ಕುಟುಂಬಸ್ಥರಿಗೆ ಟಿಕೆಟ್ ಕೊಡಿಸಲು ಬಿಜೆಪಿ ಭಾರೀ ಲಾಬಿ..

Social Share

ಬೆಂಗಳೂರು,ನ.24- ಕುಟುಂಬ ರಾಜಕಾರಣವನ್ನೇ ವಿರೋಧಿಸುತ್ತಲೇ ಕೇಂದ್ರ ಮತ್ತು ದೇಶದ ವಿವಿಧ ಕಡೆ ಅಧಿಕಾರಕ್ಕೆ ಬಂದಿರುವ ಬಿಜೆಪಿಯಲ್ಲಿ ತಮ್ಮ ಪುತ್ರರು ಹಾಗೂ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸಲು ಲಾಬಿ ಆರಂಭವಾಗಿದೆ.

ಸರಿಸುಮಾರು ಎರಡು ಡಜನ್‍ಗೂ ಅಧಿಕ ಆಕಾಂಕ್ಷಿಗಳು ತಮ್ಮ ಪುತ್ರರು, ಪುತ್ರಿಯರು, ಸಹೋದರ, ತಾಯಿಂದಿರಿಗೆ ಟಿಕೆಟ್ ಕೊಡಿಸಿ ಕಣಕ್ಕಿಳಿಸಲು ಗಾಡ್‍ಫಾದರ್‍ಗಳ ಮೊರೆ ಹೋಗಿದ್ದಾರೆ. ಕುಟುಂಬ ರಾಜಕಾರಣದಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಹಾಳಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಾರಿ ಸಾರಿ ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದರೂ ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕುಟುಂಬಸ್ಥರಿಗೆ ಟಿಕೆಟ್ ಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

ಬಹುತೇಕ 2023ರ ಕೊನೆ ಚುನಾವಣೆಯಲ್ಲಿರುವ ಹಾಗೂ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ಖಾತರಿ ಇರುವ ಅನೇಕರು ತಾವಿಲ್ಲದಿದ್ದರೆ ಏನಾಯಿತು, ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್‍ನ ಕುಟುಂಬ ರಾಜಕಾರಣವನ್ನು ವಿರೋಧಿಸುವ ಬಿಜೆಪಿ ನಾಯಕರು ಬರಬರುತ್ತಾ ಅದೇ ಹಾದಿಯನ್ನು ತುಳಿದಿದ್ದು ದುರ್ದೈವ.

ಡಿಜಿಟಲ್ ಮಾಧ್ಯಮಕ್ಕೆ ಬೀಳಲಿದೆ ಕಡಿವಾಣ

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಬರಲಿರುವ ಚುನಾವಣೆಗೆ ಸ್ರ್ಪಧಿಸುವುದಿಲ್ಲ ಎಂದು ಘೋಷಿಸಿದ್ದಾರೆ. ಅವರು ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರಕ್ಕೆ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಮುಂದಾಗಿರುವುದು ಗುಟ್ಟಾಗಿ ಉಳಿದಿಲ್ಲ.

ಈಗಾಗಲೇ ಶಿಕಾರಿಪುರಕ್ಕೆ ವಿಜಯೇಂದ ಅಭ್ಯರ್ಥಿ ಎಂದು ಘೋಷಿಸಿದ್ದು, ಕ್ಷೇತ್ರದೆಲ್ಲೆಡೆ ಪ್ರಚಾರವನ್ನು ಸಹ ಆರಂಭಿಸಲಾಗಿದೆ. ಸಂಪುಟಕ್ಕೆ ಸೇರಿಕೊಳ್ಳಲು ಸರ್ಕಸ್ ನಡೆಸುತ್ತಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡ ಶಿವಮೊಗ್ಗ ನಗರ ಕ್ಷೇತ್ರದಿಂದ ತಮ್ಮ ಪುತ್ರ ಕೆ.ಇ.ಕಾಂತೇಶ್‍ಗೆ ಟಿಕೆಟ್ ಕೊಡಿಸಲು ಲಾಬಿ ನಡೆಸಿದ್ದಾರೆ.

