ಬೆಂಗಳೂರು,ಜು.15- ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಇಂದು ಮಹತ್ವದ ಚಿಂತನಾ ಸಭೆ ನಡೆಸಿದೆ. ಪ್ರತಿಪಕ್ಷ ಕಾಂಗ್ರೆಸ್ ಆ.3ರಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಬೃಹತ್ ಸಮಾವೇಶಕ್ಕೆ ಪರ್ಯಾಯವಾಗಿ ಬಿಜೆಪಿ ಕೂಡ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ ಸಮಾವೇಶ ನಡೆಸಬೇಕೆಂಬ ಅಭಿಪ್ರಾಯ ಸಭೆಯಲ್ಲಿ ಕೇಳಿಬಂದಿದೆ.
ದೇವನಹಳ್ಳಿ ಸಮೀಪ ಇರುವ ಜೆಡಬ್ಲ್ಯು ಮ್ಯಾರಿಯೆಟ್ ಪ್ರೆಸ್ಟೀಜ್ ಗಾಲ್ ಶೈರ್ ರೆಸಾರ್ಟ್‍ನಲ್ಲಿ ಬಿಜೆಪಿ ನಾಯಕರು ಮತ್ತು ಆರ್‍ಎಸ್‍ಎಸ್ ಪ್ರಮುಖರನ್ನೊಳಗೊಂಡ ಸಭೆಯಲ್ಲಿ , ಪಕ್ಷ ಸಂಘಟನೆ ಹಾಗೂ ಚುನಾವಣೆಯಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಮಾತುಕತೆ ನಡೆಸಲಾಗಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ , ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಆರ್‍ಎಸ್‍ಎಸ್ ಸಹ ಕಾರ್ಯವಾಹಕ ಮುಕುಂದ್, ಕ್ಷೇತ್ರೀಯ ಸಂಘ ಚಾಲಕ ವಿ.ನಾಗರಾಜ್, ಕ್ಷೇತ್ರೀಯ ಪ್ರಚಾರಕ ಸುೀರ್, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಭಾಗವಹಿಸಿದ್ದರು.
ಸರ್ಕಾರದ ಮೇಲೆ ಕೇಳಿಬಂದಿರುವ ಕೆಲವು ಗಂಭೀರ ಆರೋಪಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದ್ದು, ಪಕ್ಷ ಸಂಘಟನೆ ಹಾಗೂ ಸರ್ಕಾರದ ವರ್ಚಸ್ಸು ಹೆಚ್ಚಿಸುವ ಯೋಜನೆಗಳನ್ನು ಅನುಷ್ಠಾನ ಮಾಡಬೇಕೆಂದು ಸಂಘ ಪರಿವಾರದ ಹಿರಿಯ ನಾಯಕರು ಸಲಹೆ ಮಾಡಿದ್ದಾರೆ.
ವಿಧಾನಸಭೆ ಚುನಾವಣೆಗೆ ಎಂಟು ತಿಂಗಳು ಬಾಕಿ ಉಳಿದಿರುವುದರಿಂದ ಚುನಾವಣೆಗೆ ಸಿದ್ಧತೆ ಹಾಗೂ ತಂತ್ರಗಾರಿಕೆ ರೂಪಿಸುವ ನಿಟ್ಟಿನಲ್ಲಿ ಹಾಗೂ ಸದ್ಯ ರಾಜ್ಯದ ರಾಜಕೀಯ ಪರಿಸ್ಥಿತಿ ಹಾಗೂ ಮುಂದೆ ಆಗಬಹುದಾದ ಬದಲಾವಣೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷ ಹಾಗೂ ಸರ್ಕಾರದ ನಡುವಿನ ಸಮನ್ವಯತೆ, ಸರ್ಕಾರದ ಯೋಜನೆ ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರ ಪಾತ್ರ, ಇತ್ತೀಚಿನ ಚುನಾವಣಾ ಫಲಿತಾಂಶದ ಪರಿಣಾಮ, ಭವಿಷ್ಯದ ಚುನಾವಣೆಗಳಿಗೆ ಪಕ್ಷ ಸನ್ನದ್ದಗೊಳಿಸುವುದು ಸೇರಿದಂತೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದ್ದಾರೆ.
ಆಂತರಿಕ ಸಮೀಕ್ಷೆಗಳನ್ನು ಮುಂದಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಪಕ್ಷ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಬಲವರ್ಧನೆ ಬಹುಮುಖ್ಯವಾಗಿದ್ದು, ಅದರಲ್ಲೂ ಹಳೆ ಮೈಸೂರು ಭಾಗದ ಜಿಲ್ಲೆಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಅಲ್ಲಿ ಪಕ್ಷವನ್ನು ವಿಸ್ತರಣೆ ಮಾಡುವುದು ಹಾಗೂ ಮತದಾರರ ಗಮನ ಸೆಳೆಯಲು ಕೈಗೊಳ್ಳಬೇಕಾಗಿರುವ ಕ್ರಮಗಳು ಹಾಗೂ ತಂತ್ರಗಾರಿಕೆಯ ಬಗ್ಗೆ ವಿಸ್ತೃತವಾಗಿ ನಾಯಕರು ಚರ್ಚೆ ನಡೆಸಿದ್ದಾರೆ.
ಇಂದು ಒಟ್ಟು ಮೂರು ಸಭೆಗಳನ್ನು ನಡೆಸಲಾಯಿತು. ಮೊದಲ ಕೋರ್ ಕಮಿಟಿ ಸಭೆಯಲ್ಲಿ ಪಕ್ಷವು ಯಾವ ಯಾವ ಜಿಲ್ಲೆಗಳಲ್ಲಿ ಸಂಘಟನೆ ಕೊರತೆ ಎದುರಿಸುತ್ತಿದೆಯೋ ಅಂತಹ ಕಡೆ ಮತ್ತಷ್ಟು ಬಲಪಡಿಸುವ ಕುರಿತು ಮತ್ತಷ್ಟು ಸಲಹೆಗಳನ್ನು ನೀಡಲಾಗಿದೆ.
ಎರಡನೇ ಹಂತದಲ್ಲಿ ಸಚಿವರ ಸಭೆಯಲ್ಲಿ ಸಚಿವರ ವರ್ಷದ ಸಾಧನೆ, ಇಲಾಖೆಯಲ್ಲಿನ ಪ್ರಗತಿ, ಜನಪ್ರೀಯತೆ ಕುರಿತು ಸಮಾಲೋಚನೆ ನಡೆಸಿ, ಹೈಕಮಾಂಡ್‍ನಿಂದ ಕೆಲವೊಂದು ಸಂದೇಶ ಹೊತ್ತು ಬಂದಿರುವ ಸಂತೋಷ್ ಅವರು ಸಚಿವರಿಗೆ ಕೆಲ ಟಾಸ್ಕ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೂರನೇ ಹಂತದ ಆರ್‍ಎಸ್‍ಎಸ್-ಬಿಜೆಪಿ ನಾಯಕರ ಸಭೆಯಲ್ಲಿ ಇತ್ತೀಚೆಗಿನ ಹಿಜಾಬ್ ವಿವಾದ, ಮಸೀದಿ ಆಜಾನ್ ವಿವಾದ, ದೇಗುಲ ಮಸೀದಿ ವಿಚಾರದಲ್ಲಿ ಪಕ್ಷ ಇಟ್ಟ ಹೆಜ್ಜೆ ಕುರಿತು ಅವಲೋಕಿಸಲಾಗಿದ್ದು, ಬಹುತೇಕ ಚುನಾವಣಾ ಅಜೆಂಡಾವನ್ನು ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.