ಶವದ ಮೇಲೆ ರಾಜಕೀಯ ಮಾಡುವ ಬಿಜೆಪಿ ಕ್ಷಮೆ ಕೇಳಲಿ : ಪ್ರಿಯಾಂಕ್ ಖರ್ಗೆ

Social Share

ಬೆಂಗಳೂರು,ಅ.18- ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೆಹ್ತಾ ಸಾವಿನ ಪ್ರಕರಣದಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿ, ಕೋಮು ಗಲಭೆಗೆ ಕಾರಣವಾದ ಬಿಜೆಪಿ ನಾಯಕರ ವಿರುದ್ಧ 15 ದಿನಗಳಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳದೇ ಇದ್ದರೆ ಕಾಂಗ್ರೆಸ್ ಪಕ್ಷ ಸಿಬಿಐಗೆ ದೂರು ನೀಡಲಿದೆ ಎಂದು ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2017ರ ಡಿಸೆಂಬರ್‍ನಲ್ಲಿ 18 ವರ್ಷದ ಯುವಕ ಪರೇಶ್ ಮೆಹ್ತಾ ಸಾವು ಸಂಭವಿಸಿತ್ತು. ಡಿ. 8ರಂದು ಶವ ಪತ್ತೆಯಾಗಿತ್ತು. ಮಾರನೇಯ ದಿನವೇ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪತ್ರ ಬರೆದು ಎನ್‍ಐಎ ತನಿಖೆಗೆ ಒತ್ತಾಯಿಸಿದ್ದರು.

ಅಲ್ಲದೆ, ಪತ್ರಿಕಾಗೋಷ್ಠಿ ನಡೆಸಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದರು. ಮೊಗವೀರ ಸಮುದಾಯದ ಪರೇಶ್‍ಮೆಹ್ತಾನಿಗೆ ಜಿಹಾದಿಗಳು ಕಿರುಕುಳ ನೀಡಿ ಕೊಂದು ಹಾಕಿದ್ದಾರೆ. ಜೈ ಶ್ರೀ ರಾಮ್ ಎಂದು ಹಚ್ಚೆ ಇದೆ ಎಂಬ ಕಾರಣಕ್ಕೆ ಕೈ ಕತ್ತರಿಸಿದ್ದಾರೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ಆದರೆ ಪರೇಶ್ ಮೆಹ್ತಾ ಶವದಲ್ಲಿ ಕೈ ಕತ್ತರಿಸಿರಲಿಲ್ಲ. ಕುದಿಯುವ ಎಣ್ಣೆಯನ್ನು ಪರೇಶ್ ಮುಖದ ಮೇಲೆ ಎರಚಿ, ಕಣ್ಣುಗುಡ್ಡೆ ಕಿತ್ತು ಕೊಲೆ ಮಾಡಲಾಗಿದೆ ಎಂದಿದ್ದರು. ಆದರೆ, ಅದ್ಯಾವುದೂ ಸತ್ಯ ಅಲ್ಲ ಎಂದು ಸಿಬಿಐ ತಿಳಿಸಿದೆ.

ಬಿಜೆಪಿಯ ಶೋಭಾ ಕರಂದ್ಲಾಜೆ, ಅನಂತಕುಮಾರ್ ಹೆಗ್ಡೆ, ನಳೀನ್ ಕುಮಾರ್, ಸಿ.ಟಿ.ರವಿ, ಕೆ.ಎಸ್.ಈಶ್ವರಪ್ಪ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಅಧಿಕೃತವಾಗಿಯೇ ಈ ಎಲ್ಲಾ ಹೇಳಿಕೆ ನೀಡಿದ್ದರು. ಬಳಿಕ ಕರಾವಳಿಯಲ್ಲಷ್ಟೆ ಅಲ್ಲ ರಾಜ್ಯಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೋಮು ಸೌಹಾರ್ದತೆ ಹಾಳಾಗಿತ್ತು. ಗಲಭೆಗಳಾಗಿದ್ದವು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿತ್ತು. ಐಜಿ ಅವರ ಕಾರು ಸುಟ್ಟು ಹೋಗಿತ್ತು ಎಂದು ವಿವರಿಸಿದ್ದರು.

