ಬಿಜೆಪಿ ಬಿಡಲಾರೆ, ಗೋವಿಂದರಾಜನಗರದಿಂದಲೇ ಸ್ಪರ್ಧೆ : ಸೋಮಣ್ಣ

Social Share

ಬೆಂಗಳೂರು,ಮಾ.7-ಪಕ್ಷದ ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಅಸಮಾಧಾನ ಗೊಂಡಿರುವ ವಸತಿ ಸಚಿವ ಹಾಗೂ ವೀರಶೈವ ಲಿಂಗಾಯಿತ ಸಮುದಾಯದ ಪ್ರಭಾವಿ ಮುಖಂಡ ವಿ.ಸೋಮಣ್ಣ ಬಿಜೆಪಿ ಬಿಡದೆ ಮುಂದುವರೆಯುವ ದೃಢ ನಿರ್ಧಾರಕ್ಕೆ ಬಂದಿದ್ದಾರೆ.

ತಮಗೆ ಏನೇ ಅಸಮಾಧಾನ, ಅಪಮಾನ, ಅವಮಾನಗಳಿದ್ದರೆ ಬಿಜೆಪಿ ಮುಖಂಡರ ಜೊತೆ ಚರ್ಚಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಂಡು ಚುನಾವಣೆಯಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯುವ ಒಮ್ಮತದ ನಿರ್ಧಾರ ಮಾಡಿದ್ದಾರೆ.

ಪಕ್ಷದೊಳಗೆ ತಮ್ಮ ಹಿರಿತನಕ್ಕೆ ಬೆಲೆ ಕೊಡದೆ ಕೆಲವರು ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸುತ್ತಿರುವುದರಿಂದಲೇ ಅಸಮಾಧಾನಗೊಂಡಿರುವ ಸೋಮಣ್ಣ, ಇನ್ನು ಎಷ್ಟು ದಿನ ಅಪಮಾನ ಹಾಗೂ ಅವಮಾನವನ್ನು ಸಹಿಸಿಕೊಂಡು ಬಿಜೆಪಿಯಲ್ಲಿ ಮುಂದುವರೆಯಬೇಕೆಂದು ತಮ್ಮ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ.

ಬಿಜೆಪಿ ಆರಂಭಿಸಿರುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಸೋಮಣ್ಣ ಅವರನ್ನು ಕೇವಲ ಚಾಮರಾಜನಗರಕ್ಕೆ ಸೀಮಿತಗೊಳಿಸಿ ಪಕ್ಷದಲ್ಲಿ ಅವರಿಗಿಂತಲೂ ಹಿರಿಯರಾದ ಕಿರಿಯರಿಗೆ ಸೂಕ್ತ ಸ್ಥಾನಮಾನ ನೀಡಿರುವುದು ಅಸಮಾಧಾನಕ್ಕೆ ಮೂಲ ಕಾರಣ.

ಮಾಡಾಳ್ ಮಿಸ್ಸಿಂಗ್ : ಹುಡುಕಿಕೊಡುವಂತೆ ಕಾಂಗ್ರೆಸ್ ಪೋಸ್ಟರ್ ಪಾಲಿಟಿಕ್ಸ್

ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರಿಗೆ ವಿಜಯ ಸಂಕಲ್ಪ ಯಾತ್ರೆಗೆ ಸಂಚಾಲಕರನ್ನಾಗಿ ನೇಮಿಸಿದ್ದು , ಬಿ.ವೈ.ವಿಜಯೇಂದ್ರಗೆ ಮೋರ್ಚಾಗಳ ಉಸ್ತುವಾರಿ ನೀಡಿರುವುದರಿಂದ ತಮ್ಮ ನಾಯಕತ್ವವನ್ನು ಪಕ್ಷ ಸೂಕ್ತವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಅಸಮಾಧಾನ ಅವರಿಗಿದೆ.

