ಬಿಎಸ್‍ವೈಗೆ ಸಿಗದ ಆದ್ಯತೆ, ಬಿಜೆಪಿಯಲ್ಲಿ ಆಂತರಿಕ ಕಲಹ

Social Share

ಬೆಂಗಳೂರು, ಜ.21- ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ವಂತಬಲದ ಮೇಲೆ ಅಧಿಕಾರ ಹಿಡಿಯಲು ಬಿಜೆಪಿ ಇನ್ನಿಲ್ಲದ ಕಸರತ್ತು ಆರಂಭಿಸಿದ್ದರೂ ಇತ್ತೀಚಿಗೆ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ಕಲಹ ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ನಿನ್ನೆ ನಡೆದ ಪಕ್ಷದ ಪ್ರಮುಖರ ಸಭೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸಭೆ ನಡೆಸಿರುವುದು ಒಂದು ಬಣದಲ್ಲಿ ಅಸಮಾಧಾನ ಸೃಷ್ಟಿಸಿದ್ದು, ಯಡಿಯೂರಪ್ಪ ಅವರಿಗೆ ಆಹ್ವಾನ ನೀಡದಿರುವುದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.

ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಇದು ಪಕ್ಷದ ಪ್ರಾಥಮಿಕ ಸಭೆ. ಹಾಗಾಗಿ ಅವರಿಗೆ ಆಹ್ವಾನ ನೀಡಿರಲಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದರೂ ಬಿಜೆಪಿಯೊಳಗಿನ ಈ ಬೆಳವಣಿಗೆ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಪುಷ್ಟಿ ನೀಡುವಂತಿದೆ.

ಬಿಜೆಪಿ ಕಚೇರಿಯಲ್ಲಿ ಚುನಾವಣಾ ಸಿದ್ಧತೆ ಹಾಗೂ ಕಾರ್ಯತಂತ್ರ ವಿಚಾರವಾಗಿ ನಡೆದ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ( ಸಂಘಟನೆ) ಬಿ.ಎಲï.ಸಂತೋಷ್ ಭಾಗಿಯಾಗಿದ್ದರು. ಆದರೆ, ಬಿಎಸ್‍ವೈಗೆ ಮಾತ್ರ ಆಹ್ವಾನ ಇರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಬಿಜೆಪಿಯ ಪ್ರಮುಖ ಮುಂಚೂಣಿ ನಾಯಕರು ಉಪಸ್ಥಿತರಿದ್ದರು.

ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ., ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಸೇರಿ ಹಲವರು ಭಾಗಿಯಾಗಿದ್ದರು.

ಎರಡು ದಿನಗಳ ಹಿಂದೆಯೇ ಈ ಸಭೆ ನಿಗದಿಯಾಗಿದೆ. ಮುಖ್ಯಮಂತ್ರಿಗಳ ಅಕೃತ ಕಾರ್ಯಕ್ರಮಗಳ ಪಟ್ಟಿಗೂ ಬಿಜೆಪಿ ಸಭೆ ಸೇರಿಸಲಾಗಿತ್ತು. ಎರಡು ದಿನಗಳ ಕೆಳಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾಗ ಎಲ್ಲ ನಾಯಕರೂ ಒಟ್ಟಿಗೆ ಇದ್ದರು. ಆಗಲೇ ಈ ಸಭೆ ನಿರ್ಧಾರವಾಗಿತ್ತಾದರೂ ಯಡಿಯೂರಪ್ಪ ಅವರಿಗೆ ಯಾಕೆ ಆಹ್ವಾನ ನೀಡಲಿಲ್ಲ ಎನ್ನುವುದು ಪಕ್ಷದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದೊಂದೇ ಮಾತ್ರವಲ್ಲ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ರಾಜ್ಯ ಪ್ರವಾಸ ಹಾಗೂ 10 ಜಿಲ್ಲೆಗಳಲ್ಲಿ ಬಿಜೆಪಿ ಕಚೇರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೂ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಡೆಯ ಕ್ಷಣದಲ್ಲಿ ಆಹ್ವಾನ ನೀಡಲಾಗಿತ್ತು. ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ್ ಕಡೆಯ ಕ್ಷಣದಲ್ಲಿ ಬಿಎಸ್‍ವೈಗೆ ಬಂದು ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದರು. ಪಕ್ಷದ ಈ ನಡೆ ಬಿಎಸ್‍ವೈ ಅಸಮಾಧಾನಕ್ಕೂ ಕಾರಣವಾಗಿತ್ತು.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಯಡಿಯೂರಪ್ಪ ಬಳಿಕ ಅಷ್ಟೊಂದು ಸಕ್ರಿಯರಾಗಿರಲಿಲ್ಲ.ಅವರನ್ನು ಪಕ್ಷದಲ್ಲಿ ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪ ತೀವ್ರಗೊಂಡ ಸಂದರ್ಭದಲ್ಲಿ ಅವರಿಗೆ ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು. ಆದರೆ, ರಾಜ್ಯಮಟ್ಟದ ಸಭೆಗಳಲ್ಲಿ ಹಾಗೂ ಪಕ್ಷದ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ಅವರನ್ನು ಪರಿಗಣಿಸದಿರುವುದು ಸಹಜವಾಗಿ ಹಲವು ಆಯಾಮದ ಚರ್ಚೆ ಹುಟ್ಟುಹಾಕುತ್ತಿದೆ.

