ಚೆನೈ, ಜು.27- ತಮಿಳುನಾಡು ಸರ್ಕಾರದಿಂದ ಆಯೋಜಿಸಿರುವ 44 ಚೆಸ್ ಒಲಿಂಪಿಯಾಡ್ ಸ್ಪರ್ಧೆಯ ಪ್ರಚಾರದ ಹೋರ್ಡಿಂಗ್‍ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಕೆ ಮಾಡಿದಿರುವ ಕುರಿತು ರಾಜ್ಯ ಬಿಜೆಪಿ ಕಿಡಿಕಾರಿದೆ.
ಬಿಜೆಪಿಯ ಕ್ರೀಡೆ, ಕೌಶಲ್ಯಾಭಿವೃದ್ಧಿ ಕೋಶದ ಅಧ್ಯಕ್ಷ ಅಮರ್ ಪ್ರದ್ದ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಚೆನೈನಾದ್ಯಂತ ಬಸ್ ನಿಲ್ದಾಣ ಹಾಗೂ ಇತರ ಕಡೆ ಹಾಕಲಾಗಿರುವ ಹೋರ್ಡಿಂಗ್‍ಗಳಲ್ಲಿ ಪ್ರಧಾನಿ ಅವರ ಭಾವಚಿತ್ರವನ್ನು ಅಂಟಿಸಿದ್ದಾರೆ.
ಈ ಕುರಿತು ಟ್ವಿಟರ್‍ನಲ್ಲಿ ನಿನ್ನೆ ವಿಡಿಯೋ ಹಂಚಿಕೊಂಡಿರುವ ಪ್ರಸಾದ್ ರೆಡ್ಡಿ, ಡಿಎಂಕೆ ಆಡಳಿತದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಇಲ್ಲದೆ ಚೆಸ್ ಕ್ರೀಡಾಕೂಟ ಆಯೋಜಿಸುವ ಮೂಲಕ ದೊಡ್ಡ ಲೋಪ ಮಾಡಲಾಗಿದೆ. ಒಲಂಪಿಯಾಡ್ ಡಿಎಂಕೆ ಪಕ್ಷದ ಕಾರ್ಯಕ್ರಮ ಅಥವಾ ರಾಜ್ಯಮಟ್ಟದ ಕ್ರೀಡೆಯಲ್ಲ ಅಂತರ ರಾಷ್ಟ್ರೀಯ ಸ್ಪರ್ಧೆ. ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಪ್ರಧಾನಿ ಅವರ ಭಾವಚಿತ್ರ ಕಡ್ಡಾಯವಾಗಿ ಇರಬೇಕು ಎಂದು ಹೇಳಿದ್ದಾರೆ.
ತಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲಾ ಕಡೆ ಹಾಕಲಾಗಿರುವ ಹೋರ್ಡಿಂಗ್‍ಗಳಲ್ಲಿ ಪ್ರಧಾನಿ ಭಾವಚಿತ್ರ ಅಂಟಿಸಬೇಕು. ಅಧಿಕಾರಿಗಳು ಮತ್ತು ಸಂಬಂಧಿಕರು ಭಾವಚಿತ್ರ ಅಂಟಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ತಮಿಳುನಾಡಿನ ಮಲ್ಲಪುರಂನಲ್ಲಿ ಜುಲೈ 28ರಿಂದ ಆರಂಭವಾಗುವ ಚೆಸ್ ಒಲಂಪಿಯಾಡ್ ಆಗಸ್ಟ್ 10ರವರೆಗೂ ನಡೆಯಲಿದೆ. ಇದಕ್ಕಾಗಿ ರಾಜ್ಯ ಸರ್ಕಾರ 92.13 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.