ಈ ಪ್ರಕರಣದ ತನಿಖೆ ನಡೆಸಿದ ಸಿಬಿಐ ಹೊನ್ನಾವರ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಮಗ್ರ ವರದಿಯನ್ನು ಸಲ್ಲಿಸಿದೆ ಎಂದ ಪ್ರಿಯಾಂಕ್‍ಖರ್ಗೆ ವರದಿಯನ್ನು ಸವಿವರವಾಗಿ ಓದಿದರು. 2017ರ ಡಿಸೆಂಬರ್ 6ರಂದು ಸಂಜೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಸೇರಿದ್ದ ಹಿಂದು ಮುಖಂಡರು ಮತಾಂತರದ ವಿಷಯವಾಗಿ ಗಲಾಟೆ ಮಾಡುತ್ತಿದ್ದರು.

ಅಷ್ಟರಲ್ಲಿ 8 ಗಂಟೆ ಸುಮಾರಿಗೆ ಶರಾವತಿ ವೃತ್ತದಲ್ಲಿ ಹಿಂದು ಯುವಕನಿಗೆ ಸೇರಿದ ಆಟೋ ಮತ್ತು ಮುಸ್ಲಿಂ ಯುವಕರ ಬೈಕ್ ನಡುವೆ ಅಪಘಾತವಾಗಿದೆ ಎಂಬ ಮಾಹಿತಿ ಬರುತ್ತದೆ. ಹಿಂದು-ಮುಸ್ಲಿಂ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಠಾಣೆಯಲ್ಲಿದ್ದ ಹಿಂದು ಮುಖಂಡರು ಸ್ಥಳಕ್ಕೆ ಧಾವಿಸಿ ಬರುತ್ತಾರೆ.

ಆದರೆ ಆ ವೇಳೆಗೆ ಅಪಘಾತ ಮಾಡಿಕೊಂಡವರು ಚಿಕಿತ್ಸೆ ಗಾಗಿ ಆಸ್ಪತ್ರೆಗೆ ತೆರಳಿರುತ್ತಾರೆ ಮತ್ತು ಪರಸ್ಪರ ರಾಜಿ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ತಿಳಿಯುತ್ತದೆ. ಅಪಘಾತಕ್ಕೆ ಒಳಗಾದವರು ಸ್ಥಳೀಯರಲ್ಲ ಎಂಬ ಕಾರಣಕ್ಕೆ ಆ ಪ್ರಕರಣದಲ್ಲಿ ಏನು ಮಾಡಲಾಗದೆ ಹಿಂದು ಸಂಘಟನೆಯ ಮುಖಂಡರು ಗುಡ್‍ಲಕ್ ಹೋಟೆಲ್ ಬಳಿ ಜಮಾವಣೆಗೊಳ್ಳುತ್ತಾರೆ.

ಅಲ್ಲಿ ಮುಸ್ಲಿಂ ಸಮುದಾಯದ ಕೆಲವರೊಂದಿಗೆ ವಾಗ್ವಾದ ನಡೆಸುತ್ತಾರೆ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿ ಕೋಮುಗಲಭೆಯಾಗುತ್ತದೆ. ಅಲ್ಲಿಂದ ಪರೇಶ್ ಮೆಹ್ತಾರನ್ನು ಅಪಹರಸಿ ಕೊಲೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.

ಗಲಭೆಯ ದಿನ ಕಲ್ಲೂ ತೂರಾಟವಾಗಿದೆ. ಎರಡು ಗುಂಪುಗಳ ನಡುವೆ ಕನಿಷ್ಠ 100 ಮೀಟರ್ ಅಂತರವಿತ್ತು. ಎರಡು ಗುಂಪುಗಳ ನಡುವೆ ಪರಸ್ಪರ ದೈಹಿಕ ಹಲ್ಲೆ ನಡೆದಿರಲಿಲ್ಲ. ಆ ಸ್ಥಳದಿಂದ ಪೆರೇಶ್ ಮೆಹ್ತಾರನ್ನು ಅಪಹರಿಸಲು ಸಾಧ್ಯವಿರಲಿಲ್ಲ. ಏಕೆಂದರೆ ಅಂದು ಹಿಂದು ಸಂಘಟನೆಯ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದರು.

