ಕರ್ನಾಟಕದಲ್ಲೂ ಯುಪಿ ಮಾದರಿ, ಕೆಲ ಬಿಜೆಪಿ ಶಾಸಕರಿಗೆ ಕೈತಪ್ಪಲಿದೆ ಟಿಕೆಟ್..!

Social Share

ಬೆಂಗಳೂರು,ಜು.14- ಮುಂಬರುವ 2023ರ ವಿಧಾನಸಭೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಬಿಜೆಪಿ ವರಿಷ್ಠರು ಕ್ಷೇತ್ರದಲ್ಲಿ ಮತದಾರರ ಅವಕೃಪೆಗೆ ಒಳಗಾಗಿರುವ ಕೆಲವು ಶಾಸಕರಿಗೆ ಕೋಕ್ ನೀಡುವ ತೀರ್ಮಾನಕ್ಕೆ ಬಂದಿದ್ದಾರೆ.

ಉತ್ತರ ಪ್ರದೇಶ, ಉತ್ತರಖಾಂಡ್, ಮಣಿಪುರ ಮತ್ತು ಗೋವಾ ವಿಧಾನಸಭೆ ಚುನಾವಣೆ ವೇಳೆ ಕೆಲವು ಶಾಸಕರು ಮತದಾರರ ಆಕ್ರೋಶಕ್ಕೆ ಗುರಿಯಾಗಿದ್ದರು. ಹೀಗಾಗಿ ಅಂತಹವರಿಗೆ ಟಿಕೆಟ್ ನೀಡದೆ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು.
ಚುನಾವಣೆಯಲ್ಲಿ ಪಕ್ಷದ ಈ ಪ್ರಯೋಗ ಯಶಸ್ವಿಯಾಗಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬಂತು.

ಈಗ ಇದೇ ಮಾದರಿಯನ್ನು ಕರ್ನಾಟಕದಲ್ಲೂ ಅಳವಡಿಸಲು ಕೇಂದ್ರ ನಾಯಕರು ಚಿಂತನೆ ನಡೆಸಿದ್ದು, ಯಾವ ಯಾವ ಶಾಸಕರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡದೆ ಸೋಲುವ ಭೀತಿಯಲ್ಲಿದ್ದಾರೋ ಅಂತಹವರಿಗೆ ಟಿಕೆಟ್ ಕೊಡಬಾರದೆಂಬ ಗಟ್ಟಿ ನಿರ್ಧಾರಕ್ಕೆ ಬಂದಿದ್ದಾರೆ.

ಸಾಮಾನ್ಯವಾಗಿ ಯಾವುದೇ ಚುನಾವಣೆ ಬಂದರೂ ಬಿಜೆಪಿ ತನ್ನದೇ ಆದ ಆಂತರಿಕ ಮೂಲದಿಂದ ಸಮೀಕ್ಷೆ ನಡೆಸುತ್ತದೆ. ಅತ್ಯಂತ ನಂಬಿಕಸ್ತ ಸಂಸ್ಥೆಗಳಿಂದ ಸಮೀಕ್ಷೆ ನಡೆಸಿ ಇದರ ಆಧಾರದ ಮೇಲೆಯೇ ಚುನಾವಣಾ ತಂತ್ರವನ್ನು ರೂಪಿಸಲಿದೆ.

2014ರಿಂದ ಈವರೆಗೂ ನಡೆದ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮೂರು ಸಂಸ್ಥೆಗಳಿಂದ ಸಮೀಕ್ಷೆ ನಡೆಸಿಯೇ ಯಾವ ಯಾವ ಕ್ಷೇತ್ರಗಳಲ್ಲಿ ಯಾರ್ಯಾರಿಗೆ ಟಿಕೆಟ್ ಕೊಡಬಾರದು, ಯಾರಿಗೆ ಟಿಕೆಟ್ ನೀಡಿದರೆ ಗೆಲುವು ಸಾಧಿಸುತ್ತಾರೆ ಎಂಬುದರ ಮೇಲೆ ಟಿಕೆಟ್ ನಿರ್ಧಾರವಾಗುತ್ತದೆ.

ಇದೇ ರೀತಿ ಕರ್ನಾಟಕದಲ್ಲೂ ಒಂದು ಡಜನ್‍ಗೂ ಅಧಿಕ ಬಿಜೆಪಿ ಶಾಸಕರು ಸೋಲುವ ಸಾಧ್ಯತೆ ಇದ್ದು, ಇವರ ಬದಲು ಬೇರೊಬ್ಬರಿಗೆ ಟಿಕೆಟ್ ನೀಡಿದರೆ ಗೆಲ್ಲುವ ಸಾಧ್ಯತೆ ಇದೆ ಎಂದು ಆಂತರಿಕ ಸಂಸ್ಥೆಯಲ್ಲಿ ಗೊತ್ತಾಗಿದೆ. ಇದನ್ನು ಗಂಬೀರವಾಗಿ ತೆಗೆದುಕೊಂಡಿರುವ ಬಿಜೆಪಿ ನಾಯಕರು, ಈ ಹಿಂದೆಯೂ ಸೋಲುವ ಮತ್ತು ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು.

