ಉಪಚುನಾವಣೆ ಸೋಲು : ಬಿಜೆಪಿ ಸ್ಥಳೀಯ ನಾಯಕರಿಗೆ ಅರುಣ್ ಸಿಂಗ್ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು,ನ.9- ಮುಂಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಎಲ್ಲರೂ ಶ್ರಮವಹಿಸಬೇಕೆಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಥಳೀಯ ನಾಯಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಇಂದು ನಡೆದ ಕೋರ್ ಕಮಿಟಿ ಹಾಗೂ ಪದಾಕಾರಿಗಳ ಸಭೆಯಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ 2023ರ ವಿಧಾನಸಭೆ ಚುನಾವಣೆಗೆ ಇಂದಿನಿಂದಲೇ ಸಜ್ಜಾಗಬೇಕೆಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೋರ್ ಕಮಿಟಿ ಸದಸ್ಯರಾದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಿದ್ದರು.

ದಿನಪೂರ್ತಿ ನಡೆದ ಸಭೆಯಲ್ಲಿ ಪಕ್ಷದ ಸಂಘಟನೆ, ಬಿಬಿಎಂಪಿ ಚುನಾವಣೆ, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆ, ಜಿಲ್ಲಾ ಹಾಗೂ ಪಂಚಾಯತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಜನಾದೇಶ ಸರ್ಕಾರದ ಪರವಾಗಿದೆ ಎಂಬುದನ್ನು ಬಿಂಬಿಸಲು ಮುಂದಾಗಬೇಕೆಂದು ಸೂಚಿಸಿದ್ದಾರೆ.

ಇತ್ತೀಚೆಗೆ ನಡೆದ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲು ನಮ್ಮೆಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಬಿಜೆಪಿಯ ಭದ್ರ ಕೋಟೆಯಲ್ಲೇ ನಾವು ಗೆಲ್ಲಲು ಸಾಧ್ಯವಾಗಿಲ್ಲ ಎನ್ನುವುದಾದರೆ ಕಾರ್ಯಕರ್ತರಿಗೆ ಏನು ಸಂದೇಶ ಹೋಗುತ್ತದೆ ಎಂದು ಅರುಣ್ ಸಿಂಗ್ ಪ್ರಶೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಹಾನಗಲ್ ಚುನಾವಣೆಯ ಗೆಲುವನ್ನು ಕಾಂಗ್ರೆಸ್ ಬಿಜೆಪಿಯ ಜನವಿರೋ ನೀತಿ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಮತದಾರರು ಕೊಟ್ಟಿರುವ ತೀರ್ಪು ಎಂದು ಬಿಂಬಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ತೈಲ ಬೆಲೆ ಇಳಿಕೆ ಮಾಡಿರುವುದನ್ನು ಜನರಿಗೆ ಮನವರಿಕೆ ಮಾಡಿಕೊಡಿ. ಕಾಂಗ್ರೆಸ್‍ನ ಸುಳ್ಳು ಅಪಪ್ರಚಾರಕ್ಕೆ ನೀವು ಕೂಡ ತಕ್ಕ ಉತ್ತರ ನೀಡಬೇಕೆಂದು ಹೇಳಿದ್ದಾರೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ತೆರಿಗೆಯನ್ನು ದೇಶದಲ್ಲೇ ಕಡಿತ ಮಾಡಿದ ಮೊದಲ ರಾಜ್ಯ ಕರ್ನಾಟಕ. ಬಿಜೆಪಿ, ಎನ್‍ಡಿಎ ಮಿತ್ರ ಪಕ್ಷಗಳು ಆಡಳಿತವಿರುವ ರಾಜ್ಯಗಳಲ್ಲಿ ತೈಲ ಬೆಲೆಗಳ ದರವನ್ನು ಇಳಿಕೆ ಮಾಡಿದೆ. ಆದರೆ ಕಾಂಗ್ರೆಸ್ ಹಾಗೂ ಕಾಂಗ್ರೇಸೇತರ ಪಕ್ಷಗಳು ಆಡಳಿತವಿರುವ ರಾಜ್ಯಗಳಲ್ಲಿ ಈ ದರವನ್ನು ಇಳಿಕೆ ಮಾಡಿಲ್ಲ. ಇದನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳಿಗೆ ಎದುರೇಟು ನೀಡಬೇಕೆಂದು ಅರುಣ್ ಸಿಂಗ್ ಪಕ್ಷದ ನಾಯಕರಿಗೆ ನಿರ್ದೇಶನ ನೀಡಿದರು.

ಒಗ್ಗಟ್ಟಿನ ಮಂತ್ರ:
ಬಿಜೆಪಿಯಲ್ಲಿ ಪದೇ ಪದೇ ಭಿನ್ನಮತ, ಅಪಸ್ವರ, ಹಾದಿಬೀದಿಗಳಲ್ಲಿ ಸರ್ಕಾರ ಮತ್ತು ಪಕ್ಷವನ್ನು ಟೀಕೆ ಮಾಡುವ ಪ್ರವೃತ್ತಿ ಸಲ್ಲದು. ಏನೇ ಟೀಕೆ ಟಿಪ್ಪಣಿಗಳಿದ್ದರೂ ಪಕ್ಷದ ವೇದಿಕೆಯಲ್ಲೇ ಮುಖಂಡರ ಗಮನಕ್ಕೆ ತರಬೇಕು. ಪ್ರತಿಯೊಂದಕ್ಕೂ ಮಾಧ್ಯಮಗಳ ಮುಂದೆ ಹೇಳಿಕೆ ಕೊಡುವುದು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಮುಂದಿನ ವರ್ಷ ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದು 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಈ ಎಲ್ಲ ರಾಜ್ಯಗಳಲ್ಲೂ ನಮ್ಮ ಪಕ್ಷವೇ ಗೆಲ್ಲಲು ಈಗಾಗಲೇ ರಣತಂತ್ರ ರೂಪಿಸಲಾಗಿದೆ.