ಯಡಿಯೂರಪ್ಪ ಅವರಿಗೆ ಸಭೆಗೆ ಆಹ್ವಾನ ಇರಲಿಲ್ಲ ಎನ್ನುವ ಮಾಹಿತಿಯನ್ನು ಬಿಎಸ್‍ವೈ ಕಚೇರಿ ಮೂಲಗಳು ಖಚಿತಪಡಿಸಿವೆ. ಇನ್ನು ಯಾವ ಕಾರಣದಿಂದ ಯಡಿಯೂರಪ್ಪ ಅವರನ್ನು ಹೊರಗಿಟ್ಟು ಸಭೆ ನಡೆಸಲಾಯಿತು ಎನ್ನುವ ಪ್ರಶ್ನೆಗೆ ಬಿಜೆಪಿ ನಾಯಕರಿಂದ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಕುಸ್ತಿ ಫೆಡರೇಷನ್‍ಗೆ ಉಸ್ತುವಾರಿ ಸಮಿತಿ ರಚನೆ : 3 ದಿನಗಳ ಧರಣಿ ಅಂತ್ಯ

ನಮಗೆ ಈ ಬಗ್ಗೆ ಮಾಹಿತಿ ಇಲ್ಲ ಎನ್ನುವ ಉತ್ತರವನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯೊಬ್ಬರು ನೀಡಿದ್ದಾರೆ. ಯಡಿಯೂರಪ್ಪ ಅವರನ್ನು ಬಿಟ್ಟು ಚುನಾವಣಾ ಪ್ರಚಾರದ ವಿಷಯ, ಕಾರ್ಯತಂತ್ರದಂತಹ ವಿಷಯಗಳ ಕುರಿತು ಸಭೆ ನಡೆಸಿರುವುದು ಯಡಿಯೂರಪ್ಪ ಅವರನ್ನು ರಾಜ್ಯ ಘಟಕ ಕಡೆಗಣಿಸಲು ಆರಂಭಿಸಿದೆಯೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಕರ್ನಾಟಕದ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸುವ ಲಿಂಗಾಯತ ಸಮುದಾಯಕ್ಕೆ ಸೇರಿದ ಯಡಿಯೂರಪ್ಪ ಅವರಿಗೆ ಜಾತಿಯ ಬೆಂಬಲ ಇದೆ. ಆದರೂ ಬಿಜೆಪಿ ಹೈಕಮಾಂಡ್ ಈ ಹಿಂದೆ ಯಡಿಯೂರಪ್ಪ ಅವರನ್ನು ಏಕಾಏಕಿ ಸಿಎಂ ಹುದ್ದೆಯಿಂದ ಕೆಳಗಿಳಿಸಿತ್ತು. ಇದು ವೀರಶೈವ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ, ಯಡಿಯೂರಪ್ಪ ಬಿಜೆಪಿ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆ ತೀವ್ರಗೊಂಡ ವೇಳೆ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿ ಗೌರವಿಸಲಾಯಿತು. ಈ ಮೂಲಕ ಅವರ ಅಸಮಾಧಾನ ತಣಿಸುವ ಪ್ರಯತ್ನ ನಡೆಸಲಾಯಿತು.

ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹೈಕಮಾಂಡ್, ಯಡಿಯೂರಪ್ಪ ಅವರನ್ನು ಬಳಸಿಕೊಳ್ಳುವ ಯೋಜನೆ ಮಾಡಿತ್ತು. ಇದಕ್ಕೆ ಪೂರಕವೆಂಬಂತೆ ಸ್ವತಃ ಮೋದಿ ಅವರೇ ಇತ್ತೀಚೆಗೆ ನಡೆದ ರಾಷ್ಟ್ರೀಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬಿಎಸ್‍ವೈ ಜೊತೆ ಪ್ರತ್ಯೇಕ ಚರ್ಚೆ ಮಾಡಿದ್ದರು. ಇದು ಹಲವು ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ. ಆದರೆ, ಇದೀಗ ರಾಜ್ಯ ಬಿಜೆಪಿ ಇಂದಿನ ಸಭೆಗೆ ಯಡಿಯೂರಪ್ಪ ಅವರನ್ನು ಆಹ್ವಾನ ನೀಡಿಲ್ಲದಿರುವುದು ಅಚ್ಚರಿ ಜೊತೆಗೆ ಚರ್ಚೆಗೆ ಗ್ರಾಸವಾಗಿದೆ.