ಈಗಿನ ಲೆಕ್ಕಾಚಾರದಲ್ಲಿ ಬಿಜೆಪಿ 100 ಗಡಿ ದಾಟುವ ಸಾಧ್ಯತೆಗಳು ಇಲ್ಲದಿರುವುದರಿಂದ ಹೊಸ ಮುಖಗಳಿಗೆ ಮಣೆ ಹಾಕುವುದು ಅನಿವಾರ್ಯವಾಗಿದೆ. ಸಂಘ ಪರಿವಾರದ ನಿಷ್ಟೆ, ಆರ್‍ಎಸ್‍ಎಸ್ ಹಿನ್ನೆಲೆ, ಮತದಾರರ ಜತೆ ಹೊಂದಿರುವ ಸಂಪರ್ಕ, ಕ್ಷೇತ್ರದಲ್ಲಿ ಅಭ್ಯರ್ಥಿ ಬಗ್ಗೆ ಇರುವ ಅಭಿಪ್ರಾಯ ಇವೆಲ್ಲವನ್ನು ಗಮನಿಸಿಯೇ ಅಭ್ಯರ್ಥಿ ಆಯ್ಕೆ ನಡೆಯಲಿದೆ.

ಹಲವರಿಗೆ ಕೋಕ್: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅನೇಕ ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವುದು ಬಹುತೇಕ ಖಾತ್ರಿಯಾಗಿದೆ. ಕೋವಿಡ್‍ನಿಂದ ಹಿಡಿದು ಇತ್ತೀಚೆಗೆ ಉಂಟಾದ ನೆರೆ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವಲ್ಲಿ ವಿಫಲರಾಗಿರುವುದು, ಸ್ಥಾನಮಾನಕ್ಕಾಗಿಯೇ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವುದು ಸೇರಿದಂತೆ ಹಲವು ಕಾರಣಗಳಿಂದ ಟಿಕೆಟ್ ಕೈ ತಪ್ಪಲಿದೆ ಎನ್ನಲಾಗುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರಿಂದ ಮೂವರು, ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳ ಶಾಸಕರಿಗೆ ಟಿಕೆಟ್ ತಪ್ಪಿಸಿ ಹೊಸ ಮುಖಗಳನ್ನು ಕಣಕ್ಕಿಳಿಸಲು ಚಿಂತನೆ ನಡೆದಿದೆ.
ಈಗಾಗಲೇ ಕೆಲವರಿಗೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆಯೂ ಪರೋಕ್ಷ ಸಂದೇಶವನ್ನು ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹದಿನೆಂಟು ವಿಧಾನಸಭೆ ಕ್ಷೇತ್ರಗಳಿರುವ ಬೆಳಗಾವಿಯಲ್ಲಿ ಬಿಜೆಪಿಯ ಶಾಸಕರು ಮತ್ತು ಪ್ರಭಾವಿ ನಾಯಕರುಗಳಿದ್ದು, ಇವರಲ್ಲಿ ಕೆಲವರಿಗೆ 2023ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸುವ ಸಾಧ್ಯತೆಗಳು ದಟ್ಟವಾಗಿವೆ. ಹಲವು ಪ್ರಭಾವಿಗಳು ಮುಂಬರುವ ಚುನಾವಣೆಯಲ್ಲಿ ಹಿನ್ನಡೆಯಾಗುವ ಸಾಧ್ಯೆತೆಯಿದೆ ಎಂದು ಆಂತರಿಕ ಸಮೀಕ್ಷೆ ವರದಿ ಮಾಡಿದೆ.

ಬೆಳಗಾವಿಯ 14 ಸ್ಥಾನಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಂಡಿದೆ. ಮುಂದೆಯು ಕೂಡ ಈ ಸ್ಥಾನಗಳನ್ನು ಉಳಿಸಿಕೊಂಡು ಹೋಗಲು ಬಿಜೆಪಿ ಬಯಸಿದೆ. ಒಂದು ವೇಳೆ ನಾಯಕರಿಗೆ ಟಿಕೆಟ್ ನಿರಾಕರಿಸಿದರೇ ಪಕ್ಷದಲ್ಲಿ ಬಂಡಾಯಕ್ಕೆ ಕಾರಣವಾಗಬಹುದು ಎಂದು ಮೂಲಗಳು ತಿಳಿಸಿವೆ.

