ಬಿಜೆಪಿಗೆ ಸವಾಲಾದ ಸ್ವಪಕ್ಷೀಯರ ಅಸಮಾಧಾನ

Social Share

ಬೆಳಗಾವಿ,ಡಿ.20-ಚಳಿಗಾಲದ ಅಧಿವೇಶನದಲ್ಲಿ ಪ್ರತಿಪಕ್ಷಗಳ ಟೀಕೆ ಎದುರಿಸಲು ಸಜ್ಜಾಗಿದ್ದ ಬಿಜೆಪಿಗೆ ಈಗ ಸ್ವಪಕ್ಷೀಯರ ಅಸಮಾಧಾನವನ್ನು ಶಮನಗೊಳಿಸುವುದೇ ಹೊಸ ಸವಾಲಾಗಿ ಪರಿಣಮಿಸಿದೆ.

ಈಶ್ವರಪ್ಪ ಗೈರು ವಿಚಾರ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಸದನದಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳಲು ಇಷ್ಟು ವಿಷಯ ಸಾಕು ಎನ್ನುವುದು ಬಿಜೆಪಿ ಆತಂಕಕ್ಕೆ ಕಾರಣವಾಗಿದೆ. ಹಲವಾರು ವಿಷಯಗಳಲ್ಲಿ ಸರ್ಕಾರದ ಸಮರ್ಥನೆಗೆ ನಿಲ್ಲುವ ಬಿಜೆಪಿ ಸದಸ್ಯರಿಗೆ ಪ್ರತಿಪಕ್ಷಗಳು ಟಾಂಗ್ ನೀಡಲು ಈಶ್ವರಪ್ಪ ಗೈರು ಅಸ್ತ್ರ ಬಳಕೆ ಮಾಡಿಕೊಳ್ಳಲಿವೆ. ಇದನ್ನು ಅರಿತೇ ಈಶ್ವರಪ್ಪ ಕಲಾಪಕ್ಕೆ ಗೈರಾಗುವ ನಿರ್ಧಾರ ಪ್ರಕಟಿಸಿದ್ದಾರೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮೌನ ಮುರಿದಿದ್ದು, ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆ ಖಂಡಿಸಿ ಅಧಿವೇಶನಕ್ಕೆ ಗೈರಾಗಿದ್ದಾರೆ. ಸದನದಲ್ಲಿ ಸರ್ಕಾರದ ಸಮರ್ಥನೆಗೆ ನಿಲ್ಲಬೇಕಿದ್ದ ಹಿರಿಯ ಶಾಸಕರೇ ಹೀಗೆ ತಮ್ಮ ಅಸಮಾಧಾನ ಬಹಿರಂಗವಾಗಿ ತೋಡಿಕೊಂಡು ಕಲಾಪದಿಂದ ದೂರ ಉಳಿಯುತ್ತಿರುವುದು ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಸಿಗುವಂತೆ ಮಾಡಿದೆ.

ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ನನ್ನ ಮೇಲಿನ ಆರೋಪ ನಿರಾಧಾರ ವಾದದ್ದು, ಇದಕ್ಕೆ ಕ್ಲೀನ್‍ಚಿಟ್ ಸಿಕ್ಕಿರುವುದೇ ನಿದರ್ಶನ. ಹಾಗಿದ್ದರೂ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದಿದ್ದರೆ ಆರೋಪ ಹಾಗೆಯೇ ಉಳಿದುಬಿಡುತ್ತದೆ. ಜನರಲ್ಲಿ ಸಂಶಯ ಉಳಿದುಕೊಳ್ಳಲಿದೆ ಎನ್ನುವುದು ಈಶ್ವರಪ್ಪನವರ ವಾದ.

ಆರೋಪ ಬಂದ ಕೂಡಲೇ ರಾಜೀನಾಮೆ ನೀಡಿದ್ದೆ. ಅದರಂತೆ ಆರೋಪ ಮುಕ್ತನಾದ ಕೂಡಲೇ ಸಂಪುಟಕ್ಕೆ ತೆಗೆದುಕೊಳ್ಳಬೇಕಿತ್ತು ಎಂದು ನೇರವಾಗಿ ಬೊಮ್ಮಾಯಿ ಮತ್ತು ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕುರುಬ ಸಮಾಜದ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ಪುನಃ ಸಚಿವ ಸ್ಥಾನ ನೀಡಬೇಕು. ವಿಧಾನಪರಿಷತ್ತಿನ ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರ ಸದಸ್ಯತ್ವ ಅವ ಮುಗಿಯುವವರೆಗೂ ಪರಿಷತ್ತಿನ ಸಭಾಪತಿಯಾಗಿ ಮುಂದುವರೆಸಬೇಕು ಎಂದು ಹಿಂದುಳಿದ ದಲಿತ ಸಮುದಾಯಗಳ (ಹಿಂದ) ಒಕ್ಕೂಟ ಅಧ್ಯಕ್ಷ ಕೆ.ಮುಕುಡಪ್ಪ ಆಗ್ರಹಿಸಿದ್ದರು.