ಜನತಾ ಪರಿವಾರ, ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ ಒಟ್ಟು ಮೂರು ಪಕ್ಷಗಳಲ್ಲಿ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಂಡ ವಸತಿ ಸಚಿವ ವಿ.ಸೋಮಣ್ಣ ತಮ್ಮ ಪುತ್ರ ಡಾ.ಅರುಣ್ ಸೋಮಣ್ಣ ಅವರನ್ನು ಕಣಕ್ಕಿಳಿಸುವ ಭರದಲ್ಲಿದ್ದಾರೆ.

ತಾವು ಪ್ರತಿನಿಧಿಸುವ ಗೋವಿಂದರಾಜನಗರಕ್ಕೆ ಅರುಣ್ ಸೋಮಣ್ಣಗೆ ಹಾಗು ತಮಗೆ ಚಾಮರಾಜನಗರ ಇಲ್ಲವೇ ಹನೂರು ಕ್ಷೇತ್ರದಿಂದ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಸತತ ಆರು ಬಾರಿ ಗೆದ್ದು, ಬೆಂಗಳೂರಿನ ಮೇಲೆ ಹಿಡಿತ ಸಾಧಿಸಿರುವ ಕಂದಾಯ ಸಚಿವ ಆರ್. ಅಶೋಕ್‍ಗೆ ಒಂದು ವೇಳೆ ಟಿಕೆಟ್ ಈ ಬಾರಿ ಕೈ ತಪ್ಪಿದರೆ ಪದ್ಮನಾಭನಗರದಿಂದ ಪುತ್ರ ಶರತ್ ಅಥವಾ ಅಜಯ್ ಅವರನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ.

ಜನತಾ ಪರಿವಾರದಿಂದ ರಾಜಕೀಯ ಜೀವನ ಆರಂಭಿಸಿ ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿಗೆ ಬಂದು ಉಪಮುಖ್ಯಮಂತ್ರಿ ಹುದ್ದೆವರೆಗೂ ಏರಿದ ಹಾಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ್ ಕಾರಜೋಳ ಅವರಿಗೆ ಮುಧೋಳದಿಂದ ಟಿಕೆಟ್ ನೀಡಬೇಕು ಎಂಬ ಪ್ರಸ್ತಾವನೆಯನ್ನು ವರಿಷ್ಠರ ಮುಂದಿಟ್ಟದ್ದಾರೆ.

ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ತಮ್ಮ ಪುತ್ರಿಯನ್ನು ಕಣಕ್ಕಿಳಿಸಬೇಕೆಂಬ ಚಿಂತನೆಯಲ್ಲಿದ್ದರೆ, ಚೆನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಕೂಡ ಪುತ್ರನನ್ನು ರಾಜಕೀಯ ಕ್ಷೇತ್ರಕ್ಕೆ ತರಬೇಕೆಂಬ ತವಕದಲ್ಲಿದ್ದಾರೆ.

ಈಗಾಗಲೇ ಜಿಲ್ಲಾ ಪರಿಷತ್ ಸದಸ್ಯರಾಗಿರುವ ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ಕ್ಷೇತ್ರದಲ್ಲಿ ಸಾಕಷ್ಟು ವಿರೋಧಿ ಅಲೆ ಎದುರಿಸುತ್ತಿರುವ ಹಾಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹಿರೇಕೆರೂರುನಿಂದ ಸ್ರ್ಪಧಿಸದೆ ತಮ್ಮ ಪುತ್ರಿ ಸೃಷ್ಟಿ ಪಾಟೀಲ್ ಅವರನ್ನು ಅಭ್ಯರ್ಥಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಇತ್ತೀಚೆಗಷ್ಟೇ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಯು.ಬಿ.ಬಣಕಾರ್ ಕಾಂಗ್ರೆಸ್ ಸೇರಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ. ಬೇರೆ ಬೇರೆ ಕಾರಣಗಳಿಂದಾಗಿ ಕ್ಷೇತ್ರದಲ್ಲಿ ವಿರೋಧಿ ಅಲೆ ಇರುವುದರಿಂದ ಬಿ.ಸಿ.ಪಾಟೀಲ್ ಪುತ್ರಿಯನ್ನೇ ಅಭ್ಯರ್ಥಿ ಮಾಡುವ ಚಿಂತನೆಯಲ್ಲಿದ್ದಾರೆ.

