ಯತ್ನಾಳ್ ಬಾಯಿಗೆ ಬೀಗ ಹಾಕದ ವರಿಷ್ಠರು ; ನಿಷ್ಠರ ಅಸಮಾಧಾನ

ಬೆಂಗಳೂರು,ಮೇ 8- ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸಿ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿರುವ ವಿಜಯಪುರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಯಿಗೆ ಬೀಗ ಹಾಕಲು ವರಿಷ್ಠರು ಸೂಚನೆ ನೀಡದಿರುವುದಕ್ಕೆ ಬಿಜೆಪಿ ವಲಯದಲ್ಲಿ ಅಸಮಾಧಾನ ಉಂಟಾಗಿದೆ.

ಯತ್ನಾಳ್ ಇಷ್ಟು ರಾಜರೋಷವಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೂ ಕಡೆ ಪಕ್ಷ ಅವರಿಗೆ ಒಂದು ನೋಟೀಸ್ ನೀಡದಿರುವಷ್ಟು ಪಕ್ಷ ದುರ್ಬಲವಾಗಿದಿಯೇ ಎಂದು ಅನೇಕ ಶಾಸಕರು ಮಾತನಾಡಿ ಕೊಳ್ಳುತ್ತಿದ್ದಾರೆ. ಯತ್ನಾಳ್ ಹೇಳಿಕೆಯ ಹಿಂದೆ ಕರ್ನಾಟಕವನ್ನುಪ್ರತಿನಿಧಿ ಸುವ ದೆಹಲಿಯ ಪ್ರಭಾವಿ ನಾಯಕರ ಕುಮ್ಮಕ್ಕಿನಿಂದಲೇ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂಬ ಗುಮಾನಿ ಕೂಡ ಎದ್ದಿದೆ.

ನಾನಾ ಆರೋಪ ವಿಚಾರಗಳನ್ನಿಟ್ಟುಕೊಂಡು ಪ್ರತಿಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದಿದ್ದು, ಅದರಿಂದ ಪಾರಾಗಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಜನರ ವಿಶ್ವಾಸ ಗಳಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಈ ಹೊತ್ತಿನಲ್ಲೇ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಿಜೆಪಿ ನಾಯಕರಿಗೆ ಇರುಸು ಮುರುಸು ಉಂಟು ಮಾಡಿದ್ದು, ಅವರ ವಿರುದ್ಧ ಶಿಸ್ತು ಕ್ರಮದ ಮಾತು ಕೇಳಿಬರಲಾರಂಭಿಸಿದೆ.

ನಾಯಕತ್ವ, ಸಂಪುಟ ವಿಸ್ತರಣೆ- ಪುನಾರಚನೆ, ನಾನಾ ಇಲಾಖೆ ನೇಮಕಾತಿ ವಿಚಾರವಾಗಿ ಹೇಳಿಕೆಗಳ ಮೂಲಕವೇ ಚರ್ಚೆಯಲ್ಲಿರುವ ಯತ್ನಾಳ್ ಅವರ ಇತ್ತೀಚಿನ ಹೇಳಿಕೆ ಬಗ್ಗೆ ಪಕ್ಷದ ವಲಯದಲ್ಲಿ ಮಾತ್ರವಲ್ಲದೆ, ರಾಜಕೀಯ ವಲಯದಲ್ಲೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಯತ್ನಾಳ್ ಇಂತಹ ವಿವಾದಾತ್ಮಕ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಹೇಳಿಕೆ ಕೊಡುತ್ತಿರುವುದು ಇದೇ ಮೊದಲೇನಲ್ಲ. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಯತ್ನಾಳ್ ನಿರಂತರವಾಗಿ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುದ್ಧ ಹೇಳಿಕೆ ನೀಡುತ್ತಿದ್ದರೆ.

ಆರಂಭದಲ್ಲಿ ಪರೋಕ್ಷವಾಗಿ ಹೇಳಿಕೆ ಕೊಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕುತ್ತಿದ್ದ ಅವರು ನಂತರದಲ್ಲಿ ಬಹಿರಂಗವಾಗಿಯೇ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಲಾರಂಭಿಸಿದರು. ಅಂದು ಮುಖ್ಯಮಂತ್ರಿಯಾಗಿದ್ದ ಬಿಎಸ್‍ವೈ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಯತ್ನಾಳ್ ನಡೆ ಪಕ್ಷಕ್ಕೆ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡಿತ್ತು. ಈ ಸಂದರ್ಭದಲ್ಲಿ ಯತ್ನಾಳ್ ವಿರುದ್ಧ ನೋಟಿಸ್ ನೀಡಲು ವರಿಷ್ಠರು ಹಿಂದೇಟು ಹಾಕುತ್ತಿದ್ದರು.

ಒಂದು ಕಡೆಯಲ್ಲಿ ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಹೋರಾಟದ ಎಚ್ಚರಿಕೆ ನೀಡುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿಕೊಂಡೇ ಪಕ್ಷದ ಶಿಸ್ತನ್ನೆಲ್ಲಾ ಉಲ್ಲಂಘಿಸಲಾರಂಭಿಸಿದ್ದಾರೆ.