ಅನಿಲ್ ಬೆನಕೆ ಪ್ರತಿನಿಧಿಸುವ ಬೆಳಗಾವಿ ಉತ್ತರ, ಮಹದೇವಪ್ಪ ಯಾದವಾಡ ಪ್ರತಿನಿಧಿಸುವ ರಾಮದುರ್ಗ, ಮಹಾಂತೇಶ ದೊಡ್ಡಗೌಡರ್ ಪ್ರತಿನಿಧಿಸುವ ಕಿತ್ತೂರು ಕ್ಷೇತ್ರಗಳತ್ತ ಪಕ್ಷ ಗಂಭೀರವಾಗಿ ಗಮನ ಕೇಂದ್ರೀಕರಿಸಿದೆ.

ಈ ಮೂವರೂ ಚುನಾವಣೆಯಲ್ಲಿ ಸೋಲನುಭವಿಸಬಹುದೆಂಬ ಆತಂಕ ಬಿಜೆಪಿ ನಾಯಕರಿಗೆ ಎದುರಾಗಿದೆ. ಪರಿಸ್ಥಿತಿ ಸರಿಪಡಿಸಲು ಈಗಾಗಲೇ ಪರ್ಯಾಯಗಳ ಕೆಲಸ ಆರಂಭಿಸಿದೆ. ಒಂದು ವೇಳೆ ಅವಶ್ಯಕತೆ ಬಂದರೆ ಹೊಸ ಮುಖಗಳನ್ನು ಕಣಕ್ಕಿಳಿಸಲು ಕಮಲ ನಾಯಕರು ಹಿಂಜರಿಯುವುದಿಲ್ಲ, ಆದರೆ, ಈ ಮೂರು ಕ್ಷೇತ್ರಗಳಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಲು ಕಾರಣವಾಗುವ ಅಂಶಗಳ ಬಗ್ಗೆ ನಾಯಕತ್ವವು ಇನ್ನೂ ಅಧ್ಯಯನ ಮಾಡಿಲ್ಲ ಎಂದು ಮೂಲಗಳು ತಿಳಿಸಿವೆ.

ವೃತ್ತಿಯಲ್ಲಿ ವಕೀಲರಾಗಿರುವ ಅನಿಲ್ ಬೆನಕೆ ಬೆಳಗಾವಿಯಲ್ಲಿ ಜನಪ್ರಿಯರಾಗಿದ್ದಾರೆ. ಆದರೆ, ಕಳೆದ ಲೋಕಸಭೆ ಮತ್ತು ಇತ್ತೀಚಿನ ವಿಧಾನಪರಿಷತ್ ಚುನಾವಣೆಗಳಲ್ಲಿ ಕಡಿಮೆ ಮತಗಳಿಕೆಯ ಬಗ್ಗೆ ಪಕ್ಷವು ಚಿಂತಿಸಿದೆ. ಪಕ್ಷದ ಚಟುವಟಿಕೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ನಾಯಕರನ್ನು ಚಿಂತೆಗೀಡುಮಾಡಿದೆ ಎಂದು ಮೂಲಗಳು ತಿಳಿಸಿವೆ.

ಎರಡು ಬಾರಿ ಶಾಸಕರಾಗಿರುವ ಮಹದೇವಪ್ಪ ಯಡವಾಡ ಅವರಿಗೆ 70 ವರ್ಷ ವಯಸ್ಸಾಗಿದ್ದು, ತಮ್ಮ ಕ್ಷೇತ್ರದಲ್ಲಿ ಪಕ್ಷದ ಸಂಘಟನೆಯ ಬಗ್ಗೆ ಸಾಕಷ್ಟು ಗಂಭೀರವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೊ ಪಕ್ಷದ ಕಾರ್ಯಕರ್ತರಿಗೂ ಅವರ ಬಗ್ಗೆ ಸಂತಸವಿಲ್ಲ ಮತ್ತು ಅವರು ನಿರೀಕ್ಷಿಸಿದಷ್ಟು ಕ್ರಿಯಾಶೀಲರಾಗಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಶಾಸಕ ಮಹಾಂತೇಶ್ ದೊಡ್ಡಗೌಡರ ಬಗ್ಗೆಯೂ ಅಸಮಾಧಾನವಿದ್ದು. ಅವರು ಸಂಘ ಪರಿವಾರ ಅಥವಾ ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ. ಹೊಸ ಮುಖಗಳು ಚುನಾವಣಾ ಭವಿಷ್ಯವನ್ನು ಹೆಚ್ಚಿಸಬಹುದು ಎಂದು ಪಕ್ಷದ ನಾಯಕತ್ವ ಭಾವಿಸಿದರೆ ಬೆಳಗಾವಿಯ ಇತರ ಕೆಲವು ಬಿಜೆಪಿ ಶಾಸಕರನ್ನು ಸಹ ನಿರ್ಲಕ್ಷಿಸಬಹುದು ಎಂದು ಹೇಳಲಾಗಿದೆ.

Articles You Might Like

Share This Article