ಖಾಸಗಿ ಹೋಟೆಲ್‍ನಲ್ಲಿ ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ

Social Share

ಬೆಂಗಳೂರು,ಸೆ.13- ಸದನದಲ್ಲಿ ಪ್ರತಿಪಕ್ಷಗಳ ಅಸ್ತ್ರಕ್ಕೆ ಪ್ರತ್ಯಾಸ್ತ್ರ ರೂಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಸಂಜೆ ಮಹತ್ವದ ಶಾಸಕಾಂಗ ಸಭೆ ನಡೆಯಲಿದೆ. ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಯಲಿರುವ ಸಭೆಗೆ ಸಿಎಂ ಬೊಮ್ಮಾಯಿ, ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಕಡ್ಡಾಯವಾಗಿ ಪಾಲ್ಗೊಳ್ಳ ಬೇಕೆಂದು ಮುಖ್ಯ ಸಚೇತಕರು ಸೂಚನೆ ಕೊಟ್ಟಿದ್ದಾರೆ.

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಪ್ರತಿ ಪಕ್ಷ ಕಾಂಗ್ರೆಸ್ ಮುಗಿಬೀಳಲು ಸಜ್ಜಾಗಿದೆ. ಇದಕ್ಕೆ ಪ್ರತಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರ ಅಧಿಕಾರ ಅವಧಿಯಲ್ಲಿ ನಡೆದಿರುವ ಹಗರಣಗಳ ಕುರಿತಂತೆ ಸದನದಲ್ಲಿ ಪ್ರಸ್ತಾಪಿಸಲು ಸಿದ್ದವಾಗಿದೆ.

ಇದನ್ನೂ ಓದಿ : ಮತ್ತೆ ಮುನ್ನೆಲೆಗೆ ಬಂದ ಸಿದ್ದು ಹೂಬ್ಲೆಟ್ ವಾಚ್ ವಿವಾದ

ಪ್ರತಿಯೊಬ್ಬ ಸಚಿವರು ಕಲಾಪದಲ್ಲಿ ಪಾಲ್ಗೊಳ್ಳುವ ಮುನ್ನ ತಮ್ಮ ತಮ್ಮ ಇಲಾಖೆಗಳಲ್ಲಿ ಈ ಹಿಂದೆ ನಡೆದಿರುವ ಅಕ್ರಮಗಳ ಬಗ್ಗೆ ಮಾಹಿತಿಯನ್ನು ಕಲೆ ಹಾಕಿ ಸದನದಲ್ಲಿ ಸಮರ್ಪಕವಾಗಿ ಉತ್ತರ ಕೊಡಬೇಕೆಂದು ಸಿಎಂ ಹಾಗೂ ಹಿರಿಯ ಸಚಿವರು ಸೂಚನೆ ನೀಡಲಿದ್ದಾರೆ.

ಸದನದಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ಮತ್ತು ಸರ್ಕಾರದ ಸಮರ್ಥನೆಗೆ ಶಾಸಕರು ನಿಲ್ಲುವಂತೆ ಸೂಚಿಸಲು ಈ ಸಭೆ ಕರೆಯಲಾಗಿದೆ. ಮಳೆ ಅನಾಹುತ ನಿರ್ವಹಣೆ ಕುರಿತು ಪ್ರತಿಪಕ್ಷಗಳಿಂದ ಎದುರಾಗಲಿರುವ ಟೀಕೆ, ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ, ಶಾಸಕ ದಡೇಸುಗೂರು ವಿವಾದಗಳನ್ನು ಯಾವ ರೀತಿ ಎದುರಿಸಬೇಕು ಎನ್ನುವ ಕುರಿತು ಚರ್ಚಿಸಲಾಗುತ್ತದೆ.

ಕಾಂಗ್ರೆಸ್ ಮಾಡುವ ಭ್ರಷ್ಟಾಚಾರದ ಆರೋಪಗಳಿಗೆ ಪ್ರತಿಯಾಗಿ ಕಾಂಗ್ರೆಸ್ ಸರ್ಕಾರದ ವೇಳೆ ನಡೆದಿರುವ ಆರೋಪಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸಬೇಕೆಂಬ ಚಿಂತನೆಯಿದ್ದು, ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Articles You Might Like

Share This Article