ಪೊಲೀಸರ ಭದ್ರತೆಯೂ ಬಿಗಿಯಾಗಿತ್ತು. ಅಷ್ಟು ಜನರ ನಡುವೆ ಅಪಹರಣ ಮಾಡಿ, ಅದೇ ಹಾದಿಯಲ್ಲಿ ಶವವನ್ನು ಸಾಗಿಸಿ ಕೆರೆಗೆ ಬಿಸಾಡುವ ಧೈರ್ಯ ಮಾಡಲು ಸಾಧ್ಯವಿರಲಿಲ್ಲ ಎಂದು ಸಿಬಿಐ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದಿದ್ದಾರೆ.

ಮರಣೋತ್ತರ ಪರೀಕ್ಷೆಯಲ್ಲಿ ವೈದ್ಯರು ಸಾವಿಗೆ ಹಲ್ಲೆ ಅಥವಾ ಹರಿತ ಆಯುಧಗಳು ಕಾರಣವಲ್ಲ, ದೇಹದಲ್ಲಿ ಆಲ್ಕೋಹಾಲ್ ಅಥವಾ ವಿಷದ ಅಂಶಗಳು ಕಂಡು ಬಂದಿಲ್ಲ ಎಂದಿದ್ದಾರೆ. ಶ್ವಾಸಕೋಶದಲ್ಲಿ ಕೆರೆಯ ನೀರಿನ ಅಂಶಗಳು ಕಂಡು ಬರುತ್ತವೆ.

ಹಾಗಾಗಿ ಬೇರೆ ಕಡೆ ಕೊಲೆ ಮಾಡಿ ಶವ ತಂದು ಹಾಕಲು ಸಾಧ್ಯವಿಲ್ಲ. ಸಾವಿನ ಸ್ವರೂಪ ನೋಡಿದರೆ ನೀರಿನಲ್ಲಿ ಮುಳುಗಿದ್ದರಿಂದ ಜೀವ ಹೋಗಿರುವ ಸಾಧ್ಯತೆ ಇದೆ. ಕುತ್ತಿಗೆ ಹಿಸುಕಿದ ಕುರುಹುಗಳು ಇಲ್ಲ ಎಂದು ವರದಿ ಹೇಳಿದೆ. ಶವಪರೀಕ್ಷೆಯ ಎರಡನೇ ಅಭಿಪ್ರಾಯಕ್ಕಾಗಿ ಸಿಬಿಐ ಮಾದರಿಗಳನ್ನು ಪಾಂಡಿಚೇರಿಗೆ ಕಳುಹಿಸಿದೆ. ಅಲ್ಲಿಯು ಸಾವಿಗೆ ನೀರಿನಲ್ಲಿ ಮುಳುಗಿರುವುದೇ ಕಾರಣ ಎಂದು ಸ್ಪಷ್ಟವಾಗಿದೆ ಎಂದರು.

