ಅದು ಪಾದಯಾತ್ರೆ ಅಲ್ಲ ಮೋಜು-ಮಸ್ತಿಯ ಯಾತ್ರೆ : ಯತ್ನಾಳ್ ಟೀಕೆ

Social Share

ವಿಜಯಪುರ, ಮಾ.1- ಕಾಂಗ್ರೆಸ್ ಪಾದಯಾತ್ರೆ ಮೋಜು-ಮಸ್ತಿನ ಯಾತ್ರೆಯಾಗಿದೆ. ಬೂರಿ ಭೋಜನ ಸವಿದು ಕುಣಿದು ಕುಪ್ಪಳಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಕಿಸಿದ್ದಾರೆ. ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ನಗರದ ಸುಂದರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆಯ ಗಂಭೀರತೆಯನ್ನೇ ಕಾಂಗ್ರೆಸ್ ಹಾಳು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣೆ ಘೋಷಣೆಯಾದರೆ ನಡೆಯಲಾಗದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಪಾದಯಾತ್ರೆ ಮಾಡಿಕೊಂಡು ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ. ಇದು ಜನರಿಗಾಗಿ ನಡೆಸುತ್ತಿರುವ ಪಾದಯಾತ್ರೆಯಲ್ಲ, ಅವರ ಆರೋಗ್ಯಕ್ಕಾಗಿ ನಡೆಸುತ್ತಿರುವ ಯಾತ್ರೆ ಎಂದು ಹೇಳಿದರು.
ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟು ಕೊಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೇಕೆದಾಟು ಪಾದಯಾತ್ರೆ ಮರು ಆರಂಭಿಸಿದ್ದಾರೆ. ಅವರ ಉದ್ದೇಶ ಈಡೇರುವುದಿಲ್ಲ ಎಂದು ಹೇಳಿದರು.
ವಿಜಯಪುರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಂಜೂರಾತಿಗಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿ ಈ ಭಾಗದ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ಜಿಲ್ಲೆಯ ತೋಟಗಾರಿಕೆ ಬೆಳೆಗಳಿಗೆ ಹಾಗೂ ಸಮಗ್ರ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ನೀಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು. ಕೇಂದ್ರಕ್ಕೆ ಮೆಚ್ಚುಗೆ: ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆ ಸಂಬಂಧ ಕೇಂದ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ.
ಪ್ರಧಾನಿ ಮೋದಿ ಎಲ್ಲ ದೇಶದವರ ಜತೆ ಉತ್ತಮ ಸಂಬಂಧ ಹೊಂದಿರುವ ಕಾರಣ ಉಕ್ರೇನ್ ದೇಶದಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಸಾಧ್ಯವಾಗಿದೆ. ಅದೇ ಪಾಕಿಸ್ತಾನದ ಹೆಸರು ಹೇಳಿದರೆ ಬೇರೆ ದೇಶಗಳು ನೆರವು ನೀಡುವುದಿಲ್ಲ. ಪಾಕಿಸ್ತಾನ ಸಹ ಭಾರತದ ಹೆಸರು ಹೇಳಿ ಬದುಕುತ್ತಿದೆ ಎಂದು ಯತ್ನಾಳ್ ಹೇಳಿದರು.

Articles You Might Like

Share This Article