31 ಗೋವುಗಳನ್ನೂ ದತ್ತು ಪಡೆದ ನಟ ಸುದೀಪ್

ದೇವದುರ್ಗದ ಶಾಸಕ ಶಿವನಗೌಡ ನಾಯಕ್ ಈ ಬಾರಿ ಕ್ಷೇತ್ರ ಬದಲಾಯಿಸುವ ಸಾಧ್ಯತೆ ಇದೆ. ತಾವು ಪ್ರತಿನಿಧಿಸುತ್ತಿದ್ದ ದೇವದುರ್ಗದಿಂದ ತಮ್ಮ ತಾಯಿಯನ್ನು ಕಣಕ್ಕಿಳಿಸಿ ಪಕ್ಕದ ಮಾನ್ವಿ ಇಂದ ಅದೃಷ್ಟ ಪರೀಕ್ಷಿಸಲಿದ್ದಾರೆ.

ಕೊಪ್ಪಳದ ಲೋಕಸಭಾ ಕ್ಷೇತ್ರದ ಶಾಸಕ ಕರಡಿ ಸಂಗಣ್ಣ ಅವರು ಈ ಬಾರಿ ತಮ್ಮ ಪುತ್ರನನ್ನು ಕಣಕ್ಕಿಳಿಸಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಈ ಬಾರಿ ತೀರ್ಥಹಳ್ಳಿ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದರೆ ಅವರ ಪುತ್ರ ಕಣಕ್ಕಿಳಿಯುವ ಸಾಧ್ಯತೆ ಇದೆ.

ಬೆಳಗಾವಿ ಜಿಲ್ಲೆಯಲ್ಲೂ ಕುಟುಂಬ ರಾಜಕಾರಣ ಈ ಬಾರಿಯು ಮೇಳೈಸುವ ಲಕ್ಷಣಗಳಿವೆ. ಉಮೇಶ್ ಕತ್ತಿ ನಿಧನದಿಂದ ತೆರವಾಗಿರುವ ಹುಕ್ಕೇರಿಗೆ ಅವರ ಸಹೋದರ ರಮೇಶ್ ಕತ್ತಿ ಇಲ್ಲವೇ ಕತ್ತಿಯವರ ಪುತ್ರ ಕೂಡ ಆಕಾಂಕ್ಷಿಯಾಗಿದ್ದಾರೆ.

ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಆನಂದ್ ಮಾಮನಿ ಅವರಿಂದ ತೆರವಾಗಿರುವ ಸವದತ್ತಿಯಲ್ಲಮ್ಮ ಕ್ಷೇತ್ರಕ್ಕೆ ಐಆರ್‍ಎಸ್ ಅಧಿಕಾರಿಯಾಗಿರುವ ಆನಂದ್ ಮಾಮನಿ ಸಹೋದರ ಇಲ್ಲವೇ ಪತ್ನಿ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಹಾಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಎಸ್.ಅಂಗಾರ ಸೇರಿದಂತೆ ಅನೇಕರಿಗೆ ಟಿಕೆಟ್ ಕೈತಪ್ಪಿದರೆ ಕುಟುಂಬದವರನ್ನು ಅಭ್ಯರ್ಥಿ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಶಾಲಾ ಮಕ್ಕಳಿಗೆ ಹಾಲಿನ ಪುಡಿ ಬದಲಿಗೆ ಟೆಟ್ರಾಪ್ಯಾಕ್ ಹಾಲು

ಆದರೆ ಕುಟುಂಬ ರಾಜಕಾರಣವನ್ನು ಅತ್ಯಂತ ಉಗ್ರವಾಗಿ ವಿರೋಧಿಸುವ ಬಿಜೆಪಿ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತದೆಯೇ ಇಲ್ಲವೇ? ಕಾರ್ಯಕರ್ತರನ್ನ ಕಣಕ್ಕಿಳಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

bjp, lobby, family, members, tickets,

Articles You Might Like

Share This Article