಷೀಯರ ವಿರುದ್ಧವೇ ಕಾರ್ಯಕರ್ತರು ತಿರುಗಿಬಿದ್ದಿರುವುದರಿಂದ ಡ್ಯಾಮೇಜ್ ಕಂಟ್ರೋಲ್‍ಗೆ ಖುದ್ದು ಕೇಂದ್ರ ಗೃಹ ಸಚಿವ ಅಮಿತ್ ಅವರೇ ಅಖಾಡಕ್ಕಿಳಿದಿದ್ದಾರೆ. ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿರುವ ಅವರು, ಗುರುವಾರ ರಾಜ್ಯಕ್ಕೆ ಆಗಮಿಸುತ್ತಿದ್ದು, ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ಹೇಳುವ ಸಂಭವವಿದೆ.

ಸಾಮಾನ್ಯವಾಗಿ ಅಮಿತ್ ಷಾ ಅವರು ರಾಜ್ಯಕ್ಕೆ ಬರುವ ಮೂರು ದಿನಗಳ ಮುಂಚೆಯೇ ಅವರ ಪ್ರವಾಸದ ಕಾರ್ಯಕ್ರಮವನ್ನು ಬಿಡುಗಡೆ ಮಾಡಲಾಗುತಿತ್ತು. ಆದರೆ ಈ ಬಾರಿ ಪಕ್ಷದ ವತಿಯಿಂದ ಸಣ್ಣ ಸುಳಿವನ್ನೂ ಸಹ ಬಿಟ್ಟುಕೊಟ್ಟಿಲ್ಲ. ಅಷ್ಟರ ಮಟ್ಟಿಗೆ ಗೌಪ್ಯತೆ ಕಾಪಾಡಿಕೊಳ್ಳಲಾಗಿದೆ.

ಇದೇ ಮೊದಲ ಬಾರಿ ಬಿಜೆಪಿ ಕಾರ್ಯಕರ್ತರು ತನ್ನದೇ ಸರ್ಕಾರದ ವಿರುದ್ಧ ಬೀದಿಗಿಳಿದಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳ, ಗೃಹ ಸಚಿವರ ಮುತ್ತಿಗೆಯಂತಹ ಚಟುವಟಿಕೆ ನಡೆಸಿದ್ದಾರೆ. ರಾಜ್ಯಾದ್ಯಂತ ಆಡಳಿತ ಪಕ್ಷದ ಆಡಳಿತದ ವಿರುದ್ಧ ಅವರ ಕಾರ್ಯಕರ್ತರೇ ದೊಡ್ಡ ಮಟ್ಟದಲ್ಲಿ ಆಕ್ರೋಶಗೊಂಡಿದ್ದಾರೆ.

ಸರ್ಕಾರ ನೀಡುತ್ತಿರುವ ಉತ್ತರದಿಂದ ಅವರೆಲ್ಲಾ ಸಮಾಧಾನಿತರಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಸ್ಟ್ 4ರಂದು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ರಾಜ್ಯ ಘಟಕದ ಬಳಿ ಯಾವುದೇ ಮಾಹಿತಿ ಇಲ್ಲ. ಕೇಂದ್ರ ಗೃಹ ಸಚಿವರ ಯಾವುದೇ ಕಾರ್ಯಕ್ರಮ ಸದ್ಯಕ್ಕೆ ಇಲ್ಲ. ಅವರು ಆಗಮಿಸುವ ಮಾಹಿತಿಯೂ ಇಲ್ಲ ಎಂದು ರಾಜ್ಯ ಪದಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಆದರೆ ಕೇಂದ್ರ ಗೃಹ ಸಚಿವರ ಭೇಟಿಗೂ ಮುನ್ನ ಪ್ರೋಟೋಕಾಲ್ ಪ್ರಕಾರ ಕೆಲವೊಂದು ಪರಿಶೀಲನೆ ಕೇಂದ್ರದಿಂದ ನಡೆಸಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಮಿತ್ ಶಾ ಆಗಮನದ ಬಗ್ಗೆ ಸುಳಿವು ಸಿಕ್ಕಿರುತ್ತದೆ ಎನ್ನಲಾಗಿದೆ.
ಸದ್ಯ ಅಮಿತ್ ಶಾ ಪ್ರವಾಸ ಪಟ್ಟಿ ಇನ್ನು ಅಂತಿಮಗೊಂಡಿಲ್ಲ. ಇನ್ನೊಂದು ದಿನದಲ್ಲಿ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸಾಧಾರಣವಾಗಿ ಅಮಿತ್ ಶಾ ರಾಜ್ಯಕ್ಕೆ ಬರುವ ಕಾರ್ಯಕ್ರಮ ಮುಂಚಿತವಾಗಿಯೇ ನಿಗದಿಯಾಗಿರುತ್ತದೆ. ಆದರೆ ಈ ಬಾರಿ ರಾಜ್ಯ ನಾಯಕರಿಗೆ ಮಾಹಿತಿ ನೀಡದೇ ಹೈಕಮಾಂಡ್ ದಿಢೀರ್ ಆಗಿ ನಿಗದಿ ಪಡಿಸಿದೆ. ಒಂದು ಪಕ್ಷದ ಕಾರ್ಯಕ್ರಮ, ಇನ್ನೊಂದು ಸರ್ಕಾರಿ ಕಾರ್ಯಕ್ರಮವನ್ನು ನಿಗದಿ ಮಾಡಿಕೊಂಡು ರಾಜ್ಯಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

Articles You Might Like

Share This Article