ಸಿಬಿಐ ತನ್ನ ವರದಿಯ ಮೊದಲೇ ರಾಜಕಾರಣಿಗಳು ಆರೋಪ ಮಾಡಿದ್ದಂತೆ ಪರೇಶ್ ಕೊಲೆಯಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಬಿಜೆಪಿಯವರ ಪ್ರಕಾರ ಯುವಕನ ಪ್ರಾಣಕ್ಕೆ ಬೆಲೆಯೆ ಇಲ್ಲವೇ. ಹೆಣದ ಮುಂದೆ ಏಕೆ ರಾಜಕೀಯ ಮಾಡುತ್ತೀರಾ. ನಿಮಗೆ ಹಿಂದು ಕಾರ್ಯಕರ್ತರ ಮೇಲೆ ಪ್ರೀತಿ ಇದ್ದರೆ ಸಿಬಿಐ ಮುಂದೆ ಏಕೆ ವಿವರ ನೀಡಲಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಯವರು ರಕ್ತಪಿಪಾಸುಗಳು, ಬಿಜೆಪಿ, ಆರ್‍ಎಸ್‍ಎಸ್ ತನ್ನ ಅಜೆಂಡಾ ಬಳಸಿ ಯುವಕರ ತಲೆ ಕೆಡಿಸಿ ಭವಿಷ್ಯ ಹಾಳು ಮಾಡುತ್ತಿದೆ. ಅದನ್ನು ನಂಬಿ ಯುವಕರು ಭವಿಷ್ಯ ಹಾಳು ಮಾಡಿಕೊಳ್ಳಬಾರದು ಎಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ. ಹಿಂದು ಸಂಘಟನೆ ನಾಯಕರು ನಿಮಗೆ ಕೇಸರಿ ಶಾಲು ಹಾಕಲು ಬಂದಾಗ, ಬಿಜೆಪಿ, ಆರ್‍ಎಸ್‍ಎಸ್ ಮುಖಂಡರು, ಶಾಸಕರು ಮತ್ತು ಸಂಸದರ ಎಷ್ಟು ಮಕ್ಕಳು ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುವಂತೆ ಸಲಹೆ ನೀಡಿದರು.

ಧರ್ಮ ರಕ್ಷಣೆಗೆ ಬಡವರ, ಶೋಷಿತರ, ಹಿಂದುಳಿದ ವರ್ಗದವರ ಮಕ್ಕಳೇ ಯಾಕೆ ಬೇಕು. ಬಿಜೆಪಿಯವರಿಗೆ ಮಾನವೀಯತೆ ಇದ್ದರೆ ತಕ್ಷಣವೆ ಪರೇಶ್ ಮೆಹ್ತಾ ಕುಟುಂಬದ ಬಳಿ ಹೋಗಿ ಕೈ ಕಾಲು ಹಿಡಿದು ಕ್ಷಮೆ ಕೇಳಬೇಕು, ಜನರನ್ನು ದಾರಿ ತಪ್ಪಿಸಿದ್ದಕ್ಕೆ ಕರಾವಳಿ ಹಾಗೂ ರಾಜ್ಯ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. ತನಿಖೆ ನಡೆಸಿದ ಸಿಬಿಐ, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ, ಮೊಬೈಲ್ ಮಾಹಿತಿ ಸೇರಿ ಎಲ್ಲಾ ವಿವರಗಳನ್ನು ಪರಿಗಣಿಸಿದೆ. ಸಾಕ್ಷ್ಯಗಳ ಹೇಳಿಕೆಗಳನ್ನು ಸಂಗ್ರಹಿಸಿದೆ. ನಂತರ ವರದಿ ನೀಡಿದೆ. ಈಗ ಬಿಜೆಪಿ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ. ಮಾಡಲಿ ನಮ್ಮ ವಿರೋಧ ಇಲ್ಲ. ಆದರೆ ಈ ವರೆಗೂ ನಡೆದಿರುವ ತನಿಖೆಯಲ್ಲಿ ಏನು ಲೋಪವಾಗಿದೆ ಎಂದು ಬಿಜೆಪಿ ಜನರಿಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ಸಿಬಿಐ ವರದಿ ಸರಿ ಇಲ್ಲ ಎಂದರೆ ತನಿಖಾ ಸಂಸ್ಥೆಯನ್ನು ನಿರ್ವಹಣೆ ಮಾಡುತ್ತಿರುವ ಕೇಂದ್ರ ಗೃಹ ಸಚಿವರು ಅಸಮರ್ಥರು ಎಂದು ಒಪ್ಪಿಕೊಂಡಂತಾಗುತ್ತದೆ. ರಾಜ್ಯದ ಈಗೀನ ಗೃಹ ಸಚಿವರು ಅಸಮರ್ಥರು ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.

Articles You Might Like

Share This Article