ಇತ್ತೀಚೆಗೆ ಚಾಮರಾಜನಗರ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮದ ಬದಲಾಗಿ ಸರ್ಕಾರಿ ಕಾರ್ಯಕ್ರಮವಾಗಿ ಪರಿವರ್ತನೆ ಮಾಡಲಾಗಿತ್ತು. ಯಡಿಯೂರಪ್ಪ ಅವರನ್ನು ದೂರ ಇರಿಸುವ ಕಾರಣದಿಂದಲೇ ಹೀಗೆ ಮಾಡಲಾಗಿತ್ತು ಎನ್ನುವ ಮಾತುಗಳು ಕೇಳಿ ಬಂದಿದ್ದವು. ನಂತರ ತುಮಕೂರಿನ ಜನಸ್ಪಂದನ ಸಮಾವೇಶದಿಂದಲೂ ಯಡಿಯೂರಪ್ಪ ದೂರ ಉಳಿದು ಅಸಮಾಧಾನ ಹೊರಹಾಕಿದ್ದರು. ಇದರ ನಡುವೆ ಇದೀಗ ಪಕ್ಷದ ಪ್ರಮುಖ ಸಭೆಯಿಂದ ಯಡಿಯೂರಪ್ಪ ಅವರನ್ನು ಹೊರಗಿಟ್ಟಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಒಂದು ಕಡೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಪಕ್ಷದ ಕೇಂದ್ರ ಮಟ್ಟದಲ್ಲಿ ಅವಕಾಶ ನೀಡಲಾಗಿದೆ. ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗಳಲ್ಲಿ ಸದಸ್ಯ ಸ್ಥಾನ ನೀಡಿ ಹೈಕಮಾಂಡ್ ಯಡಿಯೂರಪ್ಪಗೆ ಆದ್ಯತೆ ನೀಡುತ್ತಿದ್ದರೆ, ಇತ್ತ ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗುತ್ತಿದೆ. ಇದರ ಹಿಂದೆ ಪಕ್ಷದಲ್ಲಿ ಮಟ್ಟದ ಸಂಘಟನಾ ಜವಾಬ್ದಾರಿ ಹೊತ್ತ ರಾಜ್ಯದ ನಾಯಕರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಹಳೆಯ ಸಂಸತ್‍ನಲ್ಲೇ ಬಜೆಟ್ ಅಧಿವೇಶನ : ಓಂ ಬಿರ್ಲಾ

ಆದರೆ ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪವನ್ನು ಮಾಜಿ ಸಿಎಂ ಬಿಎಸ್‍ವೈ ಮಾತ್ರ ನಿರಾಕರಣೆ ಮಾಡುತ್ತಿದ್ದಾರೆ. ಯಾವುದೇ ರೀತಿ ಭಿನ್ನಾಭಿಪ್ರಾಯ, ಗೊಂದಲಗಳು ಇಲ್ಲ. ನನ್ನನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬುವುದು ಮಾಧ್ಯಮ ಸೃಷ್ಟಿ ಎಂಬುವುದು ಇವರ ಅಭಿಪ್ರಾಯವಾಗಿದೆ.

ನಾವು ಒಟ್ಟಾಗಿದ್ದೇವೆ, ಒಂದಾಗಿದ್ದೇವೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಬಹುಮತಕ್ಕೆ ತಂದು. ಸರ್ಕಾರ ರಚನೆ ಮಾಡುತ್ತೇವೆ ಅದಕ್ಕೆ ಯಾವ ಶ್ರಮ ಬೇಕಾದರೂ ಹಾಕುತ್ತೇವೆ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇವೆ ಬಿಜೆಪಿಯ ಪರವಾಗಿ ಅಲೆ ರಾಜ್ಯದಲ್ಲಿದೆ ಎನ್ನುತ್ತಾರೆ ಯಡಿಯೂರಪ್ಪ.

ಆಡಳಿತ ವಿರೋ ಅಲೆಯ ನಡುವೆಯೂ ಬಿಜೆಪಿ ಚುನಾವಣಾ ಸಿದ್ಧತೆ ನಡೆಸುತ್ತಿದೆ. ಆದರೆ, ಪಕ್ಷವನ್ನು ಅಕಾರಕ್ಕೆ ತಂದ ಬಿಎಸ್‍ವೈ ಸೈಲೆಂಟ್ ನಡೆ ಸಹಜವಾಗಿ ಕುತೂಹಲ ಕೆರಳಿಸಿದೆ. ಯಡಿಯೂರಪ್ಪ ಅವರನ್ನು ನಿರ್ಲಕ್ಷ್ಯ ಮಾಡಿದರೆ ಬಿಜೆಪಿ ಪರಿಣಾಮ ಎದುರಿಸಲಿದೆ ಎಂಬ ಅಭಿಪ್ರಾಯವನ್ನು ಅವರ ಆಪ್ತ ವಲಯಗಳು ಹೇಳುತ್ತಿವೆ. ಆದರೆ, ಮುಂದಿನ ದಿನಗಳಲ್ಲಿ ಬಿಜೆಪಿ ವರಿಷ್ಠರು ಇದನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸದ್ಯದ ಕುತೂಹಲ.

BJP, leaders, meeting, assembly, elections, Yeddyurappa,

Articles You Might Like

Share This Article