ಪಕ್ಷಕ್ಕೆ ಮುಜುಗರ ತರುವ ಹೇಳಿಕೆ ನೀಡಿದರೆ ಶಿಸ್ತುಕ್ರಮ : ಬಿಜೆಪಿ ಎಚ್ಚರಿಕೆ

ಬೆಂಗಳೂರು,ಫೆ.26- ಪಕ್ಷಕ್ಕೆ ಮುಜುಗರ ತರುವ ಹೇಳಿಕೆಗಳನ್ನು ನೀಡಿದರೆ ಅಂಥವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ನಾಯಕರು ಎಚ್ಚರಿಸಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅವರ ವಿರುದ್ದ ಕೇಂದ್ರದ ಮಾಜಿ ಸಚಿವ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ ಹೇಳಿಕೆ ನೀಡಿರುವುದು ಸಾಕಷ್ಟು ವಿವಾದ ಪಡೆದುಕೊಂಡಿದೆ.

ಅವರ ಹೇಳಿಕೆ ವಿರುದ್ಧ ಈಗಾಗಲೇ ಪ್ರತಿಪಕ್ಷಗಳು ಹಾಗೂ ಪ್ರಗತಿಪರರು ತೀವ್ರವಾಗಿ ಖಂಡಿಸಿದ್ದಲ್ಲದೆ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ. ಯಾರೂ ಕೂಡ ತಮ್ಮ ನಾಲಿಗೆಯನ್ನು ಹರಿಬಿಡದೆ ನಿಯಂತ್ರಣದಲ್ಲಿಟ್ಟುಕೊಳ್ಳಿ ಎಂದು ಬಿಜೆಪಿ ಸೂಚ್ಯವಾಗಿ ಎಚ್ಚರಿಕೆ ಸಂದೇಶ ರವಾನಿಸಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಮಾಡುವವರ ವಿರುದ್ಧ ನೀವು ಕೂಡ ಕಾನೂನಿನ ಚೌಕಟ್ಟಿನಡಿಯಲ್ಲೇ ಪ್ರತಿಕ್ರಿಯಿಬೇಕು. ಅದು ಬಿಟ್ಟು ಮುಜುಗರ ತರುವಂತಹ ಹೇಳಿಕೆಗಳನ್ನು ನೀಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರಬಾರದೆಂದು ಸೂಚಿಸಿದೆ.

ದೊರಸ್ವಾಮಿ ಏನೇ ಟೀಕೆ ಮಾಡಿದರೂ ಪ್ರತಿಕ್ರಿಯಿಸದೆ ದೂರ ಉಳಿಯಬೇಕು. ಹಿರಿಯರು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಅವರು ರಾಜ್ಯದಲ್ಲಿ ಕರ್ನಾಟಕದ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಪರ, ವಿರೋಧ ನಿಲುವುಗಳು ಏನೇ ಇದ್ದರೂ ಪಕ್ಷಕ್ಕೆ ಮುಳುವಾಗುವಂತಹ ಹೇಳಿಕೆಗಳನ್ನು ಕೊಡಬಾರದೆಂದು ಎಚ್ಚರಿಸಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸಚಿವರಾದ ಸಿ.ಟಿ.ರವಿ, ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಎಸ್.ಟಿ.ಸೋಮಶೇಖರ ರೆಡ್ಡಿ ಸೇರಿದಂತೆ ಅನೇಕರು ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ಪಕ್ಷಕ್ಕೆ ಮುಜುಗರ ತಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ವರಿಷ್ಠರು, ಮುಂದೆ ಇಂತಹ ಅಚಾತುರ್ಯ ನಡೆಯದಂತೆ ಬಾಯಿಗೆ ಬೀಗ ಹಾಕಬೇಕೆಂದು ಸೂಚನೆ ಕೊಟ್ಟಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.