ಬಿಜೆಪಿ ಚಿಂತನ-ಮಂಥನ ಸಭೆ: ಸಂಘಟನಾತ್ಮಕ ಸಭೆಯೋ, ಸಂಪುಟ ಸರ್ಜರಿಯೋ..?

Social Share

ಬೆಂಗಳೂರು,ಜ.3- ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲಿಯೂ ರಾಜ್ಯ ಬಿಜೆಪಿ ನಿರೀಕ್ಷಿತ ಸಾಧನೆ ತೋರುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಹೈಕಮಾಂಡ್ ರಂಗಪ್ರವೇಶಕ್ಕೆ ಸಜ್ಜಾಗಿದೆ. ಉತ್ತರ ಭಾರತದ ರಾಜ್ಯಗಳತ್ತ ಚಿತ್ತ ಹರಿಸಿದ್ದ ಬಿಜೆಪಿ ವರಿಷ್ಠರು ಇದೀಗ ಕರ್ನಾಟಕದಲ್ಲಿ ಪಕ್ಷದ ಸಾಧನೆಗೆ ಅಸಮಾಧಾನಗೊಂಡಿದ್ದು, ಕಡೆಗೂ ದಕ್ಷಿಣ ಭಾರತದ ಹೆಬ್ಬಾಗಿಲ ಕಡೆ ದೃಷ್ಟಿ ಹರಿಸಿ ಎರಡು ದಿನಗಳ ಚಿಂತನ-ಮಂಥನಕ್ಕೆ ಸಜ್ಜಾಗಿದ್ದಾರೆ.
ಪಕ್ಷ ಸಂಘಟನೆ, ಇತ್ತೀಚಿನ ಚುನಾವಣೆಗಳಲ್ಲಾದ ಹಿನ್ನೆಡೆಗೆ ಕಾರಣ, ಸಂಪುಟದಲ್ಲಿ ಬದಲಾವಣೆ ಸೇರಿದಂತೆ ಹಲವು ವಿಷಯಗಳ
ಕುರಿತು ಮಹತ್ವದ ಚರ್ಚೆ ನಡೆಯಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಜನವರಿ 8 ಮತ್ತು 9 ರಂದು ಎರಡು ದಿನಗಳ ಕಾಲ ರಾಜ್ಯ ಬಿಜೆಪಿಯ ಚಿಂತನ-ಮಂಥನ ಸಭೆ ಆಯೋಜಿಸಲಾಗಿದೆ.
ಬೆಂಗಳೂರು ಹೊರವಲಯದ ನಂದಿಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಪುಟ ಸಹೋದ್ಯೋಗಿಗಳು, ರಾಜ್ಯ ಪದಾಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾದ ನಂತರ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷದ ಹಾಗೂ ಸ್ವತಃ ಮುಖ್ಯಮಂತ್ರಿ ತವರು ಜಿಲ್ಲೆಯಲ್ಲಿಯೇ ಆಗಿರುವ ಹಿನ್ನೆಡೆ ವರಿಷ್ಠರ ನಿದ್ದೆಗೆಡಿಸಿದೆ. ಹಾನಗಲ್ ಉಪ ಚುನಾವಣೆಯಲ್ಲಿ ಸೋಲುವ ಜೊತೆಗೆ ಅಲ್ಲಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿಯೂ ಸೋತಿರುವುದು ಬೊಮ್ಮಾಯಿ ನಾಯಕತ್ವದ ಮೇಲೆ ಅನುಮಾನ ವ್ಯಕ್ತವಾಗುವಂತೆ ಮಾಡಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಸ್ರ್ಪಸಿ ಗೆದ್ದಿದ್ದು ಕೇವಲ 11 ಸ್ಥಾನ. ಪ್ರತಿಪಕ್ಷ ಕಾಂಗ್ರೆಸ್ ಕೂಡ 11 ಸ್ಥಾನಗಳನ್ನು ಗೆದ್ದಿದೆ. ಆಡಳಿತಾರೂಢ ಪಕ್ಷವಾದರೂ ಪ್ರತಿಪಕ್ಷದಷ್ಟೇ ಸ್ಥಾನ ಗಳಿಸಿರುವುದು ರಾಜ್ಯದಲ್ಲಿ ಬಿಜೆಪಿ ವರ್ಚಸ್ಸು ಕುಗ್ಗುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ. ಅದರಲ್ಲಿಯೂ ಬೆಳಗಾವಿ ಮತ್ತು ಮೈಸೂರಿನ ದ್ವಿಸದಸ್ಯ ಕ್ಷೇತ್ರದಲ್ಲಿಯೇ ಪಕ್ಷ ಸೋತಿರುವುದು ಹೈಕಮಾಂಡ್‍ಗೆ ಅಚ್ಚರಿಯಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ಆತಂಕಕ್ಕೊಳಗಾಗಿರುವ ಹೈಕಮಾಂಡ್ ಇದೀಗ ರಂಗಪ್ರವೇಶ ಮಾಡುತ್ತಿದೆ. ಎರಡು ದಿನಗಳ ಕಾಲ ನಡೆಯಲಿರುವ ಸಭೆಯಲ್ಲಿ ಪಕ್ಷ ಸಂಘಟನೆ ವಿಷಯಕ್ಕೆ ಮೊದಲ ಆದ್ಯತೆ ನೀಡಲಿದ್ದು, ನಂತರ ಸೋಲು, ಹಿನ್ನೆಡೆಗಳ ಕುರಿತು ಆತ್ಮಾವಲೋಕನ ನಡೆಸಲಾಗುತ್ತದೆ.
ಪಕ್ಷ ಎಲ್ಲಿ ಎಡವಿದೆ. ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಕೊರತೆ ಇದೆಯಾ ಎನ್ನುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.