ರಾಜ್ಯದ ಸಮಗ್ರ ಅಭಿವೃದ್ಧಿ ಜತೆಗೆ ಪಕ್ಷ ಬಲವರ್ಧನೆ ದೃಷ್ಟಿಯಿಂದ ಪಕ್ಷ ಆಯ್ದ ಮಂದಿಗೆ ಸಂಪುಟದಲ್ಲಿ ಅವಕಾಶ ನೀಡಿದೆ. ಅರ್ಹತೆಯಿದ್ದು, ಸಚಿವ ಸ್ಥಾನ ಸಿಗದವರು ಇರಬಹುದು. ಹಾಗೆಂದು ಯಾರೊಬ್ಬರು ಪಕ್ಷ, ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ಅವರ ಅಸಂಬದ್ಧ ಹೇಳಿಕೆಗಳಿಂದ ಮುಜುಗರವಾಗುತ್ತಿದೆ ಎಂದು ಪಕ್ಷದ ಪ್ರಮುಖರೊಬ್ಬರು ಬೇಸರ ವ್ಯಕ್ತಪಡಿಸಿದರು.

ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಆಧಾರರಹಿತ ಆರೋಪಗಳನ್ನು ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಮಾಡುವುದು ಸರಿಯಲ್ಲ. ಇದರಿಂದ ಪಕ್ಷ, ಸರಕಾರದ ವರ್ಚಸ್ಸಿಗೆ ಹಾನಿಯಾಗುತ್ತದೆ. ಹಾಗಾಗಿ ಆಧಾರ ರಹಿತ ಹೇಳಿಕೆ ನೀಡದಂತೆ ಯತ್ನಾಳ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಪಕ್ಷದ ನಾಯಕರ ಮೇಲೆ ಒತ್ತಡ ಹೆಚ್ಚಾಗುತ್ತಿದೆ ಎಂದು ಹೇಳಿದರು.

ಪ್ರತಿಪಕ್ಷಗಳಂತೆ ಯತ್ನಾಳ್ ಅವರು ಗಾಳಿಯಲ್ಲಿ ಗುಂಡು ಹೊಡೆಯುವಂತಹ ಹೇಳಿಕೆ ನೀಡುತ್ತಿರುವುದು ಬೇಸರ ತಂದಿದೆ. ಇಂತಹ ಹೇಳಿಕೆಗಳಿಂದ ಪಕ್ಷಕ್ಕೆ ಖಂಡಿತ ಮುಜುಗರಾಗುತ್ತದೆ. ಇಂತಹ ವರ್ತನೆಯನ್ನು ಪಕ್ಷ ಸಹಿಸುವುದಿಲ್ಲ. ಅವರ ಹೇಳಿಕೆಯ ಪೂರ್ಣ ಸಾರಾಂಶ ಪರಿಶೀಲಿಸಿ ಮುಂದಿನ ಕ್ರಮಗಳ ಬಗ್ಗೆ ಪರಿಶೀಲಿಸಲಾಗುವುದು. ಸಾಮಾನ್ಯವಾಗಿ ಇಂತಹ ಹೇಳಿಕೆಗಳನ್ನು ಪಕ್ಷದ ವರಿಷ್ಠರು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮದ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ರಾಜ್ಯ ಬಿಜೆಪಿ ಪದಾಕಾರಿಯೊಬ್ಬರು ತಿಳಿಸಿದ್ದಾರೆ.

ಇಷ್ಟೇ ಅಲ್ಲ ವಿಧಾನಮಂಡಲ ಅವೇಶನದ ಸಂದರ್ಭದಲ್ಲೂ ಸದನದಲ್ಲಿ ಸರ್ಕಾರದ ವಿರುದ್ಧ ಪರೋಕ್ಷವಾಗಿ ಸಿಡಿದೆದ್ದ ಹಲವು ಉದಾಹರಣೆಗಳು ಇವೆ. ಹೀಗಿದ್ದರೂ ಅವರ ವಿರುದ್ಧ ಯಾವುದೇ ಕ್ರಮವನ್ನು ಹೈಕಮಾಂಡ್ ಜರಗಿಸುವುದಾಗಲಿ ಮಾಡಿಲ್ಲ. ಅಥವಾ ಪಕ್ಷದ ಶಿಸ್ತನ್ನು ಮೀರಿ ನಡೆದುಕೊಳ್ಳದಂತೆ ಎಚ್ಚರಿಕೆ ನೀಡಿಲ್ಲ.

ಇದೀಗ ಮತ್ತೆ ರಾಜ್ಯದಲ್ಲಿ ಸಿಎಂ ಸ್ಥಾನ 2,500 ಕೋಟಿಗೆ ಮಾರಾಟಕ್ಕಿದೆ ಎಂಬ ಅರ್ಥದ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಮತ್ತೆ ಮುಜುಗರ ಉಂಟು ಮಾಡಿದ್ದಾರೆ. ಸದ್ಯ ಚುನಾವಣೆ ಹತ್ತಿರ ಇರುವ ಈ ಸಂದರ್ಭದಲ್ಲಿ ಯತ್ನಾಳ್ ಈ ಹೇಳಿಕೆ ವಿರೋಧ ಪಕ್ಷಗಳಿಗೂ ಅಸ್ತ್ರವಾಗಿ ದೊರಕಿದೆ. ಯತ್ನಾಳ್ ವಶಕ್ಕೆ ಪಡೆದುಕೊಂಡು ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಆಗ್ರಹವನ್ನು ವಿರೋಧ ಪಕ್ಷದ ಮುಖಂಡರು ಮಾಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ಮತ್ತೆ ಯತ್ನಾಳ್‍ಗೆ ನೋಟಿಸ್ ನೀಡುವ ವಿಚಾರ ಮುನ್ನಲೆಗೆ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ ಈ ಬಾರಿಯೂ ಕೇವಲ ನೋಟಿಸ್ ನೀಡಿ ಕೈತೊಳೆದುಕೊಳ್ಳುತ್ತಾರಾ? ಅಥವಾ ನಿರ್ದಿಷ್ಟವಾದ ಕ್ರಮ ಅವರ ವಿರುದ್ಧ ಜರಗುತ್ತಾ? ಎಂಬುವುದು ಸದ್ಯದ ಕುತೂಹಲ.