ಕಡೆಪಕ್ಷ ತಮ್ಮ ಹಿರಿತನಕ್ಕಾದರೂ ಪಕ್ಷದಲ್ಲಿ ಬೆಲೆ ಕೊಡುತ್ತಿಲ್ಲ. ಕಿರಿಯರಿಗೆ ಸೂಕ್ತ ಸ್ಥಾನಮಾನ ನೀಡಲಾಗುತ್ತಿದೆ. ತಮ್ಮನ್ನು ಯಾವ ಕಾರಣಕ್ಕಾಗಿ ಇಷ್ಟೊಂದು ಕಡೆಗಣಿಸಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

ಹಣ ಖರ್ಚು ಮಾಡಲು ಕಾರ್ಯಕರ್ತರನ್ನು ಸೇರಿಸಲು, ಕುರ್ಚಿ ಹಾಕಲು ನಾವು ಬೇಕು, ಪಕ್ಷದಲ್ಲಿ ನಮಗೆ ಸ್ಥಾನಮಾನ ಸಿಗದಿದ್ದರೆ ಹೇಗೆ? ಅಂಥ ತಪ್ಪು ಏನು ಮಾಡಿದ್ದೇನೆ ಎಂದು ತಮ್ಮ ಬೆಂಬಲಿಗರ ಬಳಿ ಹೇಳಿಕೊಂಡಿದ್ದಾಗಿ ತಿಳಿದುಬಂದಿದೆ.

ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ಭಾಗಿಯಾಗಿದ್ದರು. ಆದರೆ ಚಾಮರಾಜನಗರ ಉಸ್ತುವಾರಿ ಸಚಿವ ವಿ.ಸೋಮಣ್ಣ ಗೈರು ಆಗಿರೋದು ಹಲವು ಅನುಮಾನಗಳಿಗೆ ಕಾರಣವಾಗಿತ್ತು.

ಚಾಮರಾಜನಗರ ಉಸ್ತುವಾರಿಯಾಗಿರುವ ವಿ.ಸೋಮಣ್ಣ ಇಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೆಂಗಳೂರಿನವರು ಆದರೂ ಸ್ಥಳೀಯವಾಗಿ ತಮ್ಮದೇ ಆದ ಪ್ರಾಬಲ್ಯ ಹೊಂದಿರುವ ಸೋಮಣ್ಣ ಚಾಮರಾಜನಗರದಲ್ಲೂ ತಮ್ಮದೇ ಕಾರ್ಯಕರ್ತರನ್ನು ಹೊಂದಿದ್ದಾರೆ.

ಚಾಮರಾಜನಗರ ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ವಿವಿಧ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿಯೂ ತಮ್ಮನ್ನ ಗಣನೆಗೆ ತೆಗೆದುಕೊಂಡಿಲ್ಲ ಎಂಬ ಅಸಮಾಧಾನ ವಿ.ಸೋಮಣ್ಣ ಅವರಿಗಿದೆ. ಇತ್ತ ಈ ಬಾರಿ ಚಾಮರಾಜಗರದಲ್ಲಿ ಪ್ರಬಲ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಕೆಆರ್ ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಅವರನ್ನು ಕ್ಷೇತ್ರಕ್ಕೆ ಕಳುಹಿಸಿ ಪ್ರಚಾರ ಮಾಡಿಸಲಾಗುತ್ತಿದೆ. ಹೈಕಮಾಂಡ್ ಒಪ್ಪಿಗೆ ನೀಡಿದರೆ ವಿ.ಸೋಮಣ್ಣ ಚಾಮರಾಜನಗರದಲ್ಲಿ ಸ್ಪರ್ಧೆ ನಡೆಸಲು ಸಿದ್ಧರಾಗಿದ್ದರು.

ಚಾಮರಾಜನಗರದಲ್ಲಿ ತಾವು ಸ್ರ್ಪಸಿ ಗೋವಿಂದರಾಜನಗರ ಕ್ಷೇತ್ರವನ್ನು ತಮ್ಮ ಪುತ್ರ ಅರುಣ್ ಸೋಮಣ್ಣ ಅವರಿಗೆ ಬಿಟ್ಟು ಕೊಡುವ ನಿರ್ಧಾರ ಮಾಡಿದ್ದರು, ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಂ.ರುದ್ರೇಶ್ ಚಾಮರಾಜನಗರ ಕ್ಷೇತ್ರದಲ್ಲಿ ಸಕ್ರಿಯರಾಗಿರುವುದು ವಿ.ಸೋಮಣ್ಣ ಅವರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ವಿಜಯ ಸಂಕಲ್ಪ ಯಾತ್ರೆಯ ಈ ಕಾರ್ಯಕ್ರಮದ ಉಸ್ತುವಾರಿಯನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ವಹಿಸಲಾಗಿದೆ. ತಾವು ಉಸ್ತುವಾರಿ ಇರುವಾಗ ಹೊರ ಜಿಲ್ಲೆಯವರಿಗೆ ಉಸ್ತುವಾರಿ ನೀಡಲಾಗಿದೆ. ಆ ಮೂಲಕ ತಮ್ಮನ್ನು ಕಡೆಗಣಿಸಲಾಗಿದೆ ಎಂಬುದು ಅವರ ನೋವು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್, ಜಾಮೀನು ಮಂಜೂರು

