ದೆಹಲಿಗೆ ಬರದಂತೆ ಬಿಜೆಪಿ ಶಾಸಕರಿಗೆ ಸೂಚನೆ

Social Share

ಬೆಂಗಳೂರು,ಫೆ.6- ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಕುರಿತಾಗಿ ವರಿಷ್ಠರನ್ನು ಭೇಟಿಯಾಗಲು ಯಾವುದೇ ಶಾಸಕರು ದೆಹಲಿಗೆ ಬರಬಾರದು ಎಂದು ಬಿಜೆಪಿ ವರಿಷ್ಠರು ಶಾಸಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಾಳೆ ಸಿಎಂ ಬೊಮ್ಮಾಯಿ ಅವರು ಕೇಂದ್ರ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಲು ತೆರಳುವರು. ಅದಕ್ಕೂ ಮುನ್ನವೇ ಕೆಲವು ಶಾಸಕರು ದೆಹಲಿಯ ಗಾಡ್‍ಫಾಧರ್‍ಗಳನ್ನು ಭೇಟಿಯಾಗಲು ಸಜ್ಜಾಗಿದ್ದರು.
ಶಾಸಕರಾದ ರಾಜುಗೌಡ ನಾಯಕ್, ಶಿವನಗೌಡ ನಾಯಕ್, ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಶಿವರಾಜ್ ಪಾಟೀಲ್, ಅಪ್ಪುಗೌಡ, ಅಪ್ಪಚ್ಚುರಂಜನ್, ಎಸ್.ಎ.ರಾಮದಾಸ್, ಎನ್.ಮಹೇಶ್ ಸೇರಿದಂತೆ ಒಂದು ಡಜನ್‍ಗೂ ಅಕ ಶಾಸಕರು ದೆಹಲಿಗೆ ಇಂದು ಸಂಜೆ ಇಲ್ಲವೇ ನಾಳೆ ತೆರಳುವ ಸಾಧ್ಯತೆ ಇತ್ತು.
ಆದರೆ ಇದಕ್ಕೆ ಬ್ರೇಕ್ ಹಾಕಿರುವ ಕೇಂದ್ರ ವರಿಷ್ಠರು, ಯಾವುದೇ ಕಾರಣಕ್ಕೂ ಅನಗತ್ಯವಾಗಿ ಶಾಸಕರು ದೆಹಲಿಗೆ ಬಾರದಂತೆ ಹುಕುಂ ಹೊರಡಿಸಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರಿಗೆ ಸಂದೇಶ ರವಾನಿಸಿರುವ ವರಿಷ್ಠರು, ಸಚಿವ ಸ್ಥಾನ ಪಡೆಯುವುದಕ್ಕಾಗಿ ಶಾಸಕರು ದೆಹಲಿಗೆ ಬರಬೇಕಾದ ಅಗತ್ಯವಿಲ್ಲ. ಲಾಬಿ, ಒತ್ತಡ, ಗಾಡ್ ಫಾದರ್‍ಗಳ ಶಿಫಾರಸ್ಸುಗಳನ್ನು ಪಕ್ಷ ಸಹಿಸುವುದಿಲ್ಲ. ಹೀಗಾಗಿ ಶಾಸಕರು ದೆಹಲಿಗೆ ಬರುವ ದುಸ್ಸಾಹಸ ಮಾಡದಂತೆ ತಾಕೀತು ಮಾಡಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಇಲ್ಲವೆ ಪುನಾರಚನೆಯನ್ನು ಸೂಕ್ತ ಸಂದರ್ಭದಲ್ಲಿ ಪಕ್ಷದ ಪ್ರಮುಖರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ. ಅನಗತ್ಯವಾಗಿ ಯಾರೊಬ್ಬರೂ ದೆಹಲಿಗೆ ಬರಬಾರದು. ಹಾಗೊಂದು ವೇಳೆ ಬಂದರೆ ಇದನ್ನು ಅಶಿಸ್ತು ಎಂದು ಪರಿಗಣಿಸುವುದಾಗಿ ಎಚ್ಚರಿಕೆಯನ್ನೂ ಸಹ ಕೊಟ್ಟಿದ್ದಾರೆ.
ಪಕ್ಷದ ಆದೇಶವನ್ನು ಉಲ್ಲಂಘಿಸಿ ಶಾಸಕರು ದೆಹಲಿಗೆ ಬಂದರೆ ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಭೇಟಿಯಾಗಲೇಬಾರದು ಎಂದು ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಪಕ್ಷದಲ್ಲಿ ಆದೇಶ ಬರುತ್ತಿದ್ದಂತೆ ದೆಹಲಿಗೆ ಹಾರಿ ಲಾಬಿ ನಡೆಸಲು ಮುಂದಾಗಿದ್ದ ಅನೇಕ ಶಾಸಕರಿಗೆ ನಿರಾಸೆಯಾಗಿದೆ.

Articles You Might Like

Share This Article