ಧರ್ಮನಿಂದನೆ ಮಾಡಿದ ಬಿಜೆಪಿ ಶಾಸಕ ಅರೆಸ್ಟ್

Social Share

ಹೈದರಾಬಾದ್, ಆ.23- ಪ್ರವಾದಿ ಅವರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪಕ್ಕಾಗಿ ಹೈದರಾಬಾದ್ ಪೊಲೀಸರು ಬಿಜೆಪಿ ಶಾಸಕ ಟಿ.ರಾಜಾಸಿಂಗ್‍ರನ್ನು ಬಂಧಿಸಿದ್ದಾರೆ. ತೆಲಂಗಾಣದ ಹೈದರಾಬಾದ್‍ನಲ್ಲಿ ಕಳೆದ ವಾರ ಹಾಸ್ಯ ಕಲಾವಿದ ಮುನಾವರ್ ಫಾರುಕಿ ಅವರ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿತ್ತು.

ಫಾರುಕಿ ಅವರ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಶಾಸಕ ರಾಜಾಸಿಂಗ್ ಬೆದರಿಕೆ ಹಾಕಿದ್ದರು, ಇಲ್ಲವಾದರೆ ಸ್ಥಳಕ್ಕೆ ತೆರಳಿ ಅಡ್ಡಿ ಪಡಿಸುವ ಬೆದರಿಕೆ ಒಡ್ಡಿದ್ದರು. ಇದರಿಂದ ಅವರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು. ಅಷ್ಟಕ್ಕೆ ಸುಮ್ಮನಾಗದ ರಾಜಾಸಿಂಗ್ ವಿಡಿಯೋ ಮಾಡಿ ಫಾರುಕಿಯನ್ನು ಟೀಕಿಸುವ ಭರದಲ್ಲಿ ಪ್ರವಾದಿ ಅವರ ಕುರಿತು ಅಪಹಾಸ್ಯ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗಿದೆ.

ನಿನ್ನೆ ಸಂಜೆ ಹೈದರಾಬಾದ್‍ನಾದ್ಯಂತ ಹಲವು ಕಡೆಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ದೂರುಗಳು ಸಲ್ಲಿಕೆಯಾಗಿದ್ದವು. ಹೈದರಾಬಾದ್ ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆಗಳು ನಡೆದಿದ್ದವು.

ಇದನ್ನು ಆಧರಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿ ಪ್ರಕರಣ ದಾಖಲಿಸಲಾಗಿದ್ದು, ಇಂದು ಬೆಳಗ್ಗೆ ಶಾಸಕರನ್ನು ಬಂಧಿಸಲಾಗಿದೆ. ವಿಡಿಯೋದಲ್ಲಿ ಮಾತನಾಡಿದ್ದ ರಾಜಾಸಿಂಗ್, ರಾಮನನ್ನು ಪೂಜಿಸುವವರಿಗೆ ಬೆಲೆ ಇಲ್ಲವೇ. ರಾಮನ ವಿರುದ್ಧ ಕಿರುಚುವ ಮತ್ತು ಕೆಟ್ಟದನ್ನು ಮಾಡುವವರಿಗೆ ಮಾತ್ರ ಬೆಲೆಯೇ ಎಂದು ಪ್ರಶ್ನಿಸಿದ್ದಾರೆ.

Articles You Might Like

Share This Article