ಹಲವು ಸಂಶಯಗಳಿಗೆ ಎಡೆ ಮಾಡಿದ ಬಿಜೆಪಿ ಪ್ರಭಾವಿ ನಾಯಕರೊಬ್ಬರ ನಡೆ..!

Spread the love

ಬೆಂಗಳೂರು,ಜ.13-ರಾಷ್ಟ್ರಮಟ್ಟದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿರುವ ಕರ್ನಾಟಕ ಮೂಲದ ಬಿಜೆಪಿ ನಾಯಕರೊಬ್ಬರು ಕಾಣಿಸಿಕೊಳ್ಳದೆ ಇರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.  ಸರ್ಕಾರ ರಚನೆ,  ವಿಧಾನಪರಿಷತ್‍ಗೆ ಆಯ್ಕೆ, ನಾಮಕರಣ, ಟಿಕೆಟ್ ಹಂಚಿಕೆ, ರಾಜ್ಯಸಭೆಗೆ ಆಯ್ಕೆ, ನಿಗಮ ಮಂಡಳಿಗೆ ನೇಮಕಾತಿ, ಪದಾದಿಕಾರಿಗಳ ನೇಮಕಾತಿ ಸೇರಿದಂತೆ ಪ್ರತಿಯೊಂದರಲ್ಲೂ ತೆರೆಮರೆಯಲ್ಲೇ ಕುಳಿತು ಕೈಚಳಕ ತೋರಿಸುತ್ತಿದ್ದ ಈ ನಾಯಕರು ಏಕಾಏಕಿ ಅದೃಶ್ಯವಾಗಿರುವುದು ನಾನಾ ಅನುಮಾನಗಳನ್ನು ಹುಟ್ಟುಹಾಕಿದೆ.

ಕರ್ನಾಟಕದಲ್ಲಿ ಪಕ್ಷ ಮತ್ತು ಸರ್ಕಾರದ ಪ್ರಮುಖ ತೀರ್ಮಾನಗಳಲ್ಲೂ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ತಮ್ಮ ಪ್ರಭಾವ ಬಳಸುತ್ತಿದ್ದ ಇವರು ದಿಢೀರನೇ ಯಾರಿಗೂ ಕಾಣಿಸಿಕೊಳ್ಳದಿರುವುದಕ್ಕೆ ವರಿಷ್ಠರ ಸೂಚನೆಯೇ ಕಾರಣ ಎನ್ನಲಾಗುತ್ತಿದೆ.  ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಅಷ್ಟಕ್ಕಷ್ಟೆ ಸಂಬಂಧ ಇಟ್ಟುಕೊಂಡಿದ್ದ ಇವರನ್ನು ಕರ್ನಾಟಕದಲ್ಲಿನ ಬೆಳವಣಿಗೆಗಳ ಬಗ್ಗೆ ಹಸ್ತಕ್ಷೇಪ ಮಾಡದಂತೆ ವರಿಷ್ಠರ ಬಳಿ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಅದರಲ್ಲೂ ರಾಜ್ಯಕ್ಕೆ ಅರುಣ್ ಸಿಂಗ್ ಅವರು ನೂತನ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಬಹುತೇಕ ಎಲ್ಲ ಹಿಡಿತಗಳು ಹಂತ ಹಂತವಾಗಿ ತಪ್ಪಿದೆ ಎಂದು ಕೇಳಿಬರುತ್ತಿದೆ.ಅರುಣ್ ಸಿಂಗ್ ಅವರೇ ಸರ್ಕಾರ ಮತ್ತು ಪಕ್ಷದ ನಡುವೆ ಸಮನ್ವಯಕಾರರಾಗಿ ಕೆಲಸ ಮಾಡುತ್ತಾರೆ. ರಾಜ್ಯದ ಯಾವುದೇ ಬೆಳವಣಿಗೆಗಳ ಕುರಿತಂತೆ ನೀವು ಮಧ್ಯಪ್ರವೇಶ ಮಾಡಬಾರದೆಂದು ವರಿಷ್ಠರು ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ತೆರೆಮರೆಗೆ ಸರಿದಿದ್ದಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ಹಬ್ಬಿದೆ.

2023ರ ಚುನಾವಣೆಯಲ್ಲೂ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು. ಅಲ್ಲದೆ 24ರ ಚುನಾವಣೆಯನ್ನು ನಾವು ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕು. ಹೀಗಾಗಿ ಸದ್ಯಕ್ಕೆ ಹಸ್ತಕ್ಷೇಪ ಮಾಡದಂತೆ ಅವರಿಗೆ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.  ದೆಹಲಿಯಲ್ಲೇ ಕುಳಿತು ಎಲ್ಲ ಆಟ ಆಡುತ್ತಿದ್ದ ಇವರನ್ನು ನಿಯಂತ್ರಿಸಿದರೆ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನನ್ನದು ಎಂದು ಬಿಎಸ್‍ವೈ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಎಲ್ಲವನ್ನು ಅಳೆದುತೂಗಿ ದೆಹಲಿ ನಾಯಕರು ಈ ಪ್ರಭಾವಿ ನಾಯಕನ ಮಧ್ಯಪ್ರವೇಶಕ್ಕೆ ಕಡಿವಾಣ ಹಾಕಿದ್ದಾರೆ.

Facebook Comments