ಭವಿಷ್ಯದ ಚುನಾವಣಾ ದೃಷ್ಠಿಯಿಂದ ಏನೆಲ್ಲಾ ಬದಲಾವಣೆಗಳನ್ನು ಮಾಡಬೇಕಾಗಲಿದೆ ಎನ್ನುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ.
2023ಕ್ಕೆ ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪ್ರಸಕ್ತ ಸಾಲಿನ ಡಿಸೆಂಬರ್‍ವರೆಗೆ ಮಾತ್ರ ಸಾಧನೆ ಮಾಡಲು ಅವಕಾಶವಿದೆ. ಹಾಗಾಗಿ ಇದನ್ನೇ ಚುನಾವಣಾ ವರ್ಷವನ್ನಾಗಿಸಿಕೊಂಡು ಯಾವ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದು ಹೈಕಮಾಂಡ್ ನಾಯಕರು ರಾಜ್ಯ ಘಟಕಕ್ಕೆ ಟಾಸ್ಕ್ ನೀಡಲಿದ್ದಾರೆ.
ಸಂಘಟನಾತ್ಮಕ ಚಟುವಟಿಕೆ ಮತ್ತು ಸರ್ಕಾರದ ಕಾರ್ಯವೈಖರಿ ಹೇಗಿರಬೇಕು ಎನ್ನುವ ಕುರಿತ ಟಾಸ್ಕ್ ಇದಾಗಿರಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸಚಿವರ ಕಾರ್ಯಕ್ಷಮತೆ ಕುರಿತು ಹೈಕಮಾಂಡ್ ನಾಯಕರು ಖಾಸಗಿ ಏಜೆನ್ಸಿ ಮೂಲಕ ಸಮೀಕ್ಷೆ ನಡೆಸಿ ವರದಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕಳಪೆ ಸಾಧನೆ ತೋರಿದ ಸಚಿವರಿಗೆ ಕೋಕ್ ನೀಡಿ ಯುವ ಉತ್ಸಾಹಿ ನಾಯಕರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಸದ್ಯ ಖಾಲಿ ಇರುವ 4 ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳುವ ಜೊತೆಗೆ ಕಳಪೆ ಸಾಧನೆ ತೋರಿರುವ ಕೆಲವರನ್ನು ಸಂಪುಟದಿಂದ ಕೈಬಿಡುವುದು ಹಾಗೂ ಪಕ್ಷ ಸಂಘಟನೆಗೆ ಕೆಲ ಹಿರಿಯರನ್ನು ಬಳಸಿಕೊಳ್ಳಲು ಕೆಲವರಿಂದ ರಾಜೀನಾಮೆ ಪಡೆದು ಆ ಸ್ಥಾನಗಳಿಗೆ ಚುನಾವಣೆಗೆ ಪೂರಕವಾಗಲಿರುವ ನಾಯಕರಿಗೆ ಅವಕಾಶ ನೀಡಬೇಕು ಎನ್ನುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ ಎನ್ನಲಾಗಿದೆ.
ಶ್ರೀರಾಮುಲುಗೆ ಡಿಸಿಎಂ ಸ್ಥಾನ:
ಕಳೆದ ಬಾರಿಯ ಚುನಾವಣೆಯಲ್ಲಿ ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುವ ಘೋಷಣೆ ಮಾಡಲಾಗಿತ್ತಾದರೂ ಅಧಿಕಾರಕ್ಕೆ ಬಂದ ನಂತರ ಅವರನ್ನು ಕೇವಲ ಸಚಿವರನ್ನಾಗಿ ಮಾಡಲಾಗಿದೆ. ಯಡಿಯೂರಪ್ಪ ಅಧಿವಯಲ್ಲಿ ಮೂವರು ಡಿಸಿಎಂಗಳನ್ನು ಮಾಡಿದರೂ ಅದರಲ್ಲಿ ಶ್ರೀರಾಮುಲುಗೆ ಅವಕಾಶ ನೀಡಿರಲಿಲ್ಲ. ನಾಯಕತ್ವ ಬದಲಾವಣೆ ನಂತರ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಡಿಸಿಎಂ ಸ್ಥಾನವನ್ನು ಯಾರಿಗೂ ನೀಡಲಾಗಿಲ್ಲ.
ಈಗ ಚುನಾವಣಾ ವರ್ಷವಾಗಿರುವ ಕಾರಣ ಕೊಟ್ಟ ಮಾತಿನಂತೆ ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಕೊಡಬೇಕು ಇಲ್ಲದೇ ಇದ್ದಲ್ಲಿ ವಾಲ್ಮೀಕಿ ಸಮುದಾಯದ ಮತಗಳು ಬಿಜೆಪಿ ಕೈತಪ್ಪಲಿವೆ ಎಂಬ ಆತಂಕ ಎದುರಾಗಿದೆ. ಹಾಗಾಗಿ ಇದೀಗ ಹೈಕಮಾಂಡ್ ಯಾವ ರೀತಿ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Articles You Might Like

Share This Article