ನಿರ್ಲಕ್ಷಕ್ಕೆ ಮುನಿಸು:
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ವಿ. ಸೋಮಣ್ಣ ಮುನಿಸಿಕೊಂಡು ಅರ್ಧಕ್ಕೆ ಕಾರ್ಯಕ್ರಮದಿಂದ ವಾಪಸ್ ತೆರಳಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
ವಿಜಯ ಸಂಕಲ್ಪ ಯಾತ್ರೆಯಲ್ಲಿ ಸ್ವಲ್ಪ ದೂರ ಸಾಗಿದ ಸೋಮಣ್ಣ, ನನಗೆ ಬೇರೆ ಕೆಲಸವಿದೆ ಎಂದು ತೆರಳಿದ್ದರು. ನಂತರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸೋಮಣ್ಣ ಜೊತೆಗೆ ಮಾತನಾಡಿ ಮುನಿಸನ್ನು ತಣಿಸಿದರು ಎಂದು ಹೇಳಾಗಿದೆ.

ಇತ್ತೀಚೆಗೆ ಸೋಮಣ್ಣ ಮನೆಗೆ ಭೇಟಿ ಕೊಟ್ಟಿದ್ದ ಅಮಿತ್ ಶಾ ವಿ.ಸೋಮಣ್ಣ ಅಸಮಧಾನದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿ. ಸೋಮಣ್ಣ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಈ ಭೇಟಿ ಅಸಮಾಧಾನ ಹೋಗಲಾಡಿಸುವ ಭಾಗವೇ ಆಗಿತ್ತು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಚುನಾವಣಾ ಹೊಸ್ತಿಲಲ್ಲೇ ಕಮಲದಲ್ಲಿ ಪ್ರಭಾವಿ ನಾಯಕನ ಭಿನ್ನಾಭಿಪ್ರಾಯ ಸಾಕಷ್ಟು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಬಿಜೆಪಿ ಹಾಲಿ ಶಾಸಕರಿಗೆ ಟಿಕೆಟ್ ಫಿಕ್ಸ್ : ಯಡಿಯೂರಪ್ಪ

ಗೋವಿಂದರಾಜನಗರದಿಂದಲೇ ಸ್ಪರ್ಧೆ:
ತಮ್ಮೆಲ್ಲ ಅಸಮಾಧಾನಗಳನ್ನು ಮರೆತು ವಿ.ಸೋಮಣ್ಣ ಅವರು ಬರಲಿರುವ ಚುನಾವಣೆಯಲ್ಲಿ ಗೋವಿಂದರಾಜನಗರದಿಂದಲೇ ಸ್ಪರ್ಧೆ ಮಾಡಲಿದ್ದಾರೆ. ಇನ್ನು ಈ ಕ್ಷೇತ್ರದಿಂದ ಪುತ್ರ ಡಾ.ಅರುಣ್ ಸೋಮಣ್ಣ ಸ್ರ್ಪಸಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.

ತಮಗಿನ್ನು ರಾಜಕೀಯದಲ್ಲಿ ಭವಿಷ್ಯ ಇರುವುದರಿಂದ ಈ ಬಾರಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ತಂದೆಯ ಗೆಲುವಿಗೆ ಶ್ರಮಿಸುತ್ತೇನೆ. ನಾನು ಗೋವಿಂದರಾಜನಗರ ಅಕಾಂಕ್ಷಿಯಲ್ಲ ಎಂದು ಬೆಂಬಲಿಗರಿಗೆ ಅರುಣ್ ಸೋಮಣ್ಣ ಹೇಳಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

BJP, Minister, Somanna,

Articles You Might Like

Share This Article