ಇದೇ ರೀತಿ ಕರ್ನಾಟಕದಲ್ಲೂ ನಾವು ಸ್ವಂತ ಬಲದ ಮೇಲೆ ಅಕಾರ ಹಿಡಿಯಬೇಕು. ಇದಕ್ಕೂ ಮುನ್ನ ಮಿನಿ ಮಹಾಸಮರ ಎಂದೇ ಹೇಳುವ ಪ್ರತಿಷ್ಠಿತ ಬೆಂಗಳೂರಿನ ಬಿಬಿಎಂಪಿ ಚುನಾವಣೆಯನ್ನು ಗೆದ್ದು ಸ್ವಂತ ಬಲದ ಮೇಲೆ ಅಕಾರಕ್ಕೆ ಬರಬೇಕು. ಇದಕ್ಕಾಗಿ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಕಿವಿಮಾತು ಹೇಳಿದರು.

ಬಿಬಿಎಂಪಿ ಚುನಾವಣೆಯನ್ನು ಗೆದ್ದು ಅಧಿಕಾರಕ್ಕೆ ಬಂದರೆ ಕರ್ನಾಟಕಕ್ಕೆ ಒಂದು ಸಂದೇಶ ರವಾನೆಯಾಗಲಿದೆ. ಮತದಾರರ ಒಲವು ಬಿಜೆಪಿ ಪರವಾಗಿದೆ ಎಂಬ ವಾತಾವರಣವೂ ನಿರ್ಮಾಣವಾಗಲಿದೆ. ಬೆಂಗಳೂರನ್ನು ಪ್ರತಿನಿಸುವ ಸಚಿವರು, ಶಾಸಕರು, ಪದಾಧಿಕಾರಿಗಳು, ಪಕ್ಷದ ಮುಖಂಡರು ಸೇರಿದಂತೆ ಪ್ರತಿಯೊಬ್ಬರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಬಳಿಗೆ ಕೊಂಡೊಯ್ಯಿ ಎಂದು ಹೇಳಿದ್ದಾರೆ.

ಮುಖ್ಯವಾಗಿ ಸಾಮಾಜಿಕ ಜಾಲತಾಣ, ಪೇಜ್ ಪ್ರಮುಖ್, ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವುದು, ಕಾರ್ಯಕರ್ತರು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ತಿಳಿಸಿದ್ದಾರೆ.

ಯಾರ ನಾಯಕತ್ವದಲ್ಲಿ ಚುನಾವಣೆ ನಡೆಯುತ್ತದೆ ಎಂಬುದು ಅನಗತ್ಯ. ಈಗಾಗಲೇ ಪಕ್ಷದ ವರಿಷ್ಠರೇ ಇದಕ್ಕೇ ಪೂರ್ಣ ವಿರಾಮ ಹಾಕಿದ್ದಾರೆ. ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಬಲಪಡಿಸಬೇಕು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಸೇರಿದಂತೆ ಒಟ್ಟು 4 ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಲಿವೆ.

ಟಿಕೆಟ್‍ಗಾಗಿ ಲಾಬಿ ನಡೆಸುವುದು, ಸಿಂಡಿಕೇಟ್ ಮಾಡಿಕೊಳ್ಳುವುದು, ನಿಮ್ಮ ನಿಮ್ಮ ಹಿಂಬಾಲಕರಿಗೆ ಟಿಕೆಟ್ ಖಾತರಿಪಡಿಸುವ ಅಗತ್ಯವಿಲ್ಲ. ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ನೀಡುತ್ತೇವೆ. ಯಾರೊಬ್ಬರು ಟಿಕೆಟ್ ಖಾತರಿಯನ್ನು ನೀಡಬಾರದೆಂದು ಸೂಚಿಸಿದ್ದಾರೆ.

ಕರ್ನಾಟಕದ ಪ್ರತಿಯೊಂದು ಬೆಳವಣಿಗೆಯನ್ನು ಹೈಕಮಾಂಡ್ ಗಮನಿಸುತ್ತಿದೆ. ಹಾನಗಲ್ ಫಲಿತಾಂಶದ ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿ ಮುಂದೆ ಎಲ್ಲ ಹಂತದ ಚುನಾವಣೆಗಳನ್ನು ಗೆಲ್ಲಬೇಕು. ಪದಾಕಾರಿಗಳ ನೇಮಕಾತಿಯಲ್ಲಿ ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮವಾಗಲಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಅರುಣ್ ಸಿಂಗ್ ಹೇಳಿದ್ದಾರೆ.

ನಾಳೆಯೂ ಕೂಡ ಸಭೆ ಮುಂದುವರೆಯಲಿದ್ದು ಪದಾಧಿಕಾರಿಗಳ ಪಕ್ಷ ಸಂಘಟನೆಯ ಕುರಿತಾಗಿ ಅರುಣ್ ಸಿಂಗ್ ಚರ್ಚೆ ನಡೆಸುವರು.