ಇದಕ್ಕೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಸಮುದಾಯದ ನಾಯಕರನ್ನು ಮುಂದೆ ಬಿಟ್ಟು ಸಚಿವ ಸ್ಥಾನದ ಬೇಡಿಕೆಯನ್ನು ಬಿಜೆಪಿ ಮುಂದಿರಿಸಿದ್ದರು. ಆದರೆ ಆ ಬೇಡಿಕೆಗೆ ಬಿಜೆಪಿ ಹೈಕಮಾಂಡ್ ಸೊಪ್ಪು ಹಾಕಿಲ್ಲ. ಸಂಪುಟ ವಿಸ್ತರಣೆ, ಪುನಾರಚನೆಯಂತಹ ಪ್ರಯತ್ನಕ್ಕೆ ಹೋಗಿಲ್ಲ. ಇದರಿಂದ ಈಶ್ವರಪ್ಪ ಅಸಮಧಾನಗೊಂಡಿದ್ದು, ನೇರವಾಗಿಯೇ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

ಯಡಿಯೂರಪ್ಪ ಅವರನ್ನೇ ಬಿಡದ ಹೈಕಮಾಂಡ್ ನಾಯಕರು 75 ವರ್ಷದ ನಿಯಮದ ವಿಚಾರದಲ್ಲಿ ತಮ್ಮನ್ನು ಬಿಡುವುದಿಲ್ಲ ಎನ್ನುವುದು ಪಕ್ಕಾ ಆಗಿರುವುದರಿಂದ ಶತಾಯ ಗತಾಯ ಸಂಪುಟಕ್ಕೆ ಸೇರಲು ಇದೀಗ ಅವೇಶನ ಗೈರು ಎನ್ನುವ ಟ್ರಂಪ್ ಕಾರ್ಡ್ ಪ್ರಯೋಗಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಈಶ್ವರಪ್ಪ ನಡೆ ಬಗ್ಗೆ ರಾಜ್ಯದ ನಾಯಕರು ಈಗಾಗಲೇ ಹೈಕಮಾಂಡ್ ಗಮನಕ್ಕೆ ತಂದಿದ್ದು, ಮನವೊಲಿಕೆ ಕಾರ್ಯ ಮಾಡುವಂತೆ ಮನವಿ ಮಾಡಿದ್ದಾರೆ. ಕಲಾಪದಲ್ಲಿ ಪ್ರತಿಪಕ್ಷಗಳಿಗೆ ಆಹಾರವಾಗುವಂತಾಗಬಾರದು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಮೂಲಕ ವಿಷಯವನ್ನು ಹೈಕಮಾಂಡ್‍ಗೆ ತಲುಪಿಸಿದ್ದು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮೂಲಕ ಈಶ್ವರಪ್ಪಗೆ ಹೈಕಮಾಂಡ್‍ನಿಂದ ಸಂದೇಶ ಬರಬಹುದು ಎನ್ನಲಾಗುತ್ತಿದೆ.

ಸಚಿವ ಸ್ಥಾನಕ್ಕಾಗಿ ಈಶ್ವರಪ್ಪ ಬಳಸಿರುವ ಅವೇಶನಕ್ಕೆ ಗೈರು ಎನ್ನುವ ಟ್ರಂಪ್ ಕಾರ್ಡ್ ಪ್ರಯೋಗಕ್ಕೆ ಹೈಕಮಾಂಡ್ ಮಣಿಯುತ್ತಾ? ಈಶ್ವರಪ್ಪಗೆ ಯಾವ ಸಂದೇಶ ಸಿಗಲಿದೆ. ಬೊಮ್ಮಾಯಿ ಸಂಪುಟ ಕಲಾಪದಲ್ಲಿ ಈಶ್ವರಪ್ಪ ಗೈರನ್ನು ಯಾವ ರೀತಿ ಸಮರ್ಥಿಸಿಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

Articles You